ಶೀಘ್ರದಲ್ಲೇ ಬರಲಿದೆ ‘ಅಂದವಾದ’ ಟ್ರೇಲರ್

Public TV
1 Min Read

ಬೆಂಗಳೂರು: ಯುವ ನಿರ್ದೇಶಕ ಚಲ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಚಿತ್ರ ಅಂದವಾದ. ಮಳೆಗಾಲದಲ್ಲಿ ನಡೆಯುವ ಬೆಚ್ಚಗಿನ ಪ್ರೇಮಕಥಾನಕವನ್ನು ಒಳಗೊಂಡಿದೆ. ಈಗಾಗಲೇ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗಿದೆ. ಈ ಚಿತ್ರದ ಟ್ರೇಲರ್ ಇದೇ ತಿಂಗಳು ಬಿಡುಗಡೆಯಾಗಲಿದೆ.

ಚಿತ್ರವನ್ನು ಮುಂದಿನ ತಿಂಗಳು ತೆರೆಗೆ ತರುವ ಯೋಜನೆ ಚಿತ್ರತಂಡದ್ದಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಗೆ ಸಿಕ್ಕ ಅದ್ಭುತವಾದ ಪ್ರತಿಕ್ರಿಯೆ ಚಿತ್ರತಂಡಕ್ಕೆ ಹೆಚ್ಚಿನ ಉತ್ಸಾಹ ನೀಡಿದೆ. ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಇಡೀ ಚಿತ್ರವನ್ನು ಮಾನ್ಸೂನ್ ಹಿನ್ನೆಲೆಯಲ್ಲಿ ಕಟ್ಟಿಕೊಂಡಿರುವ ನಿರ್ದೇಶಕರು ಮಳೆಗಾಲದಲ್ಲೇ ಅತಿಹೆಚ್ಚು ಭಾಗದ ಚಿತ್ರೀಕರಣ ನಡೆಸಿದ್ದಾರೆ. ಸಂಗೀತಮಯ ಪ್ರೇಮಕಥಾ ಹಂದರವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಲ್ಲವೂ ಈಗಾಗಲೇ ಹಿಟ್ ಆಗಿವೆ. ನಗಿಸುತ್ತಲೇ, ಕಣ್ಣಾಲಿಗಳನ್ನು ತೇವಗೊಳಿಸುವಂತಹ ಹಾಗೂ ಕಾಡುವ ಕತೆ ಈ ಚಿತ್ರದ್ದಾಗಿದೆ.

ಮಧುಶ್ರೀ ಗೋಲ್ಡ್ ಫ್ರೇಮ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಡಿ.ಆರ್. ಮಧು ಜಿ ರಾಜ್ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿಕ್ರಮ್ ವರ್ಮನ್ ಸಂಗೀತ, ಗುರುಕಿರಣ್ ಹಿನ್ನೆಲೆ ಸಂಗೀತ, ಹರೀಶ್ ಎನ್ ಸೊಂಡೇಕೊಪ್ಪ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಮುರಳಿ ನೃತ್ಯ ನಿರ್ದೇಶನ, ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ಹೃದಯ ಶಿವ ಗೀತ ಸಾಹಿತ್ಯ, ಮೋಹನ್ ಬಿ. ಕೆರೆ ಕಲಾ ನಿರ್ದೇಶನವಿದೆ. ಜೈ, ಅನುಷಾ ರಂಗನಾಥ್, ಹರೀಶ್ ರೈ, ಕೆ.ಎಸ್. ಶ್ರೀಧರ್, ಕೆ.ವಿ. ಮಂಜಯ್ಯ, ರೇಖಾ ಸಾಗರ್, ಅಮರನಾಥ್ ಆಳ್ವ, ರೋಜಾ, ಮಂಗಳೂರು ಮೀನಾನಾಥ್ ಮುಂತಾದವರ ತಾರಾಬಳಗವಿದೆ.

Share This Article
Leave a Comment

Leave a Reply

Your email address will not be published. Required fields are marked *