ಬಿಜೆಪಿಯ ನವಕರ್ನಾಟಕ ಯಾತ್ರೆಗೆ ಗುರುವಾರ ಚಾಲನೆ: ಯಾತ್ರೆ ಹೇಗಿರುತ್ತೆ? ಯಾರೆಲ್ಲ ನಾಯಕರು ಭಾಗವಹಿಸ್ತಾರೆ?

Public TV
2 Min Read

ಬೆಂಗಳೂರು: ಬಿಜೆಪಿಯ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಗುರುವಾರ ಚಾಲನೆ ಸಿಗಲಿದ್ದು, ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಗುರುವಾರ ಬೆಳಗ್ಗೆ 11ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಿಐಇಸಿಗೆ ಬರಲಿರುವ ಅಮಿತ್ ಶಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ನಾಳೆ ನಡೆಯುವ ಬೈಕ್ ಯಾತ್ರೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆಯಿದೆ. ದಕ್ಷಿಣ ಕರ್ನಾಟಕ ಭಾಗದ 17 ಜಿಲ್ಲೆಗಳ 27 ಸಾವಿರ ಬೂತ್ ಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ. ಒಂದು ಬೂತ್ ನಿಂದ ಕನಿಷ್ಠ 3 ಬೈಕ್ ಗಳಲ್ಲಿ 6 ಕಾರ್ಯರ್ತರು ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ 224 ಕ್ಷೇತ್ರಗಳಲ್ಲಿ 75 ದಿನಗಳ ಕಾಲ ಯಾತ್ರೆ ಸಂಚರಿಸಲಿದೆ. ಕೇರಳದ ಜನ ರಕ್ಷಾ ಯಾತ್ರೆಯ ಸ್ವರೂಪದಲ್ಲಿ ರಾಜ್ಯದಲ್ಲೂ ಯಾತ್ರೆ ನಡೆಯಲಿದೆ. ಈ ಯಾತ್ರೆಯಲ್ಲಿ ಪ್ರಯಾಣಿಸಲು ಬಿಎಸ್‍ವೈ ಅವರಿಗೆ ವಿಶೇಷವಾಗಿ ವಾಹನ ಸಿದ್ದಪಡಿಸಲಾಗಿದ್ದು, ಅದರಲ್ಲಿಯೇ ಅವರು ಪ್ರಯಾಣ ಬೆಳಸಲಿದ್ದಾರೆ. ಪ್ರತಿ ದಿನ ಸುಮಾರು ನೂರು ಕಿ.ಮೀ. ಗೂ ಹೆಚ್ಚು ಸಂಚಾರ ಮಾಡಲಿರುವ ಯಾತ್ರೆ, 25 ದಿನಗಳಲ್ಲಿ ಒಟ್ಟು ಸುಮಾರು 11 ಸಾವಿರ ಕಿ.ಮೀ. ಸುತ್ತಲಿದೆ.

ಪರಿವರ್ತನಾ ಯಾತ್ರೆಯಲ್ಲಿ ವಾರಕ್ಕೆ ಒಬ್ಬರು ಕೇಂದ್ರದ ದಿಗ್ಗಜ್ಜರು ಭಾಗವಹಿಸಲಿದ್ದಾರೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ ಸೇರಿದಂತೆ ಕೇಂದ್ರ ಸಚಿವರ ದಂಡು ಯಾತ್ರೆಯಲ್ಲಿ ಬಂದು ಪ್ರಚಾರ ನಡೆಸಲಿದೆ. ಅಲ್ಲದೇ ಕಟು ಹಿಂದುತ್ವವಾದಿಗಳಾದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಉಮಾಭಾರತಿ, ಸಾಧ್ವಿ ನಿರಂಜನ್ ಅವರು ಕೂಡ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಅಷ್ಟೇ ಅಲ್ಲ ವಿವಿಧ ರಾಜ್ಯಗಳ ಬಿಜೆಪಿ ಸಿಎಂಗಳು ಕೂಡ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯ ಸರ್ಕಾರವು ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ ಪರಿವರ್ತನಾ ಯಾತ್ರೆಗೆ ಅನುಮತಿ ನೀಡಿಲ್ಲ. ಹಾಗಾಗಿ ಯಾತ್ರೆ ಕೊಡಗು ಜಿಲ್ಲೆಯಲ್ಲಿ ಸಂಚಾರ ಮಾಡುವ ಸಾಧ್ಯತೆ ಕಡಿಮೆಯಿದೆ. ನಿಗದಿ ಪ್ರಕಾರ ನವೆಂಬರ್ 8 ರಂದು ಕೊಡಗು ಜಿಲ್ಲೆಗೆ ಯಾತ್ರೆ ಪ್ರವೇಶ ಮಾಡಬೇಕು. ನವೆಂಬರ್ 10, 11, 12 ಹಾಗೂ 13 ರಂದು ಮಂಗಳೂರು ಜಿಲ್ಲೆಯಲ್ಲಿ ಯಾತ್ರೆ ಸಂಚಾರ ನಡೆಯಲಿದ್ದು, ಮಂಗಳೂರಿನಲ್ಲೇ ಕೋರ್ ಕಮಿಟಿ ಸಭೆ ನಡೆಯಲಿದೆ. ಜನವರಿ 18, 2018 ರಂದು ಉಡುಪಿ ಅಷ್ಟ ಮಠ ಪರ್ಯಾಯದಲ್ಲಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ. ಜನವರಿ 25, 2018 ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

ಬಿಜೆಪಿಯ ಪರಿವರ್ತನಾ ಯಾತ್ರೆಯು ಅಂತಿಮವಾಗಿ ಜನವರಿ 28 ರಂದು ಬೆಂಗಳೂರಿನಲ್ಲಿ ಯಾತ್ರೆ ಅಂತ್ಯಗೊಳ್ಳಲಿದೆ. ಅಂದು ಬೆಂಗಳೂರಿನಲ್ಲಿ ಬೃಹತ್ ಸಮಾರೋಪ ಸಮಾರಂಭ ಏರ್ಪಡಿಸಲಾಗಿದ್ದು, ಸಮಾವೇಶದ ಉಸ್ತುವಾರಿ ಮಾಜಿ ಡಿಸಿಎಂ ಆರ್. ಅಶೋಕ್ ಅವರಿಗೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮಾವೇಶದಲ್ಲಿ ಭಾಗವಹಿಸಲಿದ್ದು, ವಿಧಾನ ಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ. ಇದಕ್ಕೂ ಮುನ್ನ ಡಿಸೆಂಬರ್ 21 ರಂದು ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆ ಇದೆ.

 

 

 

Share This Article
Leave a Comment

Leave a Reply

Your email address will not be published. Required fields are marked *