ಕುರುಕ್ಷೇತ್ರದಲ್ಲಿ ಭೀಷ್ಮನಾಗಲು ಅಂಬರೀಶ್‍ರನ್ನು ಒಪ್ಪಿಸಿದ ಸಾಹಸ!

Public TV
2 Min Read

ಬೆಂಗಳೂರು: ನಿರ್ಮಾಪಕ ಮುನಿರತ್ನರ ಮಹಾ ಕನಸಿನಂಥಾ ಚಿತ್ರ ಕುರುಕ್ಷೇತ್ರ. ಬಹುಶಃ ಕನ್ನಡದಲ್ಲಿ ಇಷ್ಟು ದೊಡ್ಡ ತಾರಾಗಣದ, ಈ ಪಾಟಿ ಬಜೆಟ್ಟಿನ ಚಿತ್ರವೊಂದು ತೆರೆಗಾಣುತ್ತಿರೋದು ಇದೇ ಮೊದಲು. ಅದರಲ್ಲಿಯೂ ಪರಭಾಷೆಗಳಲ್ಲಿಯೂ ಈ ಸಿನಿಮಾ ಸದ್ದು ಮಾಡುತ್ತಿರೋ ರೀತಿ ಈ ಹಿಂದಿನ ರೆಕಾರ್ಡುಗಳನ್ನೆಲ್ಲ ಬ್ರೇಕ್ ಮಾಡುವಂತಿದೆ. ಕನ್ನಡದ ಪ್ರತೀ ಪ್ರೇಕ್ಷಕರೂ ಕೂಡಾ ಮಲ್ಟಿಸ್ಟಾರ್ ಚಿತ್ರಗಳಿಗಾಗಿ ಸದಾ ಹಂಬಲಿಸುತ್ತಿರುತ್ತಾರೆ. ಅದನ್ನು ದೊಡ್ಡ ಮಟ್ಟದಲ್ಲಿ ಸಾಕಾರಗೊಳಿಸಿರೋ ಕುರುಕ್ಷೇತ್ರ ರೂಪುಗೊಂಡಿದ್ದರ ಹಿಂದೆ ಇನ್ನೊಂದು ಚಿತ್ರಕ್ಕಾಗುವಷ್ಟು ರೋಚಕವಾದ ಕಥೆಗಳಿವೆ. ಅದರಲ್ಲಿ ಅಂಬರೀಶ್ ಅವರನ್ನು ಭೀಷ್ಮನ ಪಾತ್ರಕ್ಕೆ ಒಪ್ಪಿಸಿದ್ದೇ ಒಂದು ಮಜವಾದ ಕಥನ!

ಆರಂಭದಲ್ಲಿ ಕುರುಕ್ಷೇತ್ರವೆಂಬ ದೊಡ್ಡ ಕ್ಯಾನ್ವಾಸಿನ ನೀಲನಕ್ಷೆ ಸಿದ್ಧಗೊಳಿಸಿಕೊಂಡಿದ್ದ ಮುನಿರತ್ನ ಮುಖ್ಯ ಪಾತ್ರಗಳಿಗೆ ಇಂತಿಂಥಾ ನಟನಟಿಯರೇ ಇರಬೇಕೆಂದು ಅಂದುಕೊಂಡಿದ್ದರಂತೆ. ಅದರಲ್ಲಿಯೂ ದುರ್ಯೋಧನನ ಪಾತ್ರಕ್ಕಂತೂ ಎಲ್ಲಕ್ಕಿಂತ ಮೊದಲೇ ದರ್ಶನ್ ಫಿಕ್ಸಾಗಿ ಬಿಟ್ಟಿದ್ದರು. ಆ ನಂತರದಲ್ಲಿ ಉಳಿಕೆ ಪಾತ್ರಗಳಿಗೂ ನಾಯಕರ ಆಯ್ಕೆ ನಡೆದಿತ್ತು. ಕುರುಕ್ಷೇತ್ರ ಚಿತ್ರದಲ್ಲಿ ನಟಿಸೋದೇ ಖುಷಿ ಎಂಬಂತೆ ಎಲ್ಲರೂ ಉತ್ಸುಕರಾಗಿ ಒಪ್ಪಿಕೊಂಡಿದ್ದರು. ಆದರೆ ಅದಾಗಲೇ ಭೀಷ್ಮನ ಪಾತ್ರಕ್ಕೆ ಮುನಿರತ್ನ ನಿಕ್ಕಿ ಮಾಡಿಕೊಂಡಿದ್ದ ಅಂಬರೀಶ್ ಮಾತ್ರ ನಟಿಸಲು ಹಿಂದೇಟು ಹಾಕಿದ್ದರಂತೆ. ಅದಕ್ಕೆ ಕಾರಣವಾಗಿದ್ದದ್ದು ಬೇರೇನೂ ಅಲ್ಲ. ಅದಾಗಲೇ ಅನಾರೋಗ್ಯಕ್ಕೀಡಾಗಿದ್ದ ಅಂಬಿ ಆ ಕಾರಣ ಮುಂದಿಟ್ಟುಕೊಂಡು ಭೀಷ್ಮನಾಗಲು ಕೊಂಚ ಹಿಂದೇಟು ಹಾಕಿದ್ದರಂತೆ.

ಅಂಬರೀಷ್ ಅವರು ಇಂಥಾ ನಿರ್ಧಾರ ಮಾಡಿದ್ದಾರೆಂದ ಮೇಲೆ ಅವರನ್ನು ಮತ್ತೆ ಒಪ್ಪಿಸೋದು ಬಲು ಕಷ್ಟದ ಸಂಗತಿ. ಈ ಬಗ್ಗೆ ತುಂಬಾ ಸಲ ಪ್ರಯತ್ನಿಸಿ, ವಿವರಿಸಿದ ನಂತರ ಅವರು ಒಪ್ಪಿಕೊಂಡರೆ ಪುಣ್ಯ. ಇಲ್ಲೂ ಕೂಡಾ ಹಾಗೆಯೇ ಆಗಿತ್ತು. ಅನಾರೋಗ್ಯದ ಕಾರಣದಿಂದ ಭೀಷ್ಮನ ಪಾತ್ರ ನಿರ್ವಹಿಸಲು ಒಪ್ಪದಿದ್ದಾಗ ಮುನಿರತ್ನ ಮತ್ತು ದರ್ಶನ್ ಒಪ್ಪಿಸಲು ಹರಸಾಹಸ ಪಟ್ಟಿದ್ದರಂತೆ. ಕಡೆಗೂ ದರ್ಶನ್ ಅವರು ಅಂಬರೀಷ್‍ರನ್ನು ಒಪ್ಪಿಸುವ ಸಾಹಸದಲ್ಲಿ ಗೆದ್ದಿದ್ದರು. ದರ್ಶನ್ ಅಂಬಿಯ ವ್ಯಕ್ತಿತ್ವವನ್ನೇ ಹೊಂದಿದ್ದಾರೆಂಬಂತೆ ಬಿಂಬಿತರಾಗಿರುವವರು. ದರ್ಶನ್ ಅತೀವವಾಗಿ ಗೌರವಿಸುವ ವ್ಯಕ್ತಿಗಳಲ್ಲಿ ಅಂಬಿ ಪ್ರಮುಖರು. ಇನ್ನು ಅಂಬರೀಶ್ ಅವರಿಗೂ ದರ್ಶನ್ ಮೇಲೆ ಮಗನ ಮೇಲಿದ್ದಂಥಾದ್ದೇ ಪ್ರೀತಿಯಿತ್ತು. ಅಂಥಾ ದರ್ಶನ್ ಜೊತೆ ನಟಿಸೋ ಅವಕಾಶವನ್ನು ಒಲ್ಲೆ ಅನ್ನಲಾಗದೇ ಅಂಬಿ ಭೀಷ್ಮನಾಗಲು ಒಪ್ಪಿಕೊಂಡಿದ್ದರಂತೆ.

ಕುರುಕ್ಷೇತ್ರ ಶುರುವಾಗೋ ಹೊತ್ತಿಗೆಲ್ಲ ಅಂಬರೀಶ್ ಅನಾರೋಗ್ಯದಿಂದ ಕೊಂಚ ಚೇತರಿಸಿಕೊಂಡಿದ್ದರಾದರೂ ಆಯಾಸವಿನ್ನೂ ಹಾಗೇ ಇತ್ತು. ಇಂಥಾ ಬಾಧೆಗಳಿಂದ ಬಳಲುತ್ತಿದ್ದರೂ ಕೂಡಾ ಎಂದಿನ ಉತ್ಸಾಹದಿಂದಲೇ ಅಂಬಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅದೇ ಲವಲವಿಕೆಯಿಂದ ಓಡಾಡುತ್ತಾ ಆಸುಪಾಸಿನವರನ್ನು ಕಿಚಾಯಿಸುತ್ತಾ ನಿರೀಕ್ಷೆಗೂ ಮೀರಿ ಭೀಷ್ಮ ಪಾತ್ರಕ್ಕವರು ಕಳೆ ತುಂಬಿಸಿದ್ದರು. ಆದರೆ ಈ ಚಿತ್ರ ಬಿಡುಗಡೆಯಾಗೋದನ್ನು ನೋಡಲೀಗ ಅವರೇ ಇಲ್ಲ. ಆದರೆ ಕುರುಕ್ಷೇತ್ರ ರೆಬೆಲ್ ಸ್ಟಾರ್ ನಟಿಸಿರೋ ಕೊನೆಯ ಚಿತ್ರವಾಗಿ, ಅವರೊಂದಿಗಿನ ಅನೇಕ ನೆನಪುಗಳೊಂದಿಗೇ ನಾಳೆ ಬಿಡುಗಡೆಯಾಗಲಿದೆ. ಅಂಬಿಯನ್ನು ವಿಶೇಷ ಪಾತ್ರದಲ್ಲಿ, ಭೀಷ್ಮನಾಗಿ ಕಣ್ತುಂಬಿಕೊಳ್ಳೋ ಸದವಕಾಶವನ್ನು ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ.

Share This Article
Leave a Comment

Leave a Reply

Your email address will not be published. Required fields are marked *