ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದ ಅಂಬಿ ಆಪ್ತ – ರಮ್ಯಾಗೆ ಎಂಪಿ ಟಿಕೆಟ್ ಸಿಕ್ಕ ಗುಟ್ಟು ಬಹಿರಂಗಗೊಳಿಸಿದ್ರು!

Public TV
2 Min Read

ಮಂಡ್ಯ: ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಸಂದರ್ಭ ನೆನೆದು ಬಹಿರಂಗ ಸಭೆಯಲ್ಲಿ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ಕಣ್ಣೀರು ಹಾಕಿದ್ದಾರೆ.

ಇಂದು ನಗರದ ಪಾಂಡುರಂಗ ಸಮುದಾಯ ಭವನದಲ್ಲಿ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅಮರಾವತಿ ಚಂದ್ರಶೇಖರ್, ಶಾಸಕ ಅಂಬರೀಶ್ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. 20 ವರ್ಷಗಳಿಂದ ನಮ್ಮ ನಾಯಕರಾದ ಅಂಬರೀಶ್ ಜೊತೆ ನಾವೆಲ್ಲರೂ ಇದ್ದೇವೆ. ನಮ್ಮ ಕಷ್ಟ ಸುಖದಲ್ಲಿ ಅವರು ಪಾಲ್ಗೊಂಡಿದ್ದಾರೆ. ಆದರೆ ಅಂಬರೀಶ್ ಅವರ ಆರೋಗ್ಯದ ಕಾರಣದಿಂದ ಒಳ್ಳೇ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂಬುದು ನನ್ನ ಭಾವನೆ. ಏಕಾ ಏಕಿ ಎಲ್ಲವನ್ನು ತ್ಯಜಿಸಿ ಪಕ್ಷದ ಕಾರ್ಯಕರ್ತರಿಗೆ ಆಘಾತ ಉಂಟು ಮಾಡಿ ಅವರು ಮೌನವಹಿಸಿದ್ದಾರೆ. ಅಂಬರೀಶ್ ವಿರುದ್ಧ ಚುನಾವಣೆಗೆ ನಿಲ್ಲಬೇಕು ಎಂದು ನಾನು ಬಿ-ಫಾರಂ ಕೇಳಲಿಲ್ಲ. ಚುನಾವಣೆಗೆ ಸ್ಪರ್ಧಿಸುವ ಆಸೆಯೂ ನನಗಿರಲಿಲ್ಲ. ಆದರೆ ಕೊನೆಗೆ ಈ ಬಹುಮಾನ ತೆಗೆದುಕೊಂಡು ಈಚೆಗೆ ಬಂದೆ. ಇದು ತುಂಬಾ ಬೇಸರದ ಸಂಗತಿ ಎಂದು ತಮ್ಮ ಬೆಂಬಲಿಗರೆದುರು ಕಣ್ಣೀರು ಹಾಕಿದರು. ಇದನ್ನು ಓದಿ: ಅಮರಾವತಿಗೆ ಅಂಬರೀಷ್ ಮಂಗಳಾರತಿ!

