ಅಮೆರಿಕದ ವಿಜ್ಞಾನಿಯಿಂದ ಭಾರತದಲ್ಲಿ ಬ್ರೈನ್ ಕ್ವೆಸ್ಟ್- ತಾಯ್ನಾಡಿನ ಪ್ರೇಮ ಮೆರೆದ ಪೂರ್ಣಿಮಾ ಕಾಮತ್

Public TV
3 Min Read

ಉಡುಪಿ: ಅವರು ಭಾರತದಲ್ಲಿ ಹುಟ್ಟಿ ಅಮೆರಿಕದಲ್ಲಿ ನೆಲೆಸಿರುವ ವಿಜ್ಞಾನಿ. ಕ್ಯಾನ್ಸರ್ ಉಪಶಮನ ಸಂಶೋಧನೆ ನಡೆಸುತ್ತಿರುವ ಅವರಿಗೆ ಭಾರತವನ್ನು ವಿಶ್ವಮಟ್ಟದಲ್ಲಿ ಬೆಳಗಬೇಕೆಂಬ ಕನಸು. ಕನಸು ಬೆನ್ನತ್ತಿರುವ ಅವರು ಕಳೆದ 15 ವರ್ಷದಿಂದ ನಿರಂತರ ಭಾರತಕ್ಕೆ ಬಂದು ಯುವ ವಿಜ್ಞಾನಿಗಳನ್ನು ತಯಾರು ಮಾಡುತ್ತಿದ್ದಾರೆ. ಬ್ರೈನ್ ಕ್ವೆಸ್ಟ್ ಮೂಲಕ ಮಕ್ಕಳ ಆಲೋಚನಾ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತಿದ್ದಾರೆ.

ಭಾರತದ ವಿಜ್ಞಾನಿಗಳು ವಿಶ್ವದಲ್ಲೇ ಸಿಕ್ಕಾಪಟ್ಟೆ ಟ್ಯಾಲೆಂಟೆಡ್. ಇತ್ತೀಚಿನ ವರ್ಷದಲ್ಲಿ ಇದು ಸಾಕಷ್ಟು ಬಾರಿ ಪ್ರೂವ್ ಆಗಿದೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳನ್ನು ಹುಡುಕುವ ಉದ್ದೇಶದಿಂದ ಉಡುಪಿಯ ಪೂರ್ಣಿಮಾ ಕಾಮತ್ ಬ್ರೈನ್ ಕ್ವೆಸ್ಟ್ ಎಂಬ ಕಾರ್ಯಕ್ರಮವನ್ನು ಕಳೆದ 15 ವರ್ಷದಿಂದ ಆಯೋಜಿಸಿಕೊಂಡು ಬಂದಿದ್ದಾರೆ.

ಪೂರ್ಣಿಮಾ ಕಾಮತ್ ಯಾರು?
ಉಡುಪಿ ಮೂಲದ ಅಮೆರಿಕದಲ್ಲಿ ನೆಲೆಸಿರುವ ವಿಜ್ಞಾನಿ ಪೂರ್ಣಿಮಾ ಕಾಮತ್. ಅಮೆರಿಕ ಪ್ರಜೆಯಾಗಿದ್ದರೂ ಅವರು ಭಾರತಕ್ಕೆ ಪ್ರತಿ ವರ್ಷ ಬಂದು ಬ್ರೈನ್ ಕ್ವೆಸ್ಟ್ ಕಾರ್ಯಕ್ರಮ ಮಾಡುತ್ತಾರೆ. ವಿಜ್ಞಾನ ಮೇಳ, ಮಾಡೆಲ್ ತಯಾರಿ ಸ್ಪರ್ಧೆ ಆಯೋಜಿಸಿ ಯುವ ವಿಜ್ಞಾನಿಗಳನ್ನು ತಲಾಶ್ ಮಾಡುವುದೇ ಪೂರ್ಣಿಮಾ ಅವರ ಕೆಲಸ. ಮೂವತ್ತು ವರ್ಷದ ಹಿಂದೆ ಪೂರ್ಣಿಮಾ ಅಮೆರಿಕ ಸೇರಿಕೊಂಡಿದ್ದರು. ಅಲ್ಲಿ ಕ್ಯಾನ್ಸರ್ ಚಿಕಿತ್ಸೆ ಕುರಿತಾದ ಸಂಶೋಧನೆ ಮಾಡುತ್ತಿದ್ದಾರೆ. ಅವರು ಪತಿ ಕೂಡ ವಿಜ್ಞಾನಿಯಾಗಿದ್ದಾರೆ.

ಪೂರ್ಣಿಮಾ ಅವರು ಕಳೆದ 15 ವರ್ಷದಿಂದ ಪ್ರತಿ ವರ್ಷ ಭಾರತಕ್ಕೆ ಬಂದು ಬ್ರೈನ್ ಕ್ವೆಸ್ಟ್ ಎನ್ನುವ ಮಾಡೆಲ್ ಮೇಕಿಂಗ್ ಕಾಂಪಿಟೇಶನ್ ಆಯೋಜಿಸುತ್ತಾರೆ. ಈ ಬಾರಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಸ್ಪರ್ಧೆ ಆಯೋಜಿಸಿದ್ದಾರೆ. ಈ ಮೂಲಕ ಬಾಲ ವಿಜ್ಞಾನಿಗಳನ್ನು ಗುರುತಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಜ್ಞಾನ, ಸಂಶೋಧನೆ ಮೂಲಕ ಇಲ್ಲಿನ ಮಕ್ಕಳಿಗೆ ಸಾಕಷ್ಟು ಸಲಹೆಯನ್ನೂ ಪೂರ್ಣಿಮಾ ಕಾಮತ್ ಕೊಡುತ್ತಾರೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಭಾರತದಲ್ಲಿನ ಮಕ್ಕಳು ಬಹಳ ಇಂಟೆಲಿಜೆಂಟ್ ಇರುತ್ತಾರೆ. ಬಾಲ್ಯದಿಂದಲೇ ಅವರನ್ನು ತರಬೇತಿ ಮಾಡುವ ಕೆಲಸ ಆಗಬೇಕು. ಯಾರಲ್ಲಿ ಯಾವ ಪ್ರತಿಭೆ ಅಡಗಿರುತ್ತೆ ಗೊತ್ತಿರಲ್ಲ. ಶಿಕ್ಷಕರು, ತಂದೆ ತಾಯಿ ಈ ಕಡೆ ಗಮನ ಕೊಡಬೇಕು ಎಂದು ಸಲಹೆ ನೀಡಿದರು.

ಸಿಬಿಎಸ್ಸಿ ಪಠ್ಯಕ್ರಮಕ್ಕೂ ಪೂರ್ಣಿಮಾ ಕಾಮತ್ ಸಾಕಷ್ಟು ಸಲಹೆ ನೀಡಿದ್ದಾರೆ. ಗೂಗಲ್, ಯೂಟ್ಯೂಬ್‍ನಲ್ಲಿ ಮಕ್ಕಳ ಶಿಕ್ಷಣಕ್ಕೆ ಬೇಕಾದ ಎಲ್ಲಾ ಮಾಹಿತಿಗಳಿವೆ. ಅದನ್ನು ಹೊರತುಪಡಿಸಿ ಮಕ್ಕಳ ತಲೆಯಲ್ಲಿ ಹೊಸದೇನು ಆವಿಷ್ಕಾರಗಳು ಹೊಳೆಯುತ್ತೆ ಎನ್ನುವುದನ್ನು ಒರೆಗೆ ಹಚ್ಚಬೇಕು ಎಂದು ಪೂರ್ಣಿಮಾ ತಿಳಿಸಿದ್ದಾರೆ.

