ಹಿಂದೂ ಹುಡುಗಿಯ ಮೈ ಮುಟ್ಟಿದ ಕೈ ಇರಬಾರದು: ಅನಂತ್ ಕುಮಾರ್ ಹೆಗ್ಡೆ

Public TV
3 Min Read

ಮಡಿಕೇರಿ: ಜಾತಿ ವಿಷಬೀಜ ಸಮಾಜದಲ್ಲಿ ಸೇರಿಕೊಂಡ ಬಳಿಕ ನಾವು ನಿರ್ಮಾಣ ಮಾಡಿದ್ದನ್ನು ನಮ್ಮದು ಎಂದು ಹೇಳಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ನಮ್ಮ ಹಿಂದೂಗಳು ಒಗ್ಗಟ್ಟಾಗಿ ನಿಲ್ಲದೇ ಇದ್ದರೆ ಏನಾಗುತ್ತದೆ ಎಂಬುವುದನ್ನು ಇತಿಹಾಸ ನೋಡಿದರೆ ನಮಗೆ ಅರಿವಾಗುತ್ತದೆ. ಆದ್ದರಿಂದ ಜಾತಿ ಪ್ರಶ್ನೆ ಇಲ್ಲದೆ ಹಿಂದೂ ಹುಡುಗಿಯ ಕೈ ಮುಟ್ಟಿದರೆ ಆ ಕೈ ಇರಬಾರದು ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

ಮಡಿಕೇರಿಯಲ್ಲಿ ಪರಿವರ್ತನಾ ಟ್ರಸ್ಟ್, ಹಿಂದೂ ಜಾಗರಣ ವೇದಿಕೆ ಆಯೋಜನೆ ಮಾಡಿದ್ದ ಸಾಮಾಜಿಕ ಸಮರಸತಾ ಸಮಾವೇಶ, ಹಿಂದೂ ಐಕ್ಯ ಸಮ್ಮೇಳನದಲ್ಲಿ ಅನಂತ್ ಕುಮಾರ್ ಹೆಗ್ಡೆ ಮಾತನಾಡಿದರು. ಹಿಂದೂ ಸಂಘಟನೆ ಹಾಗೂ ಪ್ರಸಕ್ತ ಸಮಾಜದಲ್ಲಿ ಯುವಕರಿಗೆ ಸಲಹೆ ನೀಡಿದ ಅನಂತ್ ಕುಮಾರ್ ಹೆಗ್ಡೆ ಅವರು, ಇತಿಹಾಸ ಬರೆಯಲು ಮುಂದಾಗಬೇಕು. ಪೌರುಷ ಇದ್ದರೆ ಇತಿಹಾಸ ಬರೆಯಿರಿ. ದೇವರಿಗೆ ದುರ್ಬಲರೇ ಬೇಕಾಗಿದ್ದು, ಅದ್ದಕ್ಕೆ ಕುರಿ-ಕೋಳಿ ಬಲಿ ಕೊಡಲಾಗುತ್ತದೆ. ಆನೆ ಹುಲಿಯನ್ನು ದೇವರಿಗೆ ಬಲಿಕೊಡ್ತಾರಾ? ಆದ್ದರಿಂದ ದುರ್ಬಲರಾಗದೇ ಶೌರ್ಯ ವ್ಯಕ್ತಿಗಳಾಗಿ ಬೆಳೆಯಿರಿ. ಹಿಂದೂ ಸಮಾಜ ಒಟ್ಟಾಗಿ ನಿಲ್ಲದೇ ಇದ್ದರೆ ಮುಂದೆ ಕಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಮ್ಮನ್ನು 70 ವರ್ಷಗಳಿಂದ ಆಳ್ವಿಕೆ ನಡೆಸಿದ ಜನರು ಇದನ್ನು ಹೇಳಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದರು. ಕಣ್ಣೆದುರೆ ಇರುವ ಸತ್ಯವನ್ನು ಸುಳ್ಳು ಸುಳ್ಳು ಎಂದು ಹೇಳುವ ಮೂಲಕ ನಡೆದಿದ್ದಾರೆ. ತಾಜ್‍ಮಹಲ್ ಹಿಂದೂ ರಾಜ ನಿರ್ಮಾಣ ಮಾಡಿದ್ದರು ಅದನ್ನು ಶಹಜಹಾನ್ ನಿರ್ಮಾಣ ಮಾಡಿದ್ದ ಎಂದು ಹೇಳುತ್ತಾರೆ. ಆದರೆ ಶಹಜಹಾನ್ ತನ್ನ ಆತ್ಮ ಚರಿತ್ರೆಯಲ್ಲಿ ಇದನ್ನ ಹಿಂದೂ ರಾಜ ರಾಜಾ ಜಯಸಿಂಹನಿಂದ ಕೊಂಡು ಕೊಂಡ ಕಟ್ಟಡ ಎಂದು ಬರೆದುಕೊಂಡಿದ್ದಾನೆ. ಇದನ್ನು ತಿಳಿಯಲು ಇತಿಹಾಸವನ್ನು ಓದಬೇಕಾಗುತ್ತದೆ. ದೆಹಲಿಯ ಕುತುಬ್ ಮಿನಾರ್ ನನ್ನು ಮುಸ್ಲಿಂ ರಾಜ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಭಾರತ ಪ್ರಾಚ್ಯ ವಸ್ತು ಇಲಾಖೆ ಅದು ಜೈನರ 24 ನಕ್ಷತ್ರಗಳ ದೇವಾಲಯವಾಗಿತ್ತು, ಇದನ್ನು ಮುಸ್ಲಿಂ ದಾಳಿ ಕೋರರು ನಾಶ ಮಾಡಿದ್ದರು ಎಂದು ಬೋರ್ಡ್ ಹಾಕಿದೆ. ಈ ಬೋರ್ಡ್ ಮೋದಿ ಸರ್ಕಾರ ಬಂದ ಮೇಲೆ ಹಾಕಿದ್ದಲ್ಲ. ಹೀಗೆ ನಮ್ಮ ಸಮಾಜದ ಗುರುತನ್ನು ಅಳಿಸಿ ಹಾಕುವ ಪ್ರಯತ್ನಗಳು ನಡೆದುಕೊಂಡು ಬಂದಿದೆ ಎಂದು ಕಿಡಿಕಾರಿದರು.

ಮತ್ತೊಮ್ಮೆ ಈ ಸಮಾಜವನ್ನು ಒಗ್ಗಟ್ಟಾಗಿ ಮಾಡಿ ಎದ್ದು ನಿಲ್ಲುವಂತೆ ಮಾಡಲು ಪ್ರಯತ್ನ ಮಾಡಿದರ ಫಲವೇ ಇಂದಿನ ಕಾರ್ಯಕ್ರಮಗಳು. ಆದ್ದರಿಂದ ನೀವು ಇತಿಹಾಸವನ್ನು ಬರೆಯಲು ಆರಂಭಿಸಿ ಎಂದರು. ಶಿವ ಅಂದರೆ ಲಿಂಗ, ಜಡೆ ತಲೆ ಮೇಲೆ ಗಂಗೆ ಇರುವವನು ಎಂಬುವುದಲ್ಲ, ಸೃಷ್ಟಿಯ ಧನಾತ್ಮಕ ಶಕ್ತಿಗೆ ಶಿವ ಎಂದು ಕರೆಯುತ್ತಾರೆ. ಆದರೆ ಶಿವನಿಗೆ ಯಾವುದೇ ಆಕಾರ ಇಲ್ಲ, ಆಕಾರಗಳಿಲ್ಲದ್ದೇ ಶಿವ ಎಂದು ತಿಳಿಸಿದರು. ಅಲ್ಲದೇ ಶಬರಿಮಲೆಗೆ ಪ್ರವೇಶಿಸಿದ ಮಹಿಳೆಯರು ಕೊಡಗಿನಲ್ಲಿದ್ದ ವಿಚಾರ ಪ್ರಸ್ತಾಪಿಸಿ, ಕೊಡಗಿನಲ್ಲಿ ನಡೆಯುವ ಸಮಾಜಘಾತುಕ ಚಟುವಟಿಕೆ ಗಮನಿಸಿ. ಎಷ್ಟು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ. ಇದರಿಂದ ಶಬರಿಮಲೆಯ 95 ಕೋಟಿ ರೂ. ಕಾಣಿಕೆ ಕಡಿಮೆ ಆಗಿದೆ. ಅಲ್ಲದೇ ಶೇ.36 ರಷ್ಟು ಪ್ರವಾಸಿಗರು ಈ ಬಾರಿ ಕಡಿಮೆ ಆಗಿದ್ದಾರೆ. ಆದ್ದರಿಂದ ಮನೆಮುರುಕರು ಕೊಡಗು ಪ್ರವೇಶಿಸಿದರೆ ಮಣ್ಣಲ್ಲಿ ಮಣ್ಣಾಗಿಸಿ. ಕಮ್ಯುನಿಸ್ಟರು ಸಮಾಜಕ್ಕೆ ಹಿಡಿದ ದೊಡ್ಡ ಗೆದ್ದಲು, ನಮಗೆ ಗೊತ್ತೇ ಇಲ್ಲದೇ ಸಮಾನತೆ, ಕ್ರಾಂತಿ, ಸ್ವಾತಂತ್ರ್ಯ ಹೆಸರಿನಲ್ಲಿ ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಕೊಡಗಿನಲ್ಲಿ ಕೊಚ್ಚಿ ಹೋಗಿರುವ ಮನೆ, ಮಸೀದಿ ನಿರ್ಮಾಣ ಮಾಡಲು ಸರ್ಕಾರ ಬರುತ್ತದೆ. ಆದರೆ ದೇವಾಲಯ ನಿರ್ಮಾಣ ಮಾಡಲು ಯಾರು ಬರುವುದಿಲ್ಲ. ಇದಕ್ಕಾಗಿಯೇ ನಾವು ಇಲ್ಲಿಗೆ ಬಂದಿದ್ದೇವೆ. ಸಮಾಜದೊಂದಿಗೆ ಸೇರಿ ನಿರ್ಮಾಣ ಮಾಡೋಣ. ಧರ್ಮದ ಕೆಲಸ ಮಾಡೋಣ ಎಂದು ಕರೆ ನೀಡಿದರು.

https://www.youtube.com/watch?v=Qixi3UPIbZQ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *