ಭಾರೀ ಮಳೆಯಿಂದಾಗಿ ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

Public TV
1 Min Read

ಶ್ರೀನಗರ: ಭಾರೀ ಮಳೆಯಿಂದಾಗಿ ಇಂದು (ಶನಿವಾರ) ಗುಹಾ ದೇಗುಲಕ್ಕೆ ಎರಡೂ ಮಾರ್ಗಗಳಲ್ಲಿ ಅಮರನಾಥ ಯಾತ್ರೆಯನ್ನು (Amarnath Yatra) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿಯಿಂದ ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಭಾರೀ ಮಳೆ ಸುರಿದಿದೆ. ಹೀಗಾಗಿ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಇದುವರೆಗೆ 1.50 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು 3,800 ಮೀಟರ್ ಎತ್ತರದ ಗುಹಾಂತರ ದೇಗುಲಕ್ಕೆ ಭೇಟಿ ನೀಡಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಲಿಂಗದ ದರ್ಶನವನ್ನು ಪಡೆದಿದ್ದಾರೆ. ಸುಮಾರು 4.5 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಕಳೆದ ವರ್ಷ ಗುಹಾ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಆಗಸ್ಟ್ 19 ರವರೆಗೆ ಯಾತ್ರೆ ಮುಂದುವರಿಯಲಿದೆ. ಯಾತ್ರೆಯ ಮೊದಲ ವಾರದಲ್ಲಿ ದಾಖಲೆಯ 1.51 ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡಿದ್ದರು. ಆದರೆ ಸದ್ಯ ಪವಿತ್ರ ಗುಹೆಯಲ್ಲಿನ ಮಂಜುಗಡ್ಡೆಯ ಶಿವಲಿಂಗವು ಸಂಪೂರ್ಣವಾಗಿ ಕರಗಿದ ಕಾರಣ ಈಗಷ್ಟೇ ಬಂದಿರುವ ಯಾತ್ರಿಕರು ನಿರಾಶೆಗೊಂಡಿದ್ದಾರೆ.

ಕಳೆದ ಒಂದು ವಾರದಲ್ಲಿ ಅತಿ ಹೆಚ್ಚು ತಾಪಮಾನದಿಂದಾಗಿ ಶಿವಲಿಂಗ ಕರಗುವ ಪ್ರಕ್ರಿಯೆಯು ವೇಗಗೊಂಡಿದೆ. 2008 ರ ನಂತರ ಯಾತ್ರೆಯ ಮೊದಲ 10 ದಿನಗಳಲ್ಲಿ ಮಂಜುಗಡ್ಡೆಯ ಶಿವಲಿಂಗವು ಸಂಪೂರ್ಣವಾಗಿ ಕಣ್ಮರೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Share This Article