ಸ್ಮೈಲ್ ಗುರು ರಕ್ಷಿತ್ ಗೆ ನಾಯಕಿಯಾದ ನೆನಪಿರಲಿ ಪ್ರೇಮ್ ಪುತ್ರಿ : ಅಮ್ಮು ಟೈಟಲ್ ರಿವೀಲ್

Public TV
3 Min Read

ಪುನೀತ್ ರಾಜ್ ಕುಮಾರ್ ಜೊತೆ ‘ಆಕಾಶ್’, ‘ಅರಸು’, ಪ್ರಜ್ವಲ್ ದೇವರಾಜ್‌ ನಟನೆಯ ‘ಮೆರವಣಿಗೆ’ಯಂತಹ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು (Mahesh Babu) ಹೊಸ ಸಿನಿಮಾದ ಟೈಟಲ್ ಬಿಡುಗಡೆ ಮಾಡಲಾಗಿದೆ. ವಿಭಿನ್ನವಾಗಿ ಚಿತ್ರತಂಡ ಶೀರ್ಷಿಕೆಯನ್ನು ಅನಾವರಣ ಮಾಡಿದೆ. ಪುದುಚೇರಿಯ 82  ಸಮುದ್ರದ ಆಳದಲ್ಲಿ ಸ್ಕೂಬಾ ಡೈಯಿಂಗ್ ಮೂಲಕ ಚಿತ್ರತಂಡ ಟೈಟಲ್ ರಿವೀಲ್ ಮಾಡಿದೆ. ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಭೀಮ ದುನಿಯಾ ವಿಜಯ್ ಕುಮಾರ್ ಮಹೇಶ್ ಬಾಬು ಅವರ ಹೊಸ ಪ್ರಯತ್ನಕ್ಕೆ ಸಾಥ್ ಕೊಟ್ಟರು.

ಮಹೇಶ್ ಬಾಬು ಅವರು ಪ್ರತಿ ಸಿನಿಮಾದಲ್ಲಿಯೂ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದ್ದಾರೆ. ಈಗ ಅವರು ಈ ಸಿನಿಮಾ ಮೂಲಕ  ‘ಕನ್ನಡತಿ’, ‘ಅವನು ಮತ್ತೆ ಶ್ರಾವಣಿ 2’ ದಂತಹ ಧಾರಾವಾಹಿಗಳಲ್ಲಿ ನಟಿಸಿದ್ದ ‘ಸ್ಮೈಲ್ ಗುರು’ ರಕ್ಷಿತ್ (Smile Guru Rakshit) ಅವರನ್ನು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. ಇದು ನಾಯಕನಾಗಿ ರಕ್ಷಿತ್ ಗೂ ಮೊದಲ ಹೆಜ್ಜೆ.ಮಹೇಶ್ ಬಾಬು ಹಾಗೂ ರಕ್ಷಿತ್ ಹೊಸ ಪಯಣಕ್ಕೆ ಅಮ್ಮು ಎಂಬ ಕ್ಲಾಸ್ ಶೀರ್ಷಿಕೆ ಇಡಲಾಗಿದೆ.

ದುನಿಯಾ ವಿಜಯ್ ಕುಮಾರ್ ಮಾತನಾಡಿ, ನಾನು, ಪ್ರೇಮ್ ಸಿನಿಮಾ ಆಳಕ್ಕೆ ಇಳಿದಿದ್ದೇವೆ. ನಮ್ಮ ಮಕ್ಕಳಿಗೆ ಒಳ್ಳೆದಾಗಲಿ ಎಂದು. ನಮಗೆ ಸಿನಿಮಾ ಬಿಟ್ಟರೆ ಬೇರೆ ಗೊತ್ತಿಲ್ಲ. ನಿಮ್ಮೆಲ್ಲರ ಆಶೀರ್ವಾದ , ಎಲ್ಲಾ ಹೀರೋ ಅಭಿಮಾನಿಗಳ ಆಶೀರ್ವಾದ ಈ ಮಕ್ಕಳ ಮೇಲೆ ಇರಲಿ. ಇವರು ಮುಂದೆ ಇಂಡಸ್ಟ್ರಿಯನ್ನು ಬೇರೆ ರೂಪಕ್ಕೆ ತೆಗೆದುಕೊಂಡು ಮುಂದೆ ಬರುತ್ತಿರುವುದು ನಿಮ್ಮ ಆಶೀರ್ವಾದ ಪಡೆಯಲು. ತಪ್ಪು ಮಾಡಿದರೆ ತಿದ್ದಿ. ನಾವು ಸಿನಿಮಾಗಾಗಿ ತುಂಬಾ ತ್ಯಾಗ ಮಾಡಿದ್ದೇವೆ. ಕಥೆ ಹೇಳದೆ ಮಹೇಶ್ ಅಣ್ಣನಿಗೆ ನಾವು ಸಿನಿಮಾ ಮಾಡಿ ಎಂದು ಕೇಳಿಕೊಳ್ಳುತ್ತೇವೆ. ತುಂಬಾ ಹಳೆ ನಿರ್ದೇಶಕರು. ಅದ್ಭುತ ವ್ಯಕ್ತಿತ್ವ. ಬದಲಾಗದೆ, ಏನೂ ಅಹಂ ಇಲ್ಲದೇ ಇರುವುವವರು. ಇಡೀ ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ನಿರ್ದೇಶಕರಾದ ಮಹೇಶ್ ಬಾಬು ಮಾತನಾಡಿ, ವಜ್ರೇಶ್ವರಿ ಕಂಬೈನ್ಸ್ ಮೂಲಕ ನನ್ನ ನಿರ್ದೇಶಕರಾಗಿ ಪರಿಚಯಿಸಿದವರು ಪಾರ್ವತಮ್ಮ, ರಾಜ್ ಕುಮಾರ್ ಸರ್ ಹಾಗೂ ಅವರ ಕುಟುಂಬ. ಶಿವಣ್ಣ, ರಾಘಣ್ಣ, ಎಲ್ಲದಕ್ಕಿಂತ ಹೆಚ್ಚಿನದಾಗಿ ಅಪ್ಪು ಸರ್.  ಅನುರಾಗ್, ಮಿಥುನ್ ಹಾಗೂ ಬಚ್ಚನ್ ಚೇತು. ಈ ಮೂರು ಜನ ಸಿನಿಮಾ ಮಾಡಬೇಕು ಎಂದರು. ಈ ಚಿತ್ರ ಆಗಲು ಮುಖ್ಯ ಕಾರಣ ರಕ್ಷಿತ್. ಅವರು ಕಥೆ ಮಾಡಿ ನನ್ನ ಬಳಿ ಹೇಳಿದರು. ಕಥೆ ಕೇಳಿ ನನಗೆ ಸ್ಟ್ರೈಕ್ ಆಯ್ತು. ರಕ್ಷಿತ್ ಗೆ ಒಂದು ಬಿಗ್ ಚಪ್ಪಾಳೆ ಬೇಕು. ಈ ಚಿತ್ರಕ್ಕೆ ಫ್ಯಾಷನೇಟ್ ನಿರ್ಮಾಪಕರು ಸಿಕ್ಕಿದ್ದಾರೆ. ವರ್ಕ್ ಶಾಪ್ ಮಾಡಿದೆ. ಜೆರುಷಾ, ಅಮೃತಾ ಇಬ್ಬರು ಚೆನ್ನಾಗಿ ಆಕ್ಟ್ ಮಾಡುತ್ತಾರೆ. ರಕ್ಷಿತ್ ಒಳ್ಳೆ ನಟ. ಒಂದೊಳ್ಳೆ ತಂಡ ನನಗೆ ಸಿಕ್ಕಿದೆ ಎಂದರು.

ನಟ ಸ್ಮೈಲ್ ಗುರು ರಕ್ಷಿತ್ ಮಾತನಾಡಿ, ಈ ಸಮಯದಲ್ಲಿ ನಾನು ಇಬ್ಬರನ್ನೂ ನೆನಪು ಮಾಡಿಕೊಳ್ಳುತ್ತೇನೆ. ಸಂಕಲನಕಾರ ಮಹೇಶ್ ಅವರು. ಮೀಡಿಯಾದವರು. ನಾನು ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ನನ್ನ ಕರಿಯರ್ ಶುರು ಮಾಡಿದ್ದು. ಮನೆಗೆ ಬಂದು ಶಾರ್ಟ್ ಹುಡುಕುತ್ತಿದೆ. ನಾನು ಕಾಣಿಸುತ್ತಿರಲಿಲ್ಲ. ಆಗ ರಿಯಾಲಿಟಿ ಶೋ ಟ್ರೈ ಮಾಡಿದೆ. ಆಗಲೂ ಆಗಲಿಲ್ಲ. ಆ ಹಠದಲ್ಲಿ ಶುರು ಮಾಡಿದ್ದು ಸ್ಮೈಲ್ ಗುರು ಶಾರ್ಟ್ ಸಿನಿಮಾ. ಮಹೇಶ್ ಅವರು ಆಗ ಸಾಥ್ ಕೊಟ್ಟರು. ಪದ್ಮಾವತಿ ಕಲರ್ಸ್ ಕನ್ನಡದಿಂದ ನನ್ನ ಕರಿಯರ್ ಶುರುವಾಯ್ತು. ನಾನು ಸಿನಿಮಾ ಮಾಡುತ್ತೇನೆ ಎಂದು ಅಂದೇ ಅಂದುಕೊಂಡಿದ್ದೆ. ಈಗ ಅದು ಆಗಿದೆ. ಈಗ ಟೈಟಲ್ ರಿವೀಲ್ ಆಗಿದೆ. ವಿಭಿನ್ನವಾಗಿ ಟೈಟಲ್ ಲಾಂಚ್ ಮಾಡಿದ್ದೇವೆ ಎಂದರು.

 

ಅಮ್ಮು ಸಿನಿಮಾದಲ್ಲಿ ಸ್ಮೈಲ್ ಗುರು ರಕ್ಷಿತ್ ಗೆ ಜೋಡಿಯಾಗಿ ಟಗರು ಪಲ್ಯ ಖ್ಯಾತಿಯ ಅಮೃತಾ ಪ್ರೇಮ್ (Amrita Prem) ಹಾಗೂ ವೀರಮದಕರಿ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಜೆರುಶಾ ಸಾಥ್ ಕೊಡುತ್ತಿದ್ದಾರೆ. ಎಂಎಂಎಂ ಪಿಕ್ಚರ್ಸ್ ಹಾಗೂ ಎ ಕ್ಲಾಸ್ ಸಿನಿ ಫಿಲ್ಮಂಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯಡಿ ಅನುರಾಗ್ ಆರ್ ಹಾಗೂ ಮಿಥುನ್ ಕೆ.ಎಸ್ ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ, ಸತ್ಯ ಅವರು ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿರಲಿದೆ. ನಾಯಕ ಸ್ಮೈಲ್ ಗುರು ರಕ್ಷಿತ್ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಒದಗಿಸಲಿದ್ದಾರೆ.

Share This Article