ಬುಧವಾರದೊಳಗೆ ಶುಭ ಸುದ್ದಿ ನೀಡ್ತೀನಿ ಅಂದ್ರಂತೆ ಬಿಎಸ್‍ವೈ!

Public TV
1 Min Read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದ್ದು, ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬುಧವಾರದೊಳಗೆ ಶುಭ ಸುದ್ದಿ ನೀಡುತ್ತೇವೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಕಳೆದ ಮೂರು ದಿನಗಳಿಂದ ಅಮಿತ್ ಶಾ ನಿರಂತರವಾಗಿ ಯಡಿಯೂರಪ್ಪರಿಗೆ ಕರೆ ಮಾಡುತ್ತಿದ್ದು ರಾಜ್ಯ ರಾಜಕೀಯದ ಬೆಳವಣಿಗೆಯ ಇಂಚಿಂಚೂ ಮಾಹಿತಿಯನ್ನು ಪಡೆಯಿತ್ತಿದ್ದಾರಂತೆ. ಮಾಹಿತಿ ಪಡೆಯುತ್ತಾ ಮುಂದೆ ನಾಯಕರ ನಡೆ ಹೇಗಿರಬೇಕೆಂಬುದರ ಬಗ್ಗೆ ಸಲಹೆ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ಬುಧವಾರದೊಳಗೆ ಶುಭ ಸುದ್ದಿ ನೀಡುತ್ತೇವೆ ಅಂತಾ ಯಡಿಯೂರಪ್ಪ ಭರವಸೆ ನೀಡಿದ್ದಾರಂತೆ. ಆಪರೇಷನ್ ಕಮಲ ಸೇರಿದಂತೆ ಎಲ್ಲ ಚಟುವಟಿಕೆಗಳು ಗುಪ್ತವಾಗಿ ನಡೆಯಲಿ. ಯಾವ ನಾಯಕರು ಆಪರೇಷನ್ ಕಮಲದ ಬಗ್ಗೆ ಬಹಿರಂಗ ಹೇಳಿಕೆ ನೀಡುವುದು ಬೇಡ ಅಂತಾ ಅಮಿತ್ ಶಾ ಸೂಚಿಸಿದ್ದಾರೆ ಎನ್ನಲಾಗಿದೆ.

ಇಂದು 28ನೇ ದಕ್ಷಿಣ ವಲಯ ಪರಿಷತ್‍ ಸಭೆಯಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಯಡಿಯೂರಪ್ಪ ಜೊತೆ ರಾಜನಾಥ್ ಸಿಂಗ್ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಈ ವೇಳೆ ರಾಜನಾಥ್ ಸಿಂಗ್ ರಾಜ್ಯ ರಾಜಕೀಯ ಬೆಳವಣಿಗೆ ಮತ್ತು ಆಪರೇಷನ್ ಕಮಲದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಬುಧವಾರ ನಗರದ ಪ್ಯಾಲೇಸ್ ಗ್ರೌಂಡ್ ನಲ್ಲಿ ಬಿಜೆಪಿ ಶಾಸಕರ ವಿಶೇಷ ಸಭೆ ನಡೆಯಲಿದೆ.

ಇತ್ತ ರಾಜ್ಯ ಕಾಂಗ್ರೆಸ್ ಆಂತರಿಕ ಬಿಕ್ಕಟ್ಟು, ವಿವಾದಗಳ ಚೆಂಡು ಈಗ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಜಾರಕಿಹೊಳಿ ಸಹೋದರರು ತಮ್ಮ ಸಮಸ್ಯೆಯನ್ನ ಹೈಕಮಾಂಡ್ ಅಂಗಳದಲ್ಲೇ ಪರಿಹಾರ ಆಗಲಿ ಎಂದ ಹಿನ್ನೆಲೆಯಲ್ಲಿ ಇಂದು ಮತ್ತು ಬುಧವಾರ ರಾಹುಲ್ ಗಾಂಧಿ ಸಮ್ಮುಖದಲ್ಲಿ ಮಾತುಕತೆ ನಡೆಯುವ ಸಾಧ್ಯತೆ ಇದೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ,ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿಕೆ ಶಿವಕುಮಾರ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಇಂದು ಸಂಜೆ ದೆಹಲಿಗೆ ತೆರಳಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *