ಸೋತ 120 ಕ್ಷೇತ್ರಗಳೇ ಟಾರ್ಗೆಟ್ – ಕ್ಲಿಕ್ ಆಯ್ತು ಚಾಣಕ್ಯನ ತಂತ್ರ

Public TV
2 Min Read

ನವದೆಹಲಿ: 2014 ಲೋಕಸಭಾ ಚುನಾವಣೆಯ ಗೆಲುವಿನ ಸಂಭ್ರಮದಲ್ಲಿದ್ದ ಬಿಜೆಪಿ ಪಕ್ಷಕ್ಕೆ ಅಮಿತ್ ಶಾ ನವಸಾರಥಿಯಾಗಿದ್ದರು. ಅದರಲ್ಲೂ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 73 ಸ್ಥಾನಗಳನ್ನು ಗೆಲುವು ಪಡೆಯಲು ಶಾ ಪ್ರಮುಖ ಕಾರಣರಾಗಿದ್ದರು. ಈ ಮೂಲಕ ನರೇಂದ್ರ ಮೋದಿ ಅವರ ಟೀಂ ನಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’ ಎನಿಸಿಕೊಂಡಿದ್ದರು. ಆದರೆ ಈ ಬಾರಿ ಅವರ ಸ್ಥಾನ ಮತ್ತಷ್ಟು ಹೆಚ್ಚಾಗಿದ್ದು, ಅಮಿತ್ ಶಾ ತಂತ್ರಗಾರಿಕೆ ರಾಜಕೀಯ ವಿಶ್ಲೇಷಕರ ಲೆಕ್ಕಾಚಾರಗಳನ್ನೇ ತಲೆಕೆಳಗೆ ಮಾಡಿದೆ.

ಮೋದಿ ಅಲೆಯಿಂದ 2014ರ ಲೋಕ ಸಮರದಲ್ಲಿ ಬಿಜೆಪಿ 282 ಸ್ಥಾನ ಗಳಿಸಿದ್ದರೂ 120 ಸ್ಥಾನಗಳಲ್ಲಿ ಸೋಲು ಕಂಡಿತ್ತು. ಈ ಕ್ಷೇತ್ರಗಳನ್ನೇ ಟಾರ್ಗೆಟ್ ಮಾಡಿದ್ದ ಅಮಿತ್ ಶಾ, ಗೆಲುವಿನ ರಣತಂತ್ರಗಳನ್ನು ರೂಪಿಸಿದ್ದರು. ಟಾರ್ಗೆಟ್ ಮಾಡಲಾಗಿದ್ದ ಕ್ಷೇತ್ರಗಳನ್ನು 25 ಕ್ಲಸ್ಟರ್ ಗಳನ್ನಾಗಿ ಮಾಡಿ ಹಿರಿಯ ನಾಯಕರಿಗೆ ಉಸ್ತುವಾರಿಯನ್ನು ನೀಡಲಾಗಿತ್ತು. ಈ ರೀತಿ ಸಂಘಟನೆ ಮಾಡಿದ ಬಳಿಕ ಗೆಲ್ಲಲು ಅವಕಾಶ ಇರುವ 80 ಕ್ಷೇತ್ರಗಳನ್ನು ಆಯ್ಕೆ ಮಾಡಿ ಅವುಗಳ ಮೇಲೆ ಹೆಚ್ಚು ಗಮನ ನೀಡುವುಂತೆ ರಾಜ್ಯ ನಾಯಕರಿಗೆ ಸೂಚಿಸಲಾಗಿತ್ತು. ಅಂದು ಅಮಿತ್ ಶಾ ಟಾರ್ಗೆಟ್ ಮಾಡಿದ್ದ 80 ಕ್ಷೇತ್ರಗಳ ಪೈಕಿ ಅರ್ಧದಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ.

ಅಮಿತ್ ಶಾ ತಮಗೆ ತಾವೇ ‘ಸೆಟ್’ ಮಾಡಿಕೊಂಡಿದ್ದ ಗುರಿಯನ್ನ ಸಾಧಿಸಲು ಹಲವು ತಂತ್ರಗಳನ್ನು ರೂಪಿಸಿದ್ದರು. ಇದರಲ್ಲಿ ಬಹುಮುಖ್ಯವಾಗಿ ‘ಆಪರೇಷನ್ ಕೋರಮಂಡಲ್’ ಕೂಡ ಒಂದಾಗಿದೆ. ಈ ತಂತ್ರದ ಭಾಗವಾಗಿಯೇ ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ ರಾಜ್ಯಗಳಲ್ಲಿ ಅಮಿತ್ ಹಲವು ನಾಯಕರನ್ನ ಪಕ್ಷದತ್ತ ಸೆಳೆದಿದ್ದರು. ಅಲ್ಲದೇ ಪಶ್ಚಿಮ ಬಂಗಾಳದಲ್ಲಿ 84ಕ್ಕೂ ಹೆಚ್ಚು ಬಾರಿ ಸಭೆಗಳನ್ನು ನಡೆಸಿದ್ದರು. ಇತ್ತ ಈಶಾನ್ಯ ರಾಜ್ಯಗಳಲ್ಲಿನ ಮೈತ್ರಿಗಳನ್ನು ಸೆಳೆಯಲು ಯಶಸ್ವಿಯಾಗಿದ್ದರು. ಇದರ ಪರಿಣಾಮ ಬಹುತೇಕ ಈಶಾನ್ಯ ರಾಜ್ಯಗಳಲ್ಲಿ ಇಂದು ಬಿಜೆಪಿ ಪಕ್ಷ ಗೆಲುವು ಪಡೆದಿದೆ.

ಸೋಲುಂಡ ಕ್ಷೇತ್ರಗಳನ್ನ ಟಾರ್ಗೆಟ್ ಮಾಡುತ್ತಲೇ 2014ರಲ್ಲಿ ಗೆಲುವು ಪಡೆದ ಕ್ಷೇತ್ರಗಳನ್ನು ಎಚ್ಚರಿಕೆಯಿಂದ ನಿಭಾಯಿಸಿದ್ದ ಅಮಿತ್ ಶಾ, ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದ ಉತ್ತರ ಪ್ರದೇಶದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದರು. ಇದರ ಪರಿಣಾಮವಾಗಿ ಎಸ್‍ಪಿ, ಬಿಎಸ್‍ಪಿ ಮೈತ್ರಿಯಿಂದ ಪಕ್ಷಕ್ಕೆ ನಷ್ಟ ಉಂಟಾಗದಂತೆ ನೋಡಿಕೊಂಡರು.

ಮೈತ್ರಿ ಪಕ್ಷವಾಗಿ ಜೊತೆಗಿದ್ದು ಟೀಕೆ ಮಾಡುತ್ತಿದ್ದ ಶಿವಸೇನಾ ಪಕ್ಷ ಹಾಗೂ ಜೆಡಿ(ಯು) ಪಕ್ಷಗಳೊಂದಿಗೆ ಅತ್ಯುತ್ತಮ ರೀತಿಯಲ್ಲಿ ಮೈತ್ರಿಯನ್ನ ಶಾ ಮುಂದುವರಿಸಿದ್ದರು. ದೇಶಾದ್ಯಂತ ಸುಮಾರು 161 ಕಾಲ್ ಸೆಂಟರ್ ಪ್ರಾರಂಭಿಸಿ ಕೇಂದ್ರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದರು. ಈ ಮೂಲಕ ಸರಿ ಸುಮಾರು 24.71 ಕೋಟಿ ಫಲಾನುಭವಿಗಳನ್ನು ಈ ಸೆಂಟರ್ ಮೂಲಕ ತಲುಪಿದ್ದರು. 2014 ರಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’ ಪಡೆದಿದ್ದ ಅಮಿತ್ ಶಾ, ಈ ಬಾರಿ ‘ಮೋಸ್ಟ್ ವ್ಯಾಲುಬಲ್ ಪ್ಲೇಯರ್’ ಎನಿಸಿಕೊಂಡರು. ಇದನ್ನು ಓದಿ: ನೀವೆಲ್ಲಾ ಇದ್ದು ಏನ್ ಮಾಡ್ತಿದ್ದೀರಾ..?- ರಾಜ್ಯ ಬಿಜೆಪಿಗರ ವಿರುದ್ಧ ಅಮಿತ್ ಶಾ ಗರಂ

Share This Article
Leave a Comment

Leave a Reply

Your email address will not be published. Required fields are marked *