ಅಮೆಜಾನ್ ಕಾಡು (Amazon Rainforest) ಭೂಮಿಯ ಶ್ವಾಸಕೋಶ ಇದ್ದಂತೆ. ಮನುಷ್ಯ ಸೇರಿದಂತೆ ಹಲವು ಜೀವಸಂಕುಲದ ಪ್ರಾಣವಾಯು ಆಮ್ಲಜನಕ. ಭೂಮಿಯ ಒಟ್ಟಾರೆ ಆಮ್ಲಜನಕದಲ್ಲಿ ಶೇ.20 ರಷ್ಟು ಭಾಗ ಈ ಕಾಡಿನಲ್ಲೇ ಸಿಗುತ್ತದೆ. ಕೋಟ್ಯಂತರ ಜೀವಸಂಕುಲವನ್ನು ತನ್ನ ಮಡಿಲಲ್ಲಿಟ್ಟುಕೊಂಡು ಈ ಕಾಡು ಪೊರೆಯುತ್ತಿದೆ. ಮನುಷ್ಯನಿಗೆ ಶ್ವಾಸಕೋಶ ಎಷ್ಟು ಮುಖ್ಯವೋ, ಈ ಭೂಮಿಯಲ್ಲಿರುವ ಜೀವರಾಶಿಯ ಉಸಿರಿಗೆ ಅಮೆಜಾನ್ ಮಳೆಕಾಡು ಅಷ್ಟೇ ಮುಖ್ಯ. ಅಂತಹ ಕಾಡು ಈಗ ತನ್ನ ಮರಗಳ ವಿಚಾರವಾಗಿ ಸುದ್ದಿಯಲ್ಲಿದೆ. ಭೂಮಿಗೆ ಅಮೆಜಾನ್ ಕಾಡು ಏಕೆ ಮುಖ್ಯ? ಅದರಿಂದ ಆಗುತ್ತಿರುವ ಪ್ರಯೋಜನ ಏನು? ಈಗ ಕಾಡು ಯಾಕೆ ಮತ್ತೆ ಸುದ್ದಿಯಲ್ಲಿದೆ ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.
ಅಮೆಜಾನ್ ಮಳೆಕಾಡು
ಅಮೆಜಾನ್ ಅರಣ್ಯದಲ್ಲಿ ಇರುವಷ್ಟು ಕಾಡು ಬೇರೆ ಯಾವ ಭಾಗದಲ್ಲೂ ಇಲ್ಲ. ಅಲ್ಲಿನ ವಾತಾವರಣವೇ ಇದಕ್ಕೆ ಮುಖ್ಯ ಕಾರಣ. ಸುಮಾರು 5.5 ಮಿಲಿಯನ್ ಸ್ಕ್ವೇರ್ ಕಿ.ಮೀ.ನಷ್ಟು ಅಂದರೆ, ಸುಮಾರು 130 ಕೋಟಿ ಎಕರೆಗೂ ಹೆಚ್ಚಿನ ಅರಣ್ಯ ಪ್ರದೇಶವನ್ನು ಇದು ಹೊಂದಿದೆ. ಹೆಚ್ಚಿನ ಮಳೆ, ಸದಾ ತುಂಬಿ ಹರಿಯುವ ನದಿಯಿಂದಾಗಿ ಅರಣ್ಯ ಸುತ್ತಲೂ ದಟ್ಟವಾದ ಮರಗಳು ಬೆಳೆದು ನಿಂತಿವೆ. ಇಲ್ಲಿ ನೂರಾರು ಮತ್ತು ಸಾವಿರಾರು ಜಾತಿಯ ಗಡಿ-ಮರಗಳು, ಪ್ರಾಣಿ-ಪಕ್ಷಗಳು, ಜಲಚರಗಳನ್ನು ಕಾಣಬಹುದು. ಜೀವಕೋಟಿಗೆ ಇದು ಅಪೂರ್ವ ಸಂಪತ್ತು. 427 ಸಸ್ತನಿಗಳು, 1,300 ಪಕ್ಷಿಗಳು, 378 ಸರೀಸೃಪಗಳು, 400 ಕ್ಕೂ ಹೆಚ್ಚು ಉಭಯಚರಗಳು ಮತ್ತು 2,500 ರಿಂದ 3,000 ಕ್ಕೂ ಹೆಚ್ಚು ಸಿಹಿನೀರಿನ ಮೀನುಗಳು ಅಸ್ತಿತ್ವದಲ್ಲಿವೆ. ಅಮೆಜಾನ್ ಮಳೆಕಾಡು ವಿಶ್ವದ ಅತಿದೊಡ್ಡ ಉಷ್ಣವಲಯದ ಮಳೆಕಾಡಾಗಿದ್ದು, ದಕ್ಷಿಣ ಅಮೆರಿಕಾದ ಒಂಬತ್ತು ದೇಶಗಳನ್ನು ವ್ಯಾಪಿಸಿದೆ. ಬ್ರೆಜಿಲ್, ಪೆರು, ಕೊಲಂಬಿಯಾ, ಬೊಲಿವಿಯಾ, ಈಕ್ವೆಡಾರ್, ಫ್ರೆಂಚ್ ಗಯಾನಾ, ಗಯಾನಾ, ಸುರಿನಾಮ್ ಮತ್ತು ವೆನೆಜುವೆಲಾದಲ್ಲಿ ಕಾಡು ವ್ಯಾಪಿಸಿದೆ. ಆದಾಗ್ಯೂ, ಸುಮಾರು 60% ಮಳೆಕಾಡು ಬ್ರೆಜಿಲ್‌ನಲ್ಲಿದೆ. ಇದನ್ನೂ ಓದಿ: ಟ್ರಂಪ್ ಮಾತಿಗೆ ಇಸ್ರೇಲ್ ಡೋಂಟ್ ಕೇರ್ – ಗಾಜಾ ಮೇಲೆ ಮತ್ತೆ ವೈಮಾನಿಕ ದಾಳಿ, 6 ಮಂದಿ ಸಾವು
ಕಾಡಿನ ಪ್ರಯೋಜನ ಏನು?
ಹವಾಮಾನ ನಿಯಂತ್ರಣದಲ್ಲಿ ಅಮೆಜಾನ್ ಕಾಡು ಪ್ರಮುಖ ಪಾತ್ರ ವಹಿಸುತ್ತದೆ. ಕೋಟ್ಯಂತರ ಟನ್ ಇಂಗಾಲವನ್ನು ಹೀರಿಕೊಂಡು ವಾತಾವರಣಕ್ಕೆ ಬಿಡುಗಡೆಯಾಗುವುದನ್ನು ತಡೆಯುತ್ತದೆ. ಅಮೆಜಾನ್ ಭೂಮಿಯ ಮೇಲೆ ಕಂಡುಬರುವ ಶೇ.10 ಕ್ಕಿಂತ ಹೆಚ್ಚು ಜೀವವೈವಿಧ್ಯವನ್ನು ಹೊಂದಿದೆ. ಭೂಮಿಯ ಉಷ್ಣವಲಯದ ಕಾಡುಗಳಲ್ಲಿ ಸಂಗ್ರಹವಾಗುವ ಇಂಗಾಲದ 3ನೇ ಒಂದು ಭಾಗಕ್ಕಿಂತ ಹೆಚ್ಚು ಅಮೆಜಾನ್ ಕಾಡಿನಲ್ಲಿದೆ. ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಹವಾಮಾನ ಬದಲಾವಣೆ ತಡೆಯುತ್ತದೆ. ಜೀವವೈವಿಧ್ಯತೆ ಕಾಪಾಡುತ್ತದೆ. ಭೂಮಿ ಮೇಲೆ ಮಳೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದು ವಿಶ್ವದಾದ್ಯಂತ ನೀರಿನ ಚಕ್ರಕ್ಕೆ ಕೊಡುಗೆ ನೀಡುತ್ತದೆ. ವಿಶ್ವಕ್ಕೆ ಔಷಧೀಯ ಪ್ರಯೋಜನ ಇದರಿಂದ ಸಿಗುತ್ತಿದೆ.
ಅಮೆಜಾನ್ ಕಾಡಿನಲ್ಲಿ ಹೆಚ್ಚುತ್ತಿದೆ ಮರಗಳ ಗಾತ್ರ
ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ (CO2) ಹೆಚ್ಚುತ್ತಿರುವ ಕಾರಣದಿಂದಾಗಿ ಅಮೆಜಾನ್ ಮಳೆಕಾಡಿನಲ್ಲಿರುವ ಮರಗಳ ಗಾತ್ರವು ಹೆಚ್ಚುತ್ತಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ಮರಗಳು ಗಾತ್ರದಲ್ಲಿ ಶೇ.3 ಕ್ಕಿಂತ ಹೆಚ್ಚು ಕಾಣುತ್ತಿದೆ. ಸೆಪ್ಟೆಂಬರ್ 25 ರಂದು ನೇಚರ್ ಪ್ಲಾಂಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯೊಂದು ಈ ಅಂಶವನ್ನು ಬಹಿರಂಗಪಡಿಸಿದೆ. ದಕ್ಷಿಣ ಅಮೆರಿಕಾ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ವಿಶ್ವದಾದ್ಯಂತ 60 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಸುಮಾರು 100 ವಿಜ್ಞಾನಿಗಳ ಅಂತರರಾಷ್ಟ್ರೀಯ ತಂಡವು ಈ ಸಂಶೋಧನೆ ನಡೆಸಿದೆ.
ವಿಜ್ಞಾನಿಗಳು ಅಮೆಜಾನ್ ಜಲಾನಯನ ಪ್ರದೇಶದಾದ್ಯಂತ ಸರಾಸರಿ 12,000 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ 188 ಶಾಶ್ವತ ಅರಣ್ಯ ಪ್ಲಾಟ್‌ಗಳಾದ್ಯಂತ ಮರಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. 30 ವರ್ಷಗಳ ದೀರ್ಘಾವಧಿಯ ಸಂಶೋಧನೆಗಳು ಕೂಡ ನಡೆದಿವೆ. ಈ ಸಮಯದಲ್ಲಿ ಪ್ರತಿ ದಶಕದಲ್ಲಿ (10 ವರ್ಷಕ್ಕೊಮ್ಮೆ) ಮರಗಳು ಸರಾಸರಿ 3.3% ನಷ್ಟು ದಪ್ಪ ಆಗುತ್ತಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ, ಕಾಡಿನ ಪ್ರದೇಶದಲ್ಲಿನ ಮರಗಳ ಗಾತ್ರವು ಸರಿಸುಮಾರು ಒಂದೇ ಆಗಿರುತ್ತದೆ. ಏಕೆಂದರೆ ಸಸಿಗಳು ಬಿದ್ದ ದೊಡ್ಡ ಮರಗಳ ಸ್ಥಾನವನ್ನು ಪಡೆದು ಬೆಳೆಯುತ್ತವೆ. ಆದರೆ, ವಾತಾವರಣದ CO2 ಹೆಚ್ಚಳದಿಂದಾಗಿ ಮರಗಳ ಗಾತ್ರದಲ್ಲಿ ಬದಲಾವಣೆ ಕಂಡುಬರುತ್ತಿದೆ. ಕಳೆದ 30 ವರ್ಷಗಳಲ್ಲಿ ಸುಮಾರು ಐದನೇ ಒಂದು ಭಾಗದಷ್ಟು ಮರಗಳು ಗಾತ್ರದಲ್ಲಿ ಹೆಚ್ಚಳ ಕಂಡಿವೆ. ಇಂಗಾಲದ ಫಲೀಕರಣ ಪರಿಣಾಮ ಎಂದು ಕರೆಯಲ್ಪಡುವ ವಿದ್ಯಮಾನದಿಂದಾಗಿ CO2 ಮಟ್ಟಗಳ ಏರಿಕೆಯು ಮರದ ಬೆಳವಣಿಗೆಗೆ ಪ್ರಯೋಜನ ನೀಡುತ್ತಿದೆ. ವಾತಾವರಣದಲ್ಲಿ CO2 ದ್ಯುತಿಸಂಶ್ಲೇಷಣೆಯ ದರವನ್ನು ಹೆಚ್ಚಿಸುತ್ತದೆ. ಇದು ಕೆಲವು ಸಸ್ಯಗಳಲ್ಲಿ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ. ಇದನ್ನೂ ಓದಿ: ಭಾರತ ನನ್ನ ಮಾತೃಭೂಮಿ, ಪಾಕಿಸ್ತಾನ ನನ್ನ ಜನ್ಮಭೂಮಿ – ಪಾಕ್ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ
ಇದು ಏಕೆ ಮಹತ್ವದ್ದಾಗಿದೆ?
ದೊಡ್ಡದಾದ ಮರಗಳು ಹಿಂದಿನದಕ್ಕಿಂತ ಹೆಚ್ಚು ಇಂಗಾಲವನ್ನು ಹೀರಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನ ಸಿಗಲಿದೆ. CO2 ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತಿದೆ. ಮರಗಳ ಬೆಳವಣಿಗೆಯನ್ನು ಹೆಚ್ಚಿಸುತ್ತಿದೆ. ಮರವು ಜಾಗತಿಕವಾಗಿ ಮಹತ್ವದ ಇಂಗಾಲದ ಸಿಂಕ್ ಆಗಿರುವುದರಿಂದ ಹಲವು ವಿಧಗಳಲ್ಲಿ ಇದು ಭರವಸೆ ನೀಡುತ್ತದೆ ಎಂದು ಡರ್ಹ್ಯಾಮ್ ವಿಶ್ವವಿದ್ಯಾಲಯದ (ಯುಕೆ) ಸಂಶೋಧಕ ಪೀಟರ್ ಎಚೆಲ್ಸ್ ತಿಳಿಸಿದ್ದಾರೆ. CO2ನಿಂದ ಸಾಕಷ್ಟು ಪ್ರಯೋಜನ ಸಿಗುತ್ತಿದೆ. ಆದರೆ, ಅರಣ್ಯ ನಾಶದಿಂದ ಪರಿಸರ ವ್ಯವಸ್ಥೆಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ದಪ್ಪ ಆಗ್ತಿರೋದು ಅಮೆಜಾನ್ ಕಾಡು ಮರಗಳು ಮಾತ್ರವೇ?
ಮರಗಳ ಗಾತ್ರದಲ್ಲಿನ ಬದಲಾವಣೆಗೆ ತೆರೆದುಕೊಂಡಿರುವ ಏಕೈಕ ಅರಣ್ಯ ಅಮೆಜಾನ್ ಅಷ್ಟೇ ಅಲ್ಲ. ಕೆನಡಾದ ನ್ಯೂ ಬ್ರನ್ಸ್‌ವಿಕ್ ವಿಶ್ವವಿದ್ಯಾಲಯದ 2023 ರ ಅಧ್ಯಯನವು, ಬೆಚ್ಚಗಿನ ತಾಪಮಾನ ಮತ್ತು ಅವು ತರುವ ದೀರ್ಘ ಬೆಳವಣಿಗೆಯ ಋತುಗಳಿಂದಾಗಿ ಬೋರಿಯಲ್ ಕಾಡುಗಳು (ಉತ್ತರ ಎತ್ತರದ ಅಕ್ಷಾಂಶದ ಕಾಡುಗಳು) 2050 ರ ಹೊತ್ತಿಗೆ ಶೇ.20 ರಷ್ಟು ವೇಗವಾಗಿ ಬೆಳೆಯುತ್ತವೆ ಎಂದು ತಿಳಿಸಿದೆ.
12.1 ಕೋಟಿ ಎಕರೆಯಷ್ಟು ಕಾಡು ನಾಶ!
ಸಸ್ಯವರ್ಗದ ಅಗಾಧ ಸಾಂದ್ರತೆಯನ್ನು ಅಮೆಜಾನ್ ಕಾಡು ಹೊಂದಿದೆ. ಹವಾಮಾನ ಬದಲಾವಣೆಯ ವಿರುದ್ಧ ಮನುಷ್ಯನ ಹೋರಾಟದಲ್ಲಿ ಈ ಕಾಡು ಕೇಂದ್ರಬಿಂದು. ಇದು ಹಸಿರುಮನೆ ಅನಿಲ ಹೊರಸೂಸುವಿಕೆಗೆ ಪ್ರಮುಖ ಇಂಗಾಲದ ಸಿಂಕ್ ಆಗಿ ಕಾರ್ಯನಿರ್ವಹಿಸುತ್ತದೆ. ವಿಸ್ತಾರವಾದ ಮಳೆಕಾಡು ಭೂಮಿಯಿಂದ ಹೀರಿಕೊಳ್ಳಲ್ಪಟ್ಟ CO2 ನ ನಾಲ್ಕನೇ ಒಂದು ಭಾಗವನ್ನು ತನ್ನ ಒಡಲಿಗೆ ಸೆಳೆದುಕೊಳ್ಳುತ್ತಿದೆ. ಪರಿಣಾಮವಾಗಿಯೇ ಕಳೆದ 40 ವರ್ಷಗಳಲ್ಲಿ, ಅಮೆಜಾನ್ ಸರಿಸುಮಾರು 12.1 ಕೋಟಿ ಎಕರೆ ಮಳೆಕಾಡನ್ನು ಕಳೆದುಕೊಂಡಿದೆ. ಇದು ಬ್ಯಾಡ್ ನ್ಯೂಸ್ ಎಂದೇ ಹೇಳಬಹುದು.
ಬರ & ಬಿರುಗಾಳಿಗೆ ಮರಗಳು ಬೀಳುತ್ತವೆಯೇ?
ಬರ ಮತ್ತು ಬಲವಾದ ಬಿರುಗಾಳಿಗೆ ದೊಡ್ಡ ಮರಗಳು ಬೇರು ಸಮೇತ ಬೀಳುತ್ತವೆ ಎಂಬುದು ತಜ್ಞರ ಅಭಿಪ್ರಾಯ. ಆದರೆ, ಅಮೆಜಾನ್ ಮಳೆಕಾಡಿನಲ್ಲಿ ದಪ್ಪ ಆಗುತ್ತಿರುವ ಮರಗಳು ಈ ಮಾತನ್ನೇ ಸುಳ್ಳಾಗಿಸಿದೆ. ಮರಗಳು ತುಂಬಾ ಬಲವಾಗಿ ನಿಂತಿವೆ. 10 ವರ್ಷಗಳಿಗೊಮ್ಮೆ ತಮ್ಮ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಿವೆ. ಅಮೆಜಾನ್ ಪರಿಸರ ವ್ಯವಸ್ಥೆ ಸರಿಯಾಗಿದ್ದರೆ ಮಾತ್ರ ದೈತ್ಯ ಮರಗಳು ಆರೋಗ್ಯಕರವಾಗಿ ಉಳಿಯಲು ಸಾಧ್ಯ. ಅರಣ್ಯ ನಾಶವು ಅಮೆಜಾನ್ ಕಾಡಿಗೆ ಕಂಟಕವಾಗಿದೆ. ಪಳೆಯುಳಿಕೆ ಇಂಧನಗಳಿಂದ ಹಸಿರು ಶಕ್ತಿಯ ಭವಿಷ್ಯಕ್ಕೆ ನಾವು ಪರಿವರ್ತನೆಗೊಳ್ಳುತ್ತಿದ್ದೇವೆ. ಈ ಬೆಳವಣಿಗೆ ಪ್ರಪಂಚದಾದ್ಯಂತ ಮಳೆಕಾಡುಗಳ ಸಮೃದ್ಧಿಗೆ ಕೊಡುಗೆ ನೀಡಲಿದೆ.