ಅಮಿತ್ ಶಾ ಜಮ್ಮು & ಕಾಶ್ಮೀರ ಭೇಟಿ – ತೀವ್ರ ಕುತೂಹಲ

Public TV
2 Min Read

ಶ್ರೀನಗರ: 2019ರ ಆಗಸ್ಟ್ 5ರಂದು ಪೂರ್ವ ವಲಯ ರಾಜ್ಯಗಳನ್ನು ವಿಭಜನೆ ಮಾಡಿ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ಸಂವಿಧಾನ ವಿಧಿ 370 ಮತ್ತು 35ಎ ತೆಗೆದುಹಾಕಿದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೊದಲ ಬಾರಿ ಜಮ್ಮು ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದಾರೆ. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಅವರನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸ್ವಾಗತಿಸಿದ್ದಾರೆ‌. ಶಾ ಅವರ ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

ಜಮ್ಮು ಕಾಶ್ಮೀರದ ಭದ್ರತಾ ಸ್ಥಿತಿಗತಿಯನ್ನು ಪರಾಮರ್ಶಿಸಲು ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಇಂದು ಶ್ರೀನಗರಕ್ಕೆ ಬಂದಿಳಿದರು. ಗೃಹ ಸಚಿವರ ಭೇಟಿ ಸಂದರ್ಭದಲ್ಲಿ ತೀವ್ರ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ತಾತ್ಕಾಲಿಕ ಚೆಕ್ ಪಾಯಿಂಟ್ ಗಳನ್ನು ಮತ್ತು ಹೊಸ ಬಂಕರ್ ಗಳನ್ನು ಶ್ರೀನಗರದ ಕೆಲ ಪ್ರದೇಶಗಳಲ್ಲಿ ರಚಿಸಲಾಗಿದೆ. ಇದನ್ನೂ ಓದಿ: ಅಮಿತ್ ಶಾ ಕಾಶ್ಮೀರ ಭೇಟಿ – ಕೆಲ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸ್ಥಗಿತ, ದ್ವಿಚಕ್ರ ವಾಹನ ವಶ

ಜಮ್ಮು ಕಾಶ್ಮೀರದಲ್ಲಿ ಕೆಲದಿನಗಳ ಹಿಂದೆ ಉಗ್ರರಿಂದ ನಾಗರಿಕರ ಹತ್ಯೆ ಮತ್ತು ಹೆಚ್ಚಿನ ಉಪಟಳದ ಬಗ್ಗೆ ಸುದ್ದಿಯಾಗಿತ್ತು. ಅಮಿತ್ ಶಾ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪರಾಮರ್ಶೆ ನಡೆಸಲು ಈ ಭೇಟಿ ಕೈಗೊಂಡಿದ್ದು, ಉನ್ನತ ನಾಗರಿಕ ಮತ್ತು ಭದ್ರತಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಪ್ರವಾಸದ ವೇಳೆ ಗೃಹ ಇಲಾಖೆಯ ಅಧಿಕಾರಿಗಳು ಶಾ ಅವರ ಜೊತೆ ಇದ್ದು ಶ್ರೀನಗರಕ್ಕೆ ಭೇಟಿ ನೀಡಲಿದ್ದಾರೆ. ಕಾಶ್ಮೀರ ತಲುಪಿರುವ ಅಮಿತ್ ಶಾ ಮೊದಲು ನಗರದ ಹೊರವಲಯ ನೌಗಾಮ್‌ನಲ್ಲಿರುವ ಇನ್ಸ್‌ಪೆಕ್ಟರ್ ಪರ್ವೈಜ್ ಅಹ್ಮದ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ‌. ಜೂನ್ 22 ರಂದು ಸ್ಥಳೀಯ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಮರಳುತ್ತಿದ್ದ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಕಳೆದ ತಿಂಗಳು ಭಯೋತ್ಪಾದಕರಿಂದ ಹತ್ಯೆಗೀಡಾದ ಇನ್ಸ್‌ಪೆಕ್ಟರ್ ಪರ್ವೇಜ್ ಅಹ್ಮದ್ ಅವರ ನಿವಾಸಕ್ಕೆ ಅಮಿತ್ ಶಾ ಭೇಟಿ ನೀಡಿ ಪೊಲೀಸ್ ಅಧಿಕಾರಿಯ ಕುಟುಂಬಕ್ಕೆ ಶಾ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಪತ್ನಿ ಫಾತಿಮಾ ಅಖ್ತರ್ ಅವರಿಗೆ ಸರ್ಕಾರಿ ಹುದ್ದೆಯ ನೇಮಕಾತಿ ಪತ್ರ ನೀಡಿದರು‌. ಇದಾದ ಬಳಿಕ ಅಮಿತ್ ಶಾ ಅವರು ಶ್ರೀನಗರದ ರಾಜಭವನದಲ್ಲಿ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಸಂಜೆ 4.45 ಕ್ಕೆ ಜಮ್ಮು ಮತ್ತು ಕಾಶ್ಮೀರದ ಯೂತ್ ಕ್ಲಬ್‌ಗಳ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ.

ಗೃಹ ಸಚಿವರು ಕಣಿವೆ ರಾಜ್ಯಕ್ಕೆ ಭೇಟಿ ನೀಡಿರುವ ಹಿನ್ನೆಲೆ ದಾಲ್ ಸರೋವರದ ತೀರದ ಕೆಲ ರಸ್ತೆಯನ್ನು ಸಾರ್ವಜನಿಕ ಓಡಾಟಕ್ಕೆ ಇಂದಿನಿಂದ ಅಕ್ಟೋಬರ್ 25 ರವರೆಗೆ ನಿಷೇಧಿಸಲಾಗಿದೆ. ಬದಲಿ ಮಾರ್ಗಗಗಳನ್ನು ಬಳಸಲು ಸಾರ್ವಜನಿಕರಿಗೆ ಸೂಚಿಸಲಾಗಿದ್ದು, ಜೊತೆಗೆ ಹಲವು ಪ್ರದೇಶಗಳ ಇಂಟರ್‌ನೆಟ್‌ ಸೇವೆಗಳನ್ನು  ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಒಂದೇ ವಿಮಾನದಲ್ಲಿ ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ – ಇದರ ಹಿಂದಿನ ರಹಸ್ಯವೇನು?

Share This Article
Leave a Comment

Leave a Reply

Your email address will not be published. Required fields are marked *