ಭಾರೀ ಮಳೆಗೆ ಆಂಧ್ರಪ್ರದೇಶ ತತ್ತರ – ರೈಲು ಸಂಚಾರ ಅಸ್ತವ್ಯಸ್ತ; 30ಕ್ಕೂ ಅಧಿಕ ಮಂದಿ ಸಾವು!

Public TV
2 Min Read

– ತೆಲಂಗಾಣದ ಜಿಲ್ಲೆಗಳಲ್ಲಿ 19 ಸೆಂಟಿಮೀಟರ್ ಮಳೆ

ಅಮರಾವತಿ/ಹೈದರಾಬಾದ್: ಕುಂಭದ್ರೋಣ ಮಳೆ ಮತ್ತು ಪ್ರವಾಹಕ್ಕೆ ಆಂಧ್ರಪ್ರದೇಶ (Andhrapradesh) ಹಾಗೂ ತೆಲಂಗಾಣ (Telangana) ರಾಜ್ಯಗಳು ತತ್ತರಿಸಿವೆ. ನದಿಗಳು ಉಕ್ಕೇರಿವೆ. ಜಲಾಶಯಗಳಲೆಲ್ಲಾ ಭರ್ತಿ ಆಗಿದ್ದು, ಅಪಾರ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ.

ವಿಜಯವಾಡದಲ್ಲಿ ಪ್ರವಾಹದ ತೀವ್ರತೆ ಕಡಿಮೆ ಆಗಿದ್ದರೂ ತಗ್ಗುಪ್ರದೇಶಗಳಲ್ಲಿ ಪರಿಸ್ಥಿತಿ ದಯನೀಯವಾಗಿದೆ. 130ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಲದಿಗ್ಬಂಧನ ಏರ್ಪಟ್ಟಿದ್ದು, ಬೋಟ್‌ಗಳ ಮೂಲಕ ಸಂತ್ರಸ್ತರ ರಕ್ಷಣಾ ಕಾರ್ಯ ನಡೆದಿದೆ. 2.26 ಲಕ್ಷಕ್ಕೂ ಹೆಚ್ಚು ಜನ ಸಂತ್ರಸ್ತರಾಗಿದ್ದಾರೆ. ಈವರೆಗೂ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೈಕ್‌ನಲ್ಲಿ ಬಂದು ಪುಣೆ ಮಾಜಿ ಕಾರ್ಪೋರೇಟರ್ ಕೊಂದ್ರು – 10 ಆರೋಪಿಗಳ ಮೇಲೆ ಎಫ್‌ಐಆರ್

ಮೆಹಬೂಬಾಬಾದ್ ಬಳಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ವಾಹನದಿಂದ ಒಂದೇ ಕುಟುಂಬದ 9 ಮಂದಿಯನ್ನು ರಕ್ಷಿಸಲಾಗಿದೆ. ರಾಯಪಾಡಿ ಎಂಬಲ್ಲಿ 300ಕ್ಕೂ ಹೆಚ್ಚು ಹಸುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಕೈಕೊಟ್ಟಿದೆ. ಹೆದ್ದಾರಿಗಳು ಕೂಡ ಸಂಪೂರ್ಣವಾಗಿ ಪ್ರವಾಹದಿಂದ ಮುಕ್ತವಾಗಲಿಲ್ಲ. ಇನ್ನು, ರೈಲ್ವೇ ಸೇವೆಗಳಲ್ಲಿ ಭಾರೀ ವ್ಯತ್ಯಯ ಆಗಿದೆ. ದಕ್ಷಿಣ ಮಧ್ಯೆ ರೈಲ್ವೇ ವಿಭಾಗದಲ್ಲಿ 432 ರೈಲುಗಳು (Train) ರದ್ದಾಗಿವೆ. 140 ರೈಲುಗಳ ಮಾರ್ಗ ಬದಲಿಸಲಾಗಿದೆ. ಸಿಎಂ ಚಂದ್ರಬಾಬು ನಾಯ್ಡು ಬೆಳಗ್ಗೆ ನಾಲ್ಕು ಗಂಟೆ ತನಕ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಂಚರಿಸಿದರು. ಇದನ್ನೂ ಓದಿ: ಅಮೆರಿಕದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆಯಲ್ಲಿ ಶ್ರಾವಣ ಅಮಾವಾಸ್ಯೆ ಆಚರಣೆ

ಕಲ್ಯಾಣ ಕರ್ನಾಟಕ (Karnataka) ಜಿಲ್ಲೆಗಳಲ್ಲಿ ಮಳೆಯಾರ್ಭಟ ಜೋರಾಗಿದೆ. ಸತತ ಮಳೆಯಿಂದ ಚಿತ್ತಾಪುರದ ಆಲ್ಲೂರು ಬಿ ಗ್ರಾಮದ ಮನೆಯೊಂದರ ಮೇಲೆ ಬೃಹತ್ ಬಂಡೆ ಉರುಳಿ ಬಿದ್ದಿದೆ. ಮನೆ ಭಾಗಶಃ ಧ್ವಂಸಗೊಂಡಿದ್ದು, ಓರ್ವ ಬಾಲಕ ಗಾಯಗೊಂಡಿದ್ದಾನೆ. ಕಾಗಿಣಾ ನದಿ ಅಪಾಯದ ಮಟ್ಟ ಹೆಚ್ಚಾಗಿದೆ. ಚಿತ್ತಾಪುರದ ದಂಡೋತಿ ಸೇತುವೆ, ಸಂಗಾವಿ ಸೇತುವೆ ಮುಳುಗಡೆಯಾಗಿವೆ.

ಚಿಂಚೋಳಿಯ ಗಾರಂಪಳ್ಳಿ ಬಳಿಯ ಹಳ್ಳದಲ್ಲಿ ಕುರಿಗಾಯಿಗಳು ಕುರಿ ಹಿಂಡನ್ನು ದಾಟಿಸಿದ್ದಾರೆ. ಯಾದಗಿರಿಯ ಮೋಟ್ನಳ್ಳಿ ಗ್ರಾಮ ಜಲಾವೃತವಾಗಿದೆ. ಚಿಂತನಪಲ್ಲಿ ಜಲಪಾತ ಉಕ್ಕಿ ಹರಿದಿದ್ದು, ಗುರುಮಠಕಲ್‌ನ ನಂದೇಪಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ತುಂಗಭದ್ರಾ ಡ್ಯಾಂ ಒಳಹರಿವು ಹೆಚ್ಚಾಗಿದೆ. ಟಿಬಿ ಡ್ಯಾಂನಲ್ಲಿ 98 ಟಿಎಂಸಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ: ರಾತ್ರಿ ತರಬೇತಿ ಕಾರ್ಯಾಚರಣೆ ವೇಳೆ ವಾಯುಪಡೆಯ MiG-29 ಫೈಟರ್ ಜೆಟ್ ಪತನ – ಪೈಲಟ್‌ ಸೇಫ್‌

Share This Article