ಪೊಲೀಸರ ಬಂಧನದಿಂದ ಎಸ್ಕೇಪ್ ಆಗಿದ್ದ ಅಮೃತ್‌ಪಾಲ್ ಸಿಂಗ್‌ನ ಆಪ್ತ ಸಹಾಯಕ ಅರೆಸ್ಟ್

Public TV
1 Min Read

ನವದೆಹಲಿ: ಪರಾರಿಯಾಗಿರುವ ಖಲಿಸ್ತಾನಿ ಬೆಂಬಲಿಗ ಅಮೃತಪಾಲ್ ಸಿಂಗ್‌ನ ಆಪ್ತ ಸಹಾಯಕ ಪಪ್ಪಲ್ಪ್ರೀತ್ ಸಿಂಗ್‌ನನ್ನು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಸೋಮವಾರ ಬಂಧಿಸಲಾಗಿದೆ.

ಕಳೆದ ತಿಂಗಳು ಜಲಂಧರ್‌ನಲ್ಲಿ ಪೋಲೀಸರ ಬಲೆಯಿಂದ ಅಮೃತ್‌ಪಾಲ್ ಸಿಂಗ್ ಹಾಗೂ ಪಪ್ಪಲ್ಪ್ರೀತ್ ಸಿಂಗ್ ನಾಟಕೀಯವಾಗಿ ತಪ್ಪಿಸಿಕೊಂಡಿದ್ದರು. ಬಳಿಕ ಇಬ್ಬರೂ ಒಟ್ಟಿಗೆ ತಲೆಮರೆಸಿಕೊಂಡಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳಲು ಬೇರೆ ಬೇರೆ ಮಾರ್ಗಗಳನ್ನು ಕಂಡುಹಿಡಿದು ಸ್ಥಳ ಬದಲಾವಣೆ ಮಾಡುತ್ತಿದ್ದರು. ಇದೀಗ ಪಂಜಾಬ್ ಪೊಲೀಸರ ಗುಪ್ತಚರ ಘಟಕ ಪಪ್ಪಲ್ಪ್ರೀತ್ ಸಿಂಗ್‌ನನ್ನು ಬಂಧಿಸಿದೆ.

ಅಮೃತ್‌ಪಾಲ್ ಸಿಂಗ್ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ತನ್ನ ಗುರುತು ಯಾರಿಗೂ ಸಿಗದಂತೆ ವೇಷಗಳನ್ನು ಬದಲಿಸಿಕೊಂಡು, ಪಂಜಾಬ್ ಮಾತ್ರವಲ್ಲದೇ ದೆಹಲಿಯಲ್ಲಿಯೂ ತಿರುಗಾಡಿರುವುದು ಕೆಲ ದಿನಗಳ ಹಿಂದೆ ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿತ್ತು. ಆತ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡು 3 ವಾರ ಆಗಿದ್ದರೂ ಇಲ್ಲಿಯವರೆಗೆ ಅಧಿಕಾರಿಗಳಿಂದ ಆತನನ್ನು ಹಿಡಿಯಲು ಸಾಧ್ಯವಾಗಿಲ್ಲ. ಇದೀಗ ಅಮೃತ್‌ಪಾಲ್ ಸಿಂಗ್‌ನ ಪತ್ತೆಗಾಗಿ ಪಂಜಾಬ್ ಪೊಲೀಸರಿಗೆ ಏಪ್ರಿಲ್ 14 ರಂದು ಬೈಸಾಖಿ ಆಚರಣೆ ವರೆಗೆ ಎಲ್ಲಾ ರಜೆಗಳನ್ನು ರದ್ದುಗೊಳಿಸಲಾಗಿದೆ. ಇದನ್ನೂ ಓದಿ: ಮೋದಿ ಇಡೀ ವಿಶ್ವಕ್ಕೆ ಹುಲಿ: ಈಶ್ವರಪ್ಪ

ಇದೀಗ ಪಪ್ಪಲ್ಪ್ರೀತ್ ಸಿಂಗ್‌ನ ಬಂಧನವಾಗಿದ್ದು, ಈಗಲಾದರೂ ಅಮೃತ್‌ಪಾಲ್ ಸಿಂಗ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾನೆಯೇ ನೋಡಬೇಕಿದೆ. ಆತ ಈ ತಿಂಗಳ ಕೊನೆಯಲ್ಲಿ ಸಿಖ್ಖರ ಸಭೆಯನ್ನು ಕರೆದಿದ್ದಾನೆ. ಈ ಹಿನ್ನೆಲೆ ಆತ ಪಂಜಾಬ್‌ಗೆ ಆಗಮಿಸಿ ಪೊಲೀಸರಿಗೆ ಶರಣಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿದ ವಧುವಿಗೆ ಬಂತು ಕುತ್ತು- ಪೊಲೀಸರಿಂದ ಹುಡುಕಾಟ

Share This Article