ಪೂರ್ಣಿಮಾ ಅವರು ಈ ಬಾರಿ ಗ್ಲೋಬಲ್ ವಾರ್ಮಿಂಗ್ ಕಾನ್ಸೆಪ್ಟ್ ಕೊಟ್ಟಿದ್ದಾರೆ. ಈ ಬಾರಿ ಪರಿಸರ ಕಾಳಜಿಯ ಕಾನ್ಸೆಪ್ಟ್ ನಲ್ಲಿ ಮಕ್ಕಳು ಮಾಡೆಲ್‍ಗಳನ್ನು ತಯಾರು ಮಾಡಿದ್ದಾರೆ. ಈ ಹಿಂದೆ ಏಲಿಯನ್ಸ್, ಬಾಹ್ಯಾಕಾಶ, ಸೋಲಾರ್, ಮುಂತಾದ ವಿಷಯಗಳಲ್ಲಿ ವಿಜ್ಞಾನ ಮೇಳ ನಡೆಸಿ ಯಶಸ್ವಿಯಾಗಿದ್ದರು.

ಸ್ಪರ್ಧೆಯಲ್ಲಿ ಪಾಲ್ಗೊಂಡ ಇಶಾನ್ ಉಡುಪಿ ಮಾತನಾಡಿ, ನಾವು ಕಾಂಪೋಸ್ಟ್ ತಯಾರಿ ಮಾಡಿದ್ದೇವೆ. ಮನೆಯಲ್ಲೇ ಕೈತೋಟಕ್ಕೆ ಬೇಕಾದ ಗೊಬ್ಬರ ತಯಾರಿಸಬಹುದು. ಸ್ವಚ್ಛತೆ ಜೊತೆ ಉಪಯೋಗವೂ ಆಗುತ್ತದೆ. ಪರಿಸರ ಕಾಳಜಿಗೆ ಸಂಬಂಧಪಟ್ಟ ಹಲವಾರು ಮಾಡೆಲ್ ಇಲ್ಲಿಗೆ ಬಂದಿದೆ. ಸ್ಪರ್ಧೆ ಜೊತೆ ನಮಗೆಲ್ಲ ಮಾಹಿತಿ ನೀಡಿದ್ದಾರೆ. ಬಹಳ ಖುಷಿಯಾಗಿದೆ ಎಂದು ಹೇಳಿದ್ದಾರೆ.

2020ರ ನಂತರ ಪಠ್ಯಕ್ರಮ ಹೇಗಿರಬೇಕೆಂದು ಭಾರತಕ್ಕೆ ಪೂರ್ಣಿಮಾ ಸಲಹೆ ನೀಡಲಿದ್ದಾರೆ. ಇದಕ್ಕೆ ಈಗಾಗಲೇ ಕೆಲಸ ಶುರುಮಾಡಿದ್ದಾರೆ. ಪಠ್ಯ, ಪರೀಕ್ಷೆ ಹೀಗೆ ಶೈಕ್ಷಣಿಕ ವರ್ಷದ ಸಿಲೆಬಸ್ ಸಂಪೂರ್ಣ ಬದಲು ಮಾಡಬೇಕೆಂಬ ಆಲೋಚನೆ ಪೂರ್ಣಿಮಾ ಕಾಮತ್ ಅವರದ್ದು. ಈಗಾಗಲೇ ಉಡುಪಿಯಲ್ಲಿ ಯುವ ವಿಜ್ಞಾನಿಗಳ ಒಂದು ತಂಡ ಕಟ್ಟಿದ್ದಾರೆ. ವಾರ್ಷಿಕ ಬ್ರೈನ್ ಕ್ವೆಸ್ಟ್ ಗೆ ಇವರೆಲ್ಲಾ ಸಹಾಯ ಮಾಡುತ್ತಾರೆ.

ವಿದ್ಯಾರ್ಥಿನಿ ನಮೃತಾ ಮಾತನಾಡಿ, ನಾನು ಪೂರ್ಣಿಮಾ ಕಾಮತ್ ಅವರ ಶಿಷ್ಯೆ. ನಾನು ಎಂಟನೇ ಕ್ಲಾಸ್‍ನಲ್ಲಿದ್ದಾಗ ಮಾಡೆಲ್ ಮಾಡಿ ಪ್ರಶಸ್ತಿ ಗೆದ್ದಿದ್ದೆ. ಆಮೇಲೆ ನಡೆದ ಎಲ್ಲಾ ಸ್ಪರ್ಧೆಗಳಿಗೆ ನಾನು ಸಹಾಯಕಿಯಾಗಿ ಬರುತ್ತಿದ್ದೇನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *