ಚುನಾವಣಾ ಚಾಣಕ್ಯ ಅಮಿತ್ ಶಾ ಇಂದು ಬೆಂಗಳೂರಿಗೆ ಆಗಮನ- ಖಾಸಗಿ ರೆಸಾರ್ಟ್ ನಲ್ಲಿ ಗೌಪ್ಯ ಸಭೆ

Public TV
1 Min Read

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಸಂಜೆ ಬೆಂಗಳೂರು ನಗರಕ್ಕೆ ಆಗಮಿಸಲಿದ್ದಾರೆ. ಡಿಸೆಂಬರ್ 31ರಂದು ನಾಲ್ಕು ಗಂಟೆ ತಡವಾಗಿ ಬಂದಿದ್ದರಿಂದ ಎರಡು ಪ್ರಮುಖ ಸಭೆಗಳು ನಡೆದಿರಲಿಲ್ಲ. ಹೀಗಾಗಿ ಇಂದು ಸಂಜೆ ರಾಜ್ಯ ನಾಯಕರ ಜೊತೆ ರಹಸ್ಯ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ನಾಲ್ಕೈದು ತಿಂಗಳಲ್ಲಿ ಅಧಿಕಾರ ಯುದ್ಧಕ್ಕೆ ಸಾಕ್ಷಿಯಾಗಲಿರುವ ಕರ್ನಾಟಕದ ಜಯದ ರಣತಂತ್ರ ರೂಪಿಸಲು ಅಧ್ಯಕ್ಷ ಅಮಿತ್ ಶಾ ಇವತ್ತು ಮತ್ತೆ ಬೆಂಗಳೂರಿಗೆ ಬರುತ್ತಿದ್ದಾರೆ. ನಾಳೆ ಸಮಾಜಕಲ್ಯಾಣ ಸಚಿವ ಎಚ್.ಆಂಜನೇಯ ಕ್ಷೇತ್ರ ಹೊಳಲ್ಕೆರೆಯಲ್ಲಿ ನಡೆಯೋ ಪರಿವರ್ತನಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಇವತ್ತು ಸಂಜೆ 4.45ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಶಾ, ಸೀದಾ ಆಲ್ಲಾಳಸಂದ್ರದಲ್ಲಿರುವ ಖಾಸಗಿ ರೆಸಾರ್ಟ್ ಗೆ ತೆರಳಲಿದ್ದಾರೆ. ಬಳಿಕ ರೆಸಾರ್ಟ್ ನಲ್ಲಿ ಸಂಜೆ 5.30ರಿಂದ ರಾತ್ರಿ 11 ಗಂಟೆವರೆಗೆ ನಿರಂತರ ಸಭೆ ನಡೆಸಲಿದ್ದಾರೆ. ಮೊದಲು ಉತ್ತರ ಕರ್ನಾಟಕದ ಸಂಸದರು, ಶಾಸಕರು, ಎಂಎಲ್‍ಸಿ, ಜಿಲ್ಲಾಧ್ಯಕ್ಷರು, ಉಸ್ತುವಾರಿಗಳ ಸಭೆ ನಡೆಯಲಿದೆ. ತರುವಾಯ ದಕ್ಷಿಣ ಕರ್ನಾಟಕದವರ ಸರದಿ. ನಂತರ ಬುಧವಾರ ಬೆಳಗ್ಗೆ ಬೆಂಗಳೂರಿನಿಂದ ಹೊಳಲ್ಕೆರೆಯಲ್ಲಿ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಗಮನದ ಹೊತ್ತಲ್ಲೇ ಬಿಜೆಪಿ ಟಿಕೆಟ್ ಆಕಾಂಕ್ಷಿತರ ಪಟ್ಟಿಯೂ ಸಿದ್ಧವಾಗಿದ್ದು, ಎಲ್ಲಾ 224 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಅಂತಾ ಹೇಳಲಾಗುತ್ತಿದೆ. 110 ಕ್ಷೇತ್ರಗಳಲ್ಲಿ ತಲಾ ಒಬ್ಬರಷ್ಟೇ ಆಕಾಂಕ್ಷಿಗಳಾಗಿದ್ದಾರೆ. 70 ಕ್ಷೇತ್ರಗಳಲ್ಲಿ ತಲಾ ಇಬ್ಬರು, 54 ಕ್ಷೇತ್ರಗಳಲ್ಲಿ ತಲಾ ಮೂವರು ಟಿಕೆಟ್ ನಿರೀಕ್ಷಿಸಿದ್ದಾರೆ. 224 ಕ್ಷೇತ್ರಗಳಲ್ಲೂ ಉಸ್ತುವಾರಿಗಳಾಗಿ ನೇಮಕಗೊಂಡಿದ್ದವರು ಅಮಿತ್ ಶಾ ಕೈಗೆ ಆಕಾಂಕ್ಷಿಗಳ ಪಟ್ಟಿ ಸಲ್ಲಿಸಲಿದ್ದು, ಈ ವರದಿ ಆಧರಿಸಿ ಶಾ ಟೀಂ, ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಿಗಿರುವ ಶಕ್ತಿ-ಸಾಮರ್ಥ್ಯಗಳ ಅಧ್ಯಯನ ಮಾಡಲಿದೆ ಅಂತಾ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *