ಅಮಿತಾಬ್ ದಾಂಪತ್ಯಕ್ಕೆ 51ರ ಸಂಭ್ರಮ: ಜಯಾ ಜೊತೆಗಿನ ಜೀವನ ಹೇಗಿತ್ತು?

Public TV
2 Min Read

ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್ (Amitabh Bachchan) ಹಾಗೂ ಜಯಾ ಭಾದೂರಿ (Jaya Bachchan) ಜೋಡಿ ಇಂದು (ಜೂನ್ 3) ತಮ್ಮ 51ನೇ ವಿವಾಹ (Wedding) ವಾರ್ಷಿಕೋತ್ಸವ ಆಚರಿಸಿಕೊಂಡಿದೆ. ಭರ್ತಿ 51 ವರ್ಷಗಳ ಯಶಸ್ವಿ ದಾಂಪತ್ಯ ಜೀವನ ನಡೆಸಿ ಯುವ ಜನತೆಗೆ ಮಾದರಿಯಾಗಿದ್ದಾರೆ ಬಾಲಿವುಡ್‌ನ ಹಿರಿಯ ನಟ-ನಟಿ.

ತೆರೆಯ ಮೇಲಿನ ಹಿಟ್ ಜೋಡಿ ತೆರೆಯ ಹಿಂದೆಯೂ ಹಿಟ್ ಆಗುವುದು ಅಪರೂಪ. ಆದರೆ ಅದನ್ನು ಸುಳ್ಳಾಗಿಸಿದ್ದು ಅಮಿತಾಬ್ ಹಾಗೂ ಜಯ ಜೋಡಿ. ಇಬ್ಬರ ನಡುವೆ ಸಿನಿಮಾ ಸೆಟ್ಟಲ್ಲಿ ಹುಟ್ಟಿದ್ದ ಪ್ರೀತಿ ದಾಂಪತ್ಯ ಜೀವನಕ್ಕೆ ಕಾಲಿಡುವಂತೆ ಮಾಡ್ತು. ಅಮಿತಾಬ್ ಹೆಸರು ಇನ್ನೋರ್ವ ನಟಿ ರೇಖಾ ಜೊತೆ ಕೇಳಿಬಂದಿದ್ದರೂ ಅಮಿತಾಬ್ ಕೈಹಿಡಿದಿದ್ದು ಸರಳ-ಸಹಜ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದ ಜಯಾ ಭಾದೂರಿಯನ್ನ, ಜಯಾರನ್ನ ಅಮಿತಾಬ್ ಮದುವೆಯಾದ ಬಳಿಕ ಬಂದಿದ್ದ ಹಿಂದಿಯ `ಸಿಲ್‌ಸಿಲಾ’ ಚಿತ್ರವಂತೂ ಮೂವರ ನೈಜ ಘಟನೆಯನ್ನೇ ಕೇಂದ್ರವಾಗಿಟ್ಟುಕೊಂಡು ಮಾಡಿರುವ ಚಿತ್ರ ಎಂದು ಆಗಿನ ಕಾಲಕ್ಕೆ ಸುದ್ದಿಯಾಗಿತ್ತು. ಬಳಿಕ ರೇಖಾ ಜೊತೆ ಅಮಿತಾಬ್ ಮುಂದೆ ಯಾವತ್ತೂ ತೆರೆ ಹಂಚಿಕೊಳ್ಳಲೇ ಇಲ್ಲ. ಕಾರಣ ಪತಿ ಅಮಿತಾಬ್‌ಗೆ ಜಯಾ ಹಾಕಿದ್ದ ಲಕ್ಷ್ಮಣ ರೇಖೆ ಎಂಬ ಮಾತಿದೆ.

ಸಿನಿಮಾ ಸೆಲೆಬ್ರಿಟಿ ದಂಪತಿ ನಡುವೆ ವಿಚ್ಚೇದನ ಸಹಜವಾಗ್ತಿರುವ ಬೆನ್ನಲ್ಲೇ ಅಮಿತಾಬ್-ಜಯಾ ಜೋಡಿಯ ಐದು ದಶಕದ ಸುಖೀ ದಾಂಪತ್ಯದ ಸುದ್ದಿ ಯುವ ಜನತೆಗೆ ಮಾದರಿ ವಿಷಯ. ಜಯಾ ಬಚ್ಚನ್ ಇನ್ಸ್ಟಾದಲ್ಲಿ ಈ ವಿಚಾರ ಹಂಚಿಕೊಳ್ಳುತ್ತಿದ್ದಂತೆ ಜೋಡಿಗೆ ಶುಭಾಶಯದ ಕಾಮೆಂಟ್ಸ್ ಬರುತ್ತಿದೆ. ಸುಖೀ ದಾಂಪತ್ಯದ ಸಲಹೆ ಕೇಳುತ್ತಿದ್ದಾರೆ ಇನ್ನೂ ಹಲವರು. ಆದರೆ ವೈಯಕ್ತಿಕ ರಾಗದ್ವೇಷಗಳಿಗಿಂತ ಹೆಚ್ಚಾಗಿ ಕೌಟುಂಬಿಕ ಮೌಲ್ಯವನ್ನ ಮಾತ್ರ ನಂಬಿರುವುದೇ 50 ವರ್ಷದ ಸುದೀರ್ಘ ದಾಂಪತ್ಯ ಅಡಿಪಾಯ ಅನ್ನೋದನ್ನ ನಂಬಬೇಕು. ಯಾಕಂದ್ರೆ ಚಿಕ್ಕ-ಪುಟ್ಟ ಮನಸ್ತಾಪಗಳು ಎದುರಾದರೂ ದೂರಾಗುವ ಮನಸ್ಥಿತಿಗಳ ನಡುವೆ ಅಸಹಜ ಎನ್ನಿಸಿದ್ದ ಜೋಡಿ ಅಮಿತಾಬ್ ಜಯಾರದ್ದು. ಮದುವೆ ಸಂದರ್ಭದಲ್ಲಂತೂ ಈಗಿನ ಕಾಲದಂತೆ ಟ್ರೋಲ್ ಪೇಜ್‌ಗಳಿದ್ದರೆ ಅದೆಷ್ಟು ಟ್ರೋಲ್ ಆಗುತ್ತಿದ್ದರೋ. ಯಾಕಂದ್ರೆ ಈ ಜೋಡಿ ನೋಡ್ದವರೆಲ್ಲಾ ಬಚ್ಚನ್ ಆರಡಿ ಜಯಾ ಮೂರಡಿ ಎಂದು ಕಾಲೆಳೆದವರೇ ಹೆಚ್ಚು. ಯಾಕಂದ್ರೆ ಜೋಡಿಗೆ ಎತ್ತರದಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಆದರೂ ಟೀಕೆ ಟಿಪ್ಪಣಿ ನಡುವೆಯೂ ಯಶಸ್ವಿ ಗ್ರಹಸ್ಥಾಶ್ರಮ ನಡೆಸುತ್ತಿದ್ದಾರೆ ಈ ದಂಪತಿ.

ಅಮಿತಾಬ್ ಜಯಾ ಜೋಡಿ 1973 ಜೂನ್ 3ರಂದು ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ. ಬಳಿಕ ಅಭಿಷೇಕ್ ಹಾಗೂ ಶ್ವೇತಾ ಇಬ್ಬರು ಮಕ್ಕಳು ಹುಟ್ಟುತ್ತಾರೆ. ಬಳಿಕವೂ ಇಬ್ಬರೂ ಚಿತ್ರದಲ್ಲಿ ನಟಿಸುತ್ತಲೇ ಇರ್ತಾರೆ. ಇದೀಗ ರಾಜಕೀಯದಲ್ಲೂ ಹೆಸರುಮಾಡಿರುವ ಜಯಾ ಬಚ್ಚನ್‌ರನ್ನ ಬ್ರೇವ್ ಲೇಡಿ ಎಂದೇ ಕರೆಯಲಾಗುತ್ತೆ. ಅಮಿತಾಬ್ ಬಚ್ಚನ್ ಯಶಸ್ಸಿನ ಹಿಂದೆ ಜಯಾ ಬಚ್ಚನ್ ಇದ್ದಾರೆ ಅನ್ನೋದನ್ನ ಅಮಿತಾಬ್ ಎಷ್ಟೋ ಬಾರಿ ಹೇಳಿಕೊಂಡಿದ್ದಾರೆ. ಹೀಗಾಗಿ ಭಾರತೀಯ ಚಿತ್ರರಂಗದ ಮೊದಲ ಹೆಸರಾಂತ ತಾರಾಜೋಡಿಗೆ ಭರ್‌ಪೂರ್ ಶುಭಾಶಯ ಬರುತ್ತಿದೆ.

Share This Article