ರಮ್ಯಾ ಗೆ ಟಿಕೆಟ್ ಸಿಕ್ಕಿದ್ದು ಹೇಗೆ? ಇದೇ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಂಸದೆ ರಮ್ಯಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರ ಬಗ್ಗೆ ಗುಟ್ಟು ಬಿಚ್ಚಿಟ್ಟಿರು. ರಮ್ಯಾ ಅವರಿಗೆ ಎರಡು ಬಾರಿ ಮಂಡ್ಯ ಲೋಕಸಭೆ ಕ್ಷೇತ್ರದ ಟಿಕೆಟ್ ನೀಡಿದಾಗಲೂ ಅಸಮಾಧಾನ ನನಗಿತ್ತು. ಈ ಹಿಂದೆ ಎಂಪಿ ಚುನಾವಣೆಯಲ್ಲಿಯೂ ಹೈಕಮಾಂಡ್ ಏಕಾಏಕಿ ರಮ್ಯಾ ಅವರಿಗೆ ಟಿಕೆಟ್ ನೀಡಿತ್ತು. ಆದರು ನಾವೆಲ್ಲರೂ ಸೇರಿ ಗೆಲ್ಲಿಸಿದ್ದೇವು. ಮತ್ತೆ ಆರು ತಿಂಗಳಲ್ಲಿ ಎಂಪಿ ಎಲೆಕ್ಷನ್ ಬಂತು. ಅಂಬರೀಶ್ ಅವರಿಗೆ ಅನಾರೋಗ್ಯದ ಕಾರಣದಿಂದ ಸಿಂಗಾಪೂರದಲ್ಲಿದ್ದರು. ಮತ್ತೆ ರಮ್ಯಾ ಅವರಿಗೆ ಟಿಕೆಟ್ ಕೊಟ್ಟರು. ಎಲೆಕ್ಷನ್ ಹೇಗೆ ಮಾಡುವುದು ಎಂಬ ಗೊಂದಲವಿತ್ತು. ಚುನಾವಣೆ ಮಾಡುವುದು ಕಾಂಗ್ರೆಸ್‍ನಲ್ಲಿ ಇಷ್ಟ ಇರಲಿಲ್ಲ. ಈ ವೇಳೆ ಅಂಬರೀಶ್ ಸಿಂಗಾಪುರದಲ್ಲಿದ್ದಾರೆ ಇನ್ನು ಯಾರು ಚುನಾವಣೆ ಮಾಡಬೇಕು, ನೀನೇ ಚುನಾವಣೆ ಮಾಡಬೇಕು ಎಂದು ಸಿದ್ದರಾಮಯ್ಯ ಗದರಿದ್ರು. ಅದ್ದರಿಂದ ಚುನಾವಣೆಯಲ್ಲಿ ಗೆಲುವುಗಾಗಿ ಶ್ರಮ ವಹಿಸಿದ್ದೆವು ಎಂದರು.

ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ರಮ್ಯಾ ಸೋತರು. ಅವತ್ತು ಸೋತವರು ಮತ್ತೆ ಕ್ಷೇತ್ರದಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಮಂಡ್ಯ ಜಿಲ್ಲೆಯ ನಾಯಕರು, ಕಾರ್ಯಕರ್ತರನ್ನು ಕೇಳದೇ ಪಕ್ಷದ ಹಿರಿಯರು ಎಲ್ಲೋ ಕುಳಿತು ಬಿ-ಫಾರಂ ಕೊಡುತ್ತಾರೆ. ಬಿಫಾರಂ ಪಡೆದು ಬಂದವರು ಚುನಾವಣೆ ಮಾಡಿಕೊಂಡು ಹೋಗುತ್ತಾರೆ. ಕ್ಷೇತ್ರದ ಜನರ ಕಷ್ಟ ಕೇಳುವವರು ಯಾರು ಎಂದು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಪ್ರಶ್ನಿಸಿದರು.

ಸದ್ಯ ಮಂಡ್ಯ ಕ್ಷೇತ್ರದ ಬಿ ಫಾರಂ ಕೊಟ್ಟಿದ್ದೀರಿ. ನಾವು ಚುನಾವಣೆ ಮಾಡುತ್ತೇವೆ. ಆದರೆ ಹೈಕಮಾಂಡ್ ಬಂದು ಮಾತನಾಡಿ ಕಷ್ಟ ಸುಖದಲ್ಲಿ ಇರುತ್ತೇವೆ ಎಂದು ನಾಯಕತ್ವ ಕೊಡಲಿ. ಇಲ್ಲದಿದ್ದರೆ ಕ್ಷೇತ್ರ ಗೊಂದಲವಾಗೇ ಇರುತ್ತೆ ಎಂದು ಪಕ್ಷದ ವರಿಷ್ಠರಿಗೆ ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *