ಅಕ್ರಮ ವಲಸಿಗರು ರಾಹುಲ್ ಗಾಂಧಿಯವರ ಸೋದರ ಸಂಬಂಧಿಗಳಾ- ಶಾ ಪ್ರಶ್ನೆ

Public TV
1 Min Read

ರಾಂಚಿ: ಅಕ್ರಮ ವಲಸಿಗರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸೋದರ ಸಂಬಂಧಿಗಳಾ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಅಮಿತ್ ಶಾ ಪ್ರಶ್ನೆ ಮಾಡಿದ್ದಾರೆ.

ಜಾರ್ಖಂಡ್‍ನ ಚಕ್ರಧರಪುರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ರಾಷ್ಟ್ರೀಯ ಪೌರತ್ವ ನೋಂದಣಿ)ಎನ್‍ಆರ್ ಸಿಯನ್ನು ಏಕೆ ಜಾರಿಗೆ ತರಬೇಕು, ಯಾಕೆ ಅಕ್ರಮ ವಲಸಿಗರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಪ್ರಶ್ನಿಸುತ್ತಾರೆ. ಅಲ್ಲದೆ ಅವರು ಎಲ್ಲಿಗೆ ಹೋಗಬೇಕು, ಏನು ತಿನ್ನಬೇಕು ಎಂದು ಕೇಳಿದ್ದಾರೆ. ಅಕ್ರಮ ವಲಸಿಗರೇನು ರಾಹುಲ್ ಗಾಂಧಿಯವರ ಸೋದರ ಸಂಬಂಧಿಗಳೇ ಎಂದು ಹರಿಹಾಯ್ದಿದ್ದಾರೆ.

ಎನ್‍ಆರ್ ಸಿಯನ್ನು ಜಾರಿ ಮಾಡುವ ಮೂಲಕ ಪ್ರತಿಯೊಬ್ಬ ಅಕ್ರಮ ವಲಸಿಗನನ್ನು 2024ರ ವೇಳೆಗೆ ದೇಶದಿಂದ ಗಡಿಪಾರು ಮಾಡಲಾಗುವುದು. ಜಾರ್ಖಂಡ್‍ನ ಜನತೆ ಬಯಸಿದರೆ ಇಲ್ಲಿನ ಪ್ರತಿಯೊಬ್ಬ ಅಕ್ರಮ ವಲಸಿಗನನ್ನು ಸಹ ಹೊರಗಟ್ಟಲಾಗುವುದು. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವಾಗಿದ್ದು, ಎನ್‍ಆರ್ ಸಿ ಯನ್ನು ಜಾರಿಗೆ ತಂದೆ ತರುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ನವೆಂಬರ್ 20ರಂದು ಲೋಕಸಭೆಯಲ್ಲಿ ಭಾಷಣ ಮಾಡುವ ವೇಳೆ ಗೃಹ ಸಚಿವ ಅಮಿತ್ ಶಾ ಅವರು ಮೊದಲ ಹಂತದಲ್ಲಿ ಅಸ್ಸಾಂನಲ್ಲಿ ಮಾತ್ರ ಎನ್‍ಆರ್ ಸಿ ಜಾರಿ ಮಾಡಲಾಗಿದೆ. ಉಳಿದ ರಾಜ್ಯಗಳಿಗೂ ಇದನ್ನು ವಿಸ್ತರಿಸಲಾಗುವದು ಎಂದಿದ್ದರು.

ಭಾನುವಾರವಷ್ಟೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹ ಎನ್‍ಸಿಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು.

ನಿಮಗೆ ನಕ್ಸಲಿಸಂ ಬೇಕಾ, ಅಭಿವೃದ್ಧಿ ಬೇಕಾ ಎಂದು ಇದೇ ವೇಳೆ ನೆರೆದಿದ್ದ ಜನರನ್ನು ಅಮಿತ್ ಶಾ ಪ್ರಶ್ನಿಸಿದರು. ಜಾರ್ಖಂಡ್‍ನಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಇನ್ನೂ ನಾಲ್ಕು ಹಂತದ ಚುನಾವಣೆ ಬಾಕಿ ಇದೆ. ಹೀಗಾಗಿ ಅಮಿತ್ ಬಿರುಸಿನ ಪ್ರಚಾರ ನಡೆಸುತ್ತಿದ್ದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *