ಟಿಕೆಟ್ ವಂಚಿತ ಶಾಸಕ ರಾಮದಾಸ್‌ರನ್ನು ತಬ್ಬಿ ಬೆನ್ನು ತಟ್ಟಿದ ಅಮಿತ್ ಶಾ

Public TV
2 Min Read

ಮೈಸೂರು: ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮೈಸೂರಿಗೆ (Mysuru) ಆಗಮಿಸಿದ್ದಾರೆ. ಈ ವೇಳೆ ಕೃಷ್ಣರಾಜೇಂದ್ರ ಕ್ಷೇತ್ರದ ಟಿಕೆಟ್ ವಂಚಿತರಾಗಿರುವ ಎಸ್‌ಎ ರಾಮದಾಸ್ (SA Ramadas) ಅವರನ್ನು ಅಮಿತ್ ಶಾ ಬಾಚಿ ತಬ್ಬಿ, ಬೆನ್ನು ತಟ್ಟಿದ್ದಾರೆ.

 

ಅಮಿತ್ ಶಾ ಆಗಮಿಸುತ್ತಲೇ ಅವರ ಕಾಲಿಗೆ ನಮಸ್ಕರಿಸಿ ರಾಮದಾಸ್ ಸ್ವಾಗತಿಸಿದರು. ಈ ವೇಳೆ ಅಮಿತ್ ಶಾ ಅವರನ್ನು ಬಾಚಿ ತಬ್ಬಿ, ಬೆನ್ನು ತಟ್ಟಿದ್ದಾರೆ. ಈ ಬಗ್ಗೆ ತಿಳಿಸಿರುವ ರಾಮದಾಸ್, ನಾನು ಆರೋಗ್ಯದ ಸಮಸ್ಯೆಯ ಹಿನ್ನೆಲೆ ಆಸ್ಪತ್ರೆಯಲ್ಲಿದ್ದೆ. ರಾಷ್ಟ್ರೀಯ ನಾಯಕರು ಬಂದಾಗ ನಾನು ಸ್ವಾಗತ ಕೋರುವುದು ನನ್ನ ಜವಾಬ್ದಾರಿ. ಏರ್‌ಪೋರ್ಟ್‌ನಲ್ಲಿ ಇಳಿದಾಗ ಅಮಿತ್ ಶಾ ಅವರು ಬಹಳ ಆತ್ಮೀಯವಾಗಿ ಅಪ್ಪುಗೆ ನೀಡಿ ಮಾತನಾಡಿಸಿದರು. ರಾಮದಾಸ್ ಜಿ ಬಹುತ್ ಅಚ್ಚಾ ನಿರ್ಲಿಯಾ ಅಂತಾ ತಬ್ಬಿ ನಗು ಸೂಸಿದರು. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಮದಾಸ್ ಸಂತಸ ವ್ಯಕ್ತಪಡಿಸಿದರು.

ನಾನು ಯಾವತ್ತೂ ಭರವಸೆ ಬೇಕು ಎಂದು ಕೇಳಿದವನಲ್ಲ. ಇದು ಇವತ್ತಿನ ಸಂಬಂಧ ಅಲ್ಲ. 25 ವರ್ಷ ಹಳೆಯ ಸಂಬಂಧ. ಅದನ್ನು ಮಾತಿನಲ್ಲಿ ಹೇಳುವ ಅವಶ್ಯಕತೆ ಇಲ್ಲ. ಅವರು ನನ್ನ ನಿರ್ಣಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನಗೆ ಅಷ್ಟೇ ಸಾಕು. ನಾನು ಕೂಡ ಇಷ್ಟು ಆತ್ಮೀಯತೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಮೋದಿಯವರು ಬೆನ್ನು ತಟ್ಟಿದಾಗಲೂ ನಾನು ನಿರೀಕ್ಷೆ ಮಾಡಿರಲಿಲ್ಲ. ಮೋದಿಯವರು ಆತ್ಮೀಯವಾಗಿ ಮಾತನಾಡಿಸಿದಾಗಲೂ ಕೂಡ ನಮ್ಮ 25 ವರ್ಷದ ಸಂಬಂಧವನ್ನು ಎಲ್ಲೂ ಹೊರಗೆ ಬಾರದಂತೆ ನೋಡಿಕೊಂಡಿದ್ದೆ. ಇಂದು ನನ್ನ ನಿರ್ಧಾರಕ್ಕೆ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಟಿಕೆಟ್ ಕೈ ತಪ್ಪಿದ ವೇಳೆ ನನ್ನ ಮುಂದೆ 2 ಆಯ್ಕೆಗಳಿತ್ತು. ಸ್ವಾತಂತ್ರವಾಗಿ ನಿಂತು ಗೆಲ್ಲುವ ಅವಕಾಶ ಇದ್ದ ಸಂದರ್ಭದಲ್ಲಿ ನಾನು ಎಂಎಲ್‌ಎ ಆಗಬೇಕಾ? ಅಥವಾ ವಿಶ್ವಾನಾಯಕರ ಸಂಬಂಧ ಉಳಿಸಿಕೊಳ್ಳಬೇಕ? ಎಂಬ ಆಯ್ಕೆಗಳಿತ್ತು. ಕೇವಲ ಎಂಎಲ್‌ಎಗಾಗಿ ಆ ಬಾಂಧವ್ಯ ಕಳೆದುಕೊಳ್ಳೋದು ಬೇಡ ಎಂದು ನಾನು ಕಾರ್ಯಕರ್ತರ ಮನವೊಲಿಸಿ ಉಳಿಯುವ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ಯಾಕೆ ಕೈ ತಪ್ಪಿದೆ ಎನ್ನುವುದು ಈಗಲೂ ಗೊತ್ತಿಲ್ಲ. ಇದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ ಎಂದು ರಾಮದಾಸ್ ವಿಷಾದ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿಯಿಂದ ಜನರ ಭಾವನೆ ಕೆರಳಿಸುವ ಯತ್ನ: ಸಿದ್ದು ಪರ ಬ್ಯಾಟ್ ಬೀಸಿದ ಸವದಿ

ಅಮಿತ್ ಶಾ ಸೋಮವಾರ ಮೈಸೂರು ಏರ್‌ಪೋರ್ಟ್‌ನಿಂದ ನೇರವಾಗಿ ರಸ್ತೆ ಮೂಲಕ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. ಅರ್ಧ ಗಂಟೆಗಳ ಕಾಲ ಚಾಮುಂಡಿ ಬೆಟ್ಟದಲ್ಲಿ ಮಹಾಮಂಗಳಾರತಿ ಸೇರಿದಂತೆ ದೇವಿಯ ಪೂಜೆಯಲ್ಲಿ ಭಾಗಿಯಾದರು. ಅಮಿತ್ ಶಾಗೆ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು.

ಕೆಆರ್ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಬಳಿಕ ರಾಮದಾಸ್ ಫುಲ್ ಸೈಲೆಂಟ್ ಆಗಿದ್ದರು. ಶ್ರೀವತ್ಸ ಪರವಾಗಿ ನಾಮಪತ್ರ ಸಲ್ಲಿಕೆ ವೇಳೆ ಭಾಗಿಯಾಗಿ ಬಳಿಕ ತಣ್ಣಗಾಗಿದ್ದ ರಾಮದಾಸ್ 2 ದಿನದ ಹಿಂದೆ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಕೆಆರ್ ಕ್ಷೇತ್ರದ ಕಾರ್ಯಕರ್ತರ ಸಭೆಗೂ ಗೈರಾಗಿದ್ದರು. ಬಳಿಕ ಪಕ್ಷದ ಪ್ರಚಾರ ಕಾರ್ಯದಲ್ಲೂ ಹೆಚ್ಚಾಗಿ ರಾಮದಾಸ್ ಕಾಣಿಸಿಕೊಂಡಿರಲಿಲ್ಲ. ಇದೀಗ ಅಮಿತ್ ಶಾ ಮೈಸೂರಿಗೆ ಬಂದಿರುವ ಹಿನ್ನೆಲೆ ಅವರು ಖುದ್ದು ಹಾಜರಾಗಿ ಏರ್‌ಪೋರ್ಟ್ನಲ್ಲೇ ಶಾ ಅವರನ್ನು ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಈ ಸಲ ಕಪ್ ನಮ್ದೆ: ಶೆಟ್ಟರ್‌ಗೆ ಪ್ರಹ್ಲಾದ್ ಜೋಶಿ ಟಾಂಗ್

Share This Article