ಕಾಶ್ಮೀರದಲ್ಲಿ ರಕ್ತದ ಹೊಳೆ ಹರಿಯುತ್ತೆ ಎಂದಿದ್ದರು, ಒಂದು ಗುಂಡು ಹಾರಿಲ್ಲ- ರಾಹುಲ್‍ಗೆ ಅಮಿತ್ ಶಾ ತಿರುಗೇಟು

Public TV
2 Min Read

ಮುಂಬೈ: ಜಮ್ಮು ಕಾಶ್ಮೀರದ ವಿಶೇಷ ಸ್ಥಾನ ರದ್ದುಪಡಿಸಿದರೆ ರಕ್ತ ಹೊಳೆ ಹರಿಯುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಒಂದೇ ಒಂದು ಗುಂಡು ಸಹ ಹಾರಿಲ್ಲ ಎಂದು ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಸೊಲ್ಲಾಪುರದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಾಗ ಕಾಶ್ಮೀರದಲ್ಲಿ ರಕ್ತದ ಹೊಳೆ ಹರಿಯುತ್ತದೆ ಎಂದಿರಿ. ಆದರೆ ಒಂದು ಬುಲೆಟ್ ಸಹ ಸಿಡಿದಿಲ್ಲ ಎಂದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‍ಗೆ ತಿರುಗೇಟು ನೀಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಮೂಲಕ ದೇಶವನ್ನು ಒಗ್ಗೂಡಿಸಿ ಉತ್ತಮ ಕೆಲಸವನ್ನು ಮಾಡಿದೆ. ನೀವು ಇದರ ವಿರುದ್ಧವಾಗಿದ್ದೀರಾ ಅಥವಾ ಪರವಾಗಿದ್ದೀರಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ರಾಹುಲ್ ಗಾಂಧಿ ಹಾಗೂ ಶರದ್ ಪವಾರ್ ಅವರನ್ನು ಶಾ ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು 370 ಹಾಗೂ 35ಎ ವಿಧಿಗಳನ್ನು ರದ್ದು ಪಡಿಸುವ ಮೂಲಕ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಸಮಗ್ರ ಭಾರತದ ಕನಸನ್ನು ನನಸು ಮಾಡಿದ್ದಾರೆ. ಆದರೆ ಶರದ್ ಪವಾರ್ ಹಾಗೂ ರಾಹುಲ್ ಗಾಂಧಿಯವರೇ ನೀವು 370ನೇ ವಿಧಿ ಪರವಾಗಿ ಇಲ್ಲವೇ? ಕಾಂಗ್ರೆಸ್ ಹಾಗೂ ಎನ್‍ಸಿಪಿ ತಮ್ಮ ಮತ ಬ್ಯಾಂಕಿಗಾಗಿ ಇದನ್ನು ವಿರೋಧಿಸುತ್ತಿವೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದಿಟ್ಟ ನಿರ್ಧಾರಗಳ ಮೂಲಕ ಭಾರತದ ಗೌರವವನ್ನು ವಿಶ್ವಮಟ್ಟದಲ್ಲಿ ಬೆಳಗಿಸುತ್ತಿದ್ದಾರೆ ಎಂದರು.

ಅಕ್ಟೋಬರ್ 21ರ ಮಹಾರಾಷ್ಟ್ರದ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಮತ್ತು ಎನ್‍ಸಿಪಿ ಈಗಾಗಲೇ ಸೋಲೊಪ್ಪಿಕೊಂಡಿವೆ. ಬಿಜೆಪಿ-ಶಿವಸೇನೆ ಮೈತ್ರಿಯನ್ನು ಬಹುಮತದೊಂದಿಗೆ ಗೆಲ್ಲಿಸಬೇಕು. 288 ಸ್ಥಾನಗಳ ಪೈಕಿ 222 ಸ್ಥಾನಗಳಲ್ಲಿ ನಮ್ಮನ್ನು ಮರು ಆಯ್ಕೆ ಮಾಡಬೇಕು ಎಂದು ಜನರಲ್ಲಿ ವಿನಂತಿಸಿದರು.

ರಾಹುಲ್ ಗಾಂಧಿ ಅವರು ತುಕ್ಡೆ ತುಕ್ಡೆ ಗ್ಯಾಂಗಿನೊಂದಿಗೆ ಕೈ ಜೋಡಿಸಿದ್ದಾರೆ. ರಾಹುಲ್ ಅವರೇ ಬೇಕಾದರೆ ನನ್ನ, ಪ್ರಧಾನಿ ಮೋದಿಯವರನ್ನು ನಿಂದಿಸಿ ನಾವು ನಿಮ್ಮ ಬಗ್ಗೆ ಏನೂ ಹೇಳುವುದಿಲ್ಲ. ಆದರೆ ನೀವು ಭಾರತ ಮಾತೆಯನ್ನು ವಿಭಜಿಸುವ ಕುರಿತು ಹೇಳಿಕೆ ನೀಡಿದವರ ಪರ ನಿಂತಿದ್ದೀರಿ. ರಾಷ್ಟ್ರದ ವಿಭಜನೆ ಕುರಿತು ಮಾತನಾಡುವವರನ್ನು ಬಿಜೆಪಿ ಸರ್ಕಾರ ಜೈಲಿಗೆ ಹಾಕುತ್ತದೆ ಎಂದು ಈ ವೇಳೆ ತಿಳಿಸಿದರು.

ರಾಷ್ಟ್ರದ ಭದ್ರತೆ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತುಂಬಾ ವ್ಯತ್ಯಾಸವಿದೆ. ರಾಷ್ಟ್ರದ ಭದ್ರತೆಯೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *