ಮಂಡ್ಯ ಬಸ್ ದುರಂತ ಪ್ರಕರಣ ಹೇಳುತ್ತಿದೆ ಮನಕಲಕುವ ಕಥೆ!

Public TV
1 Min Read

ಮಂಡ್ಯ: ಜಿಲ್ಲೆಯ ಬಸ್ ದುರಂತ ಪ್ರಕರಣ ಮನಕಲಕುವ ಕಥೆಯೊಂದು ಹೇಳುತ್ತಿದೆ. ಪ್ರಾಣದ ಹಂಗು ತೊರೆದು ಬಸ್‍ನೊಳಗಿದ್ದವರನ್ನು ರಕ್ಷಿಸಲು ಸ್ಥಳೀಯರು ಹರಸಾಹಸ ಪಟ್ಟ ಮೊಬೈಲ್ ವಿಡಿಯೋವೊಂದು ವೈರಲ್ ಆಗುತ್ತಿದೆ.

ನವೆಂಬರ್ 24 ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ನಾಲೆಗೆ ಬಸ್ ಉರುಳಿ 30 ಜನ ಮೃತಪಟ್ಟಿದ್ದರು. ಬಸ್ ಬಿದ್ದ ವಿಷಯ ತಿಳಿದು ರಕ್ಷಣೆಗೆ ಧಾವಿಸಿದ ಗ್ರಾಮಸ್ಥರ ಪ್ರಾರಂಭದ ವಿಡಿಯೋ ವೈರಲ್ ಆಗಿದೆ.

ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಆಗಮಿಸುವ ಮುನ್ನವೇ ಗ್ರಾಮಸ್ಥರು ನಾಲೆ ಬಳಿ ಆಗಮಿಸಿದ್ದರು. ಬಸ್‍ನಲ್ಲಿದ್ದವರನ್ನು ಉಳಿಸಲು ಪ್ರಾಣದ ಹಂಗು ತೊರೆದು ಸ್ಥಳೀಯರು ನಾಲೆಗೆ ಧುಮುಕಿದ್ದರು. ಬಸ್‍ನಲ್ಲಿದ್ದವರನ್ನು ಮೇಲೆತ್ತಲು ಸ್ಥಳೀಯರು ಹಗ್ಗವಿಲ್ಲದೆ ತಮ್ಮ ಪಂಚೆ, ವೇಲ್, ಬಟ್ಟೆಗಳನ್ನೆ ಬಿಚ್ಚಿ ಹಗ್ಗದ ರೀತಿ ಬಳಸಿದ್ದಾರೆ.

ನೀರಿನಲ್ಲಿ ಬಿದ್ದವರ ಪೂರ್ವಾಪರ ತಿಳಿಯದಿದ್ದರೂ ತಮ್ಮ ಮನೆಯವರನ್ನೇ ಕಳೆದುಕೊಂಡ ರೀತಿ ರಕ್ಷಣಾ ಕಾರ್ಯದಲ್ಲಿ ಗ್ರಾಮಸ್ಥರು ತೊಡಗಿದ್ದರು. ಅಯ್ಯೋ ಬನ್ರೋ ಮಾರಾಯ. ಹಗ್ಗ ಏನಾದ್ರು ತನ್ನಿ. ಪಂಚೆ ಎಸೆಯಿರಿ ಎಂದು ಕೂಗುತ್ತ ನಾಲೆಗೆ ಧುಮುಕಿ ಬಸ್‍ನೊಳಗಿದ್ದವರನ್ನು ಮೇಲೆತ್ತುತ್ತಿರುವ ವಿಡಿಯೋ ವೈರಲ್ ಆಗಿದೆ.

 

ಒಬ್ಬರನ್ನು ಮೇಲೆತ್ತುತ್ತಿದ್ದಂತೆ ಅಯ್ಯೋ ಎಲ್ಲ ಸತ್ತೋಗವ್ರೇ. ಮಕ್ಕಳನ್ನಾದ್ರು ಇಸ್ಕೊಳ್ಳಿ, ಅಯ್ಯಯ್ಯಪ್ಪೋ ಎಂದು ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ. ಸತ್ತವರನ್ನು ಬದುಕಿಸಲಾಗದಿದ್ರೂ, ಬದುಕಿಸಲು ಯತ್ನಿಸಿ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ.

ವೈರಲ್ ಆಗಿರೋ ವಿಡಿಯೋದಲ್ಲಿ ಗ್ರಾಮಸ್ಥರ ಮಾನವೀಯತೆ, ಬಸ್‍ನೊಳಗಿದ್ದವರನ್ನು ಮನೆ ಮಕ್ಕಳಂತೆ ರಕ್ಷಿಸಲು ಯತ್ನಿಸಿ ಮರುಗುತ್ತಿರುವುದನ್ನು ನೋಡಿ ಮಂಡ್ಯ ಜನತೆ ಭಾವುಕರಾಗುತ್ತಿದ್ದಾರೆ. ಬಸ್ ದುರಂತದಲ್ಲಿ ಓರ್ವ ಶಾಲಾ ಬಾಲಕ ರೋಹಿತ್ ಮತ್ತು ಯುವಕ ಗಿರೀಶ್ ನನ್ನು ಮಾತ್ರ ಬದುಕಿಸುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *