ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ, ಚುನಾವಣೆ ಮೇಲೆ ಸಕಾರಾತ್ಮಕ ಪರಿಣಾಮ: ಅಮಿತ್ ಶಾ

By
1 Min Read

ನವದೆಹಲಿ: ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಯಶಸ್ವಿಯಾಗಿ ಸ್ಥಳಾಂತರಿಸಿರುವುದು ವಿಧಾನಸಭಾ ಚುನಾವಣೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವು ಜನವರಿಯಿಂದ ಅಲ್ಲಿನ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿದೆ. ಉಕ್ರೇನ್ ಹಾಗೂ ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿಷ್ಠುರವಾಗಿ ವರ್ತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುದ್ಧದ ವಿಚಾರವಾಗಿ ಉಕ್ರೇನ್‍ನಲ್ಲಿರುವ ಭಾರತೀಯರಿಗೆ ಸರ್ಕಾರ ಫೆಬ್ರವರಿ 15ರ ಹಿಂದೆಯೇ ಉಕ್ರೇನ್‍ನ್ನು ಬಿಡುವಂತೆ ಸಲಹೆಯನ್ನು ನೀಡಿತ್ತು ಎಂದರು.

ಉಕ್ರೇನ್‍ನಲ್ಲಿ ಭಾರತೀಯರನ್ನು ರಕ್ಷಿಸಲು ಆಪರೇಷನ್ ಗಂಗಾವನ್ನು ಪ್ರಾರಂಭಿಸಿ 13,000ಕ್ಕೂ ಅಧಿಕ ಭಾರತೀಯ ನಾಗರಿಕರನ್ನು ಉಕ್ರೇನ್‍ನಿಂದ ಈಗಾಗಲೇ ಸ್ಥಳಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳೂ ಸುರಕ್ಷಿತವಾಗಿ ಬರುವವರಿದ್ದಾರೆ. ಈ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಭರವಸೆ ನೀಡಿದರು.

ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಸರ್ಕಾರವು ರಷ್ಯಾದೊಂದಿಗೆ ಮಾತನಾಡಿ, ರಷ್ಯಾ ಭಾಷೆಯನ್ನು ಮಾತನಾಡುವ 4 ತಂಡಗಳನ್ನು ಉಕ್ರೇನ್‍ನ ನಾಲ್ಕು ಗಡಿ ರಾಷ್ಟ್ರಗಳಿಗೆ ಕಳುಹಿಸಲಾಗಿದೆ. ಮಾರ್ಚ್ 4ರವರೆಗೆ, ಉಕ್ರೇನ್‍ನಿಂದ 16,000 ನಾಗರಿಕರನ್ನು ಹೊರತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ರಷ್ಯಾದ ತೈಲದಲ್ಲಿ ಉಕ್ರೇನ್ ಪ್ರಜೆಗಳ ರಕ್ತದ ವಾಸನೆ ಬೆರೆತಿದೆ: ಉಕ್ರೇನ್ ವಿದೇಶಾಂಗ ಸಚಿವ

ರಷ್ಯಾದ ಮಿಲಿಟರಿ ಆಕ್ರಮಣದಿಂದಾಗಿ ಫೆಬ್ರವರಿ 24ರಿಂದ ಉಕ್ರೇನಿಯನ್ ವಾಯುಪ್ರದೇಶವನ್ನು ಮುಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಅದರ ನೆರೆಯ ದೇಶಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ ಮತ್ತು ಪೋಲೆಂಡ್‍ಗಳಿಗೆ ಬರುವಂತೆ ತಿಳಿಸಿ, ಅಲ್ಲಿಂದ ರಕ್ಷಿಸಲಾಗುತ್ತಿದೆ. ಇದನ್ನೂ ಓದಿ: ಮೊದಲು ಉಕ್ರೇನ್ ಸ್ವರ್ಗದಂತಿತ್ತು, ಈಗ ನರಕವಾಗಿದೆ – ಉಕ್ರೇನ್‍ನಲ್ಲಿ ಸಿಲುಕಿದ್ದ ಬೀದರ್ ಮೂಲದ ಯುವಕ

ಉತ್ತರ ಪ್ರದೇಶದಲ್ಲಿ ಏಳು ಹಂತದ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಮಾರ್ಚ್ 7ರಂದು ನಡೆಯಲಿದೆ. ಮಾರ್ಚ್ 10 ರಂದು ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *