ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗಲ್ಲ, 2026ರ ಒಳಗೆ ನಕ್ಸಲಿಸಂ ಕೊನೆಗೊಳಿಸುತ್ತೇವೆ: ಮತ್ತೆ ಶಾ ಶಪಥ

Public TV
2 Min Read

– ನಕ್ಸಲರ ದಾಳಿಗೆ ಛತ್ತೀಸ್‌ಗಢ ಮುಖ್ಯಮಂತ್ರಿ ತೀವ್ರ ಖಂಡನೆ

ನವದೆಹಲಿ: ಭದ್ರತಾ ಸಿಬ್ಬಂದಿಯಿದ್ದ ವಾಹನವನ್ನು ನಕ್ಸಲರು (Naxals) ಐಇಡಿ (ಸುಧಾರಿತ ಸ್ಫೋಟಕ ಸಾಧನ) ಬಳಸಿ ಸ್ಫೋಟಿಸಿದ ಘಟನೆ ಛತ್ತೀಸ್‌ಗಢ ಬಿಜಾಪುರ ಜಿಲ್ಲೆಯ ಬೇದ್ರೆ-ಕುತ್ರು ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ 8 ಡಿಆರ್‌ಜಿ ಜವಾನರು, ಓರ್ವ ಚಾಲಕ ಮೃತಪಟ್ಟಿದ್ದಾರೆ. ಕಳೆದ 2 ವರ್ಷಗಳಲ್ಲಿ ಇದು ಅತಿದೊಡ್ಡ ನಕ್ಸಲ್‌ ದಾಳಿ ಎಂದು ವರದಿಗಳು ತಿಳಿಸಿವೆ. ನಕ್ಸಲರ ಈ ದಾಳಿಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಅಮಿತ್‌ ಶಾ ಅವರು, ಮಾರ್ಚ್ 2026 ರೊಳಗೆ ಭಾರತದಿಂದ ನಕ್ಸಲಿಸಂ ಅನ್ನು ಕೊನೆಗೊಳಿಸುವುದಾಗಿ ಮತ್ತೊಮ್ಮೆ ಪ್ರತಿಜ್ಞೆ ಮಾಡಿದ್ದಾರೆ.

ಬಿಜಾಪುರದಲ್ಲಿ (ಛತ್ತೀಸ್‌ಗಢ) ಐಇಡಿ ಸ್ಫೋಟದಲ್ಲಿ ಡಿಆರ್‌ಜಿ ಯೋಧರನ್ನು ಕಳೆದುಕೊಂಡ ಸುದ್ದಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ವೀರ ಯೋಧರ ಕುಟುಂಬಗಳಿಗೆ ನಾನು ನನ್ನ ಆಳವಾದ ಸಂತಾಪ ತಿಳಿಸುತ್ತೇನೆ. ಈ ದುಃಖವನ್ನು ಪದಗಳಲ್ಲಿ ಹೇಳಲು ಅಸಾಧ್ಯ, ಆದರೆ ನಾನು ಭರವಸೆ ನೀಡುತ್ತೇನೆ. ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗುವುದಿಲ್ಲ. ಮಾರ್ಚ್ 2026ರ ಒಳಗೆ ನಕ್ಸಲಿಸಂ ಅನ್ನು ಭಾರತದಿಂದ ಕೊನೆಗೊಳಿಸುತ್ತೇವೆ ಎಂದು ಶಪಥ ಮಾಡಿದ್ದಾರೆ.

ಅಲ್ಲದೇ ಛತ್ತೀಸ್‌ಗಢ ಸಿಎಂ ಕೂಡ ಈ ದಾಳಿಯನ್ನು ಖಂಡಿಸಿ‌ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಸರ್ಕಾರದ ನಕ್ಸಲ್‌ ನಿರ್ಮೂಲನಾ ಯೋಜನೆಯಿಂದ ನಕ್ಸಲಿಗರು ಹತಾಶರಾಗಿದ್ದಾರೆ. ಹತಾಶೆಯಿಂದ ಈ ಹೇಡಿತನದ ಕೃತ್ಯ ಎಸಗಿದ್ದಾರೆ. ನಮ್ಮ ಯೋಧರ ಬಲಿದಾನ ವ್ಯರ್ಥವಾಗಲ್ಲ. ನಕ್ಸಲಿಸಂ ಅಂತ್ಯಗೊಳಿಸುವ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

Share This Article