ರಸ್ತೆಯನ್ನೇ ನುಂಗುತ್ತಿರುವ ಅವೈಜ್ಞಾನಿಕವಾಗಿ ನಿರ್ಮಿಸಿದ ಕೆರೆ

Public TV
2 Min Read

ಮಡಿಕೇರಿ: ವ್ಯಕ್ತಿಯೊಬ್ಬರು ಅವೈಜ್ಞಾನಿಕವಾಗಿ ಕೆರೆ ನಿರ್ಮಿಸಿದ ಪರಿಣಾಮ ಶೌರ್ಯ ಪ್ರಶಸ್ತಿಯನ್ನು ಪಡೆದಿದ್ದ ವಿದ್ಯಾರ್ಥಿನಿಯ ಮನೆ ಸೇರಿದಂತೆ 80 ಕುಟುಂಬಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೆರೆಯೊಂದು ಗುಳುಂ ಮಾಡಲು ಹೊರಟಿದೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಿಬ್ಬೆಟ್ಟ ಗ್ರಾಮದ ರೋಹಿತ್ ಎಂಬವರು ಎರಡು ಎಕರೆ ಜಾಗದಲ್ಲಿ ಅವೈಜ್ಞಾನಿಕವಾಗಿ ಮತ್ತು ಅಕ್ರಮವಾಗಿ ನಿರ್ಮಿಸಿದ ಕೆರೆ ಈಗ ಮನೆ ಮತ್ತು ರಸ್ತೆಯನ್ನು ನುಂಗುತ್ತಿದೆ. ಇದಕ್ಕೂ ಮೊದಲು ಚೌಡ್ಲು ಗ್ರಾಮ ಪಂಚಾಯಿತಿ ಅನುದಾನ ಬಳಸಿ 2017ರಲ್ಲಿ ಪಂಚಾಯಿತಿ ಸದಸ್ಯರೊಬ್ಬರು ಕೆರೆ ನಿರ್ಮಿಸಿದ್ದರು. ಆದರೆ ಭೂಮಿಯ ಆಳದಿಂದ ತಳಪಾಯ ಹಾಕುವ ಬದಲು ಭೂಮಿ ಮೇಲಿನಿಂದಲೇ ಅಡಿಪಾಯ ಹಾಕಿ ಕಳಪೆ ಕಾಮಗಾರಿಯಿಂದ ಕೆರೆ ನಿರ್ಮಿಸಲಾಗಿತ್ತು.

ಹೀಗಾಗಿ ಸಂಗ್ರಹವಾಗಿದ್ದ ನೀರೆಲ್ಲಾ ಸಂಪೂರ್ಣ ಸೋರಿಕೆಯಾಗಿ ಮುದ್ದು ಎಂಬವರ ಮನೆಗೆ ತೀವ್ರ ಸಮಸ್ಯೆ ಎದುರಾಗಿತ್ತು. ಇದಾದ ಬಳಿಕ ತಮ್ಮ ಕಾಫಿ ಎಸ್ಟೇಟ್‍ಗೆ ಬೇಕಾಗಿದ್ದ, ಬರೋಬ್ಬರಿ 2 ಎಕರೆ ವಿಸ್ತೀರ್ಣದಲ್ಲಿ ಪಂಚಾಯಿತಿ ಒಪ್ಪಿಗೆ ಇಲ್ಲದೆ ಬೃಹತ್ ಕೆರೆ ನಿರ್ಮಿಸಿದ್ದಾರೆ. ಇದರಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದ್ದು ಶೌರ್ಯ ಪ್ರಶಸ್ತಿ ಪಡೆದಿದ್ದ ಬಾಲಕಿ ಶಾಂತಿ ಅವರ ಮನೆ ಕುಸಿದು ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ತಂದೆ ಹೃದಯಾಘಾತದಿಂದ ನಿಧನ

ಮನೆಯ ಎಲ್ಲಾ ಗೋಡೆಗಳು ಬಿರುಕು ಬಿಟ್ಟಿದ್ದು ಯಾವ ಸಂದರ್ಭದಲ್ಲಿ ಮನೆ ಕುಸಿದು ಬೀಳುತ್ತದೆಯೋ ಎನ್ನುವ ಆತಂಕದಲ್ಲಿ ಕಾಲ ಕಳೆಯಬೇಕಾಗಿದೆ ಅಂತ ಶಾಂತಿ ಅವರ ತಂದೆ ಮುದ್ದು ಆತಂಕ ವ್ಯಕ್ತಪಡಿಸಿದ್ದಾರೆ. ಕೂಲಿ ಮಾಡಿ ಬದುಕುತ್ತಿರುವ ನಮಗೆ ನಮ್ಮ ಮಕ್ಕಳಿಗಾದರೂ ಉತ್ತಮ ಶಿಕ್ಷಣ ಕೊಡಿಸೋಣ ಎಂದರೆ ಕೇವಲ ಮನೆ ಬಗ್ಗೆ ಚಿಂತಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಇನ್ನೂ ಈ ಕುರಿತು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೂ ಪತ್ರ ಬರೆಯಲಾಗಿದೆ. ಆದರೆ ಯಾರು ಈ ಭಾಗದ ಜನರಿಗೆ ನ್ಯಾಯ ಕೊಡಿಸುತ್ತಿಲ್ಲ. ಇದರಿಂದ ಏನು ಮಾಡಬೇಕೆಂಬ ದಿಕ್ಕೇ ತೋಚದಂತೆ ಆಗಿದೆ ಅಂತ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅಲ್ಲದೇ ಮುದ್ದು ಅವರ ಮನೆ ಸೇರಿದಂತೆ ಐದು ಮನೆಗಳಿಗೆ ಕೆರೆಯಿಂದ ಆಪತ್ತು ಎದುರಾಗಿದೆ. ಇನ್ನೂ ಕಿಬ್ಬೆಟ್ಟ ಗ್ರಾಮದೊಳಕ್ಕೆ ಸಂಪರ್ಕ ಕಲ್ಪಿಸಲು ಇರುವ ರಸ್ತೆಗೆ ಹೊಂದಿಕೊಂಡಂತೆ ಕೆರೆ ಇರುವುದರಿಂದ ನೀರು ಹೆಚ್ಚಿದಂತೆಲ್ಲಾ ರಸ್ತೆ ಕೆರೆಗೆ ಕುಸಿದು ಬೀಳುತ್ತಿದೆ. ಮಳೆಗಾಲ ಆರಂಭವಾಯಿತು ಅಂದರೆ, ಬಹುತೇಕ ರಸ್ತೆ ಕೆರೆಯ ಪಾಲಾಗಲಿದೆ. ಕೆರೆಯಲ್ಲಿ ಅಪಾರ ಪ್ರಮಾಣದ ನೀರಿದ್ದು ಗ್ರಾಮದ ಈ ರಸ್ತೆಯಲ್ಲಿ ಓಡಾಡುವಾಗ ಎಲ್ಲರೂ ಜೀವ ಕೈಯಲ್ಲಿ ಹಿಡಿದು ಓಡಾಡ ಬೇಕಾಗಿದೆ. ಇದನ್ನೂ ಓದಿ: ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಜನರ, ಅಧಿಕಾರಿಗಳ ಸಹಕಾರ ಮುಖ್ಯ: ವಿ.ಸೋಮಣ್ಣ

ಒಟ್ಟಿನಲ್ಲಿ ಒಂದು ವೇಳೆ ರಸ್ತೆ ಕುಸಿದು ಹೋದಲ್ಲಿ ಗ್ರಾಮಕ್ಕೆ ಸಂಪರ್ಕವೇ ಕಡಿತವಾಗಲಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ಆಗಬಹುದಾಗಿರುವ ಅನಾಹುತವನ್ನು ತಪ್ಪಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *