ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಗಾವಣೆ

Public TV
1 Min Read

ಬೆಂಗಳೂರು: ನಗರದ ಪೊಲೀಸ್ ಆಯುಕ್ತರಾಗಿ ನೇಮಕವಾದ ಕೆಲವೇ ದಿನಗಳಲ್ಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ನೂತನ ಸರ್ಕಾರ ಆದೇಶ ನೀಡಿದ್ದು, ಈ ಸ್ಥಾನಕ್ಕೆ ಭಾಸ್ಕರ್ ರಾವ್ ಅವರನ್ನು ನೇಮಕ ಮಾಡಲಾಗಿದೆ.

ಎಡಿಜಿಪಿ ಆಗಿದ್ದ ಅಲೋಕ್ ಕುಮಾರ್ ಅವರನ್ನು 45 ದಿನಗಳ ಹಿಂದೆಯಷ್ಟೇ ಮೈತ್ರಿ ಸರ್ಕಾರ ನಗರದ ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಸದ್ಯ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‍ಆರ್ ಪಿ) ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಕೆಎಸ್‍ಆರ್ ಪಿ ಎಡಿಜಿಪಿಯಾಗಿದ್ದ ಭಾಸ್ಕರ್ ರಾವ್ ಅವರನ್ನು ಪೊಲೀಸ್ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿದೆ.

ಸಮ್ಮಿಶ್ರ ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡುವ ವೇಳೆ ನಿಯಮಗಳನ್ನು ಮೀರಿ ಆದೇಶ ಮಾಡಿರುವುದೇ ಅವರ ವರ್ಗಾವಣೆ ಕಾರಣ ಎನ್ನಲಾಗಿದೆ. ಅಲೋಕ್ ಕುಮಾರ್ ಅವರನ್ನು ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಿದ್ದ ಸಂದರ್ಭದಲ್ಲೂ ಕೆಲವರು ನೇಮಕ ಕುರಿತು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಸದ್ಯ ನೂತನ ಸರ್ಕಾರ ವರ್ಗಾವಣೆ ಮಾಡಿ ಈ ವಿವಾದಕ್ಕೆ ತೆರೆ ಎಳೆದಿದೆ.

ಸದ್ಯ ನೂತನವಾಗಿ ಆಯ್ಕೆ ಆಗಿರುವ ಭಾಸ್ಕರ್ ರಾವ್ ಅವರು ಬೆಂಗಳೂರಿನವರೇ ಆಗಿದ್ದು, ಆ ಮೂಲಕ ಬೆಂಗಳೂರು ನಗರದವರೆ ಕಮಿಷನರ್ ಆಗಿದ್ದಾರೆ. ಅಲೋಕ್ ಕುಮಾರ್ ಸೇರಿದಂತೆ 6 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.

ಯಾರು ಎಲ್ಲಿಗೆ ವರ್ಗಾವಣೆ?
ಹೇಮಂತ್ ನಿಂಬಾಳ್ಕರ್- ಐಜಿಪಿ, ಆಡಳಿತ, ಬೆಂಗಳೂರು
ರವಿಕಾಂತೇಗೌಡ – ಜಂಟಿ ಆಯುಕ್ತ, ಪಶ್ಚಿಮ, ಬೆಂಗಳೂರು ನಗರ
ದೇವರಾಜ್ – ಎಸ್‍ಪಿ, ಸಿಐಡಿ
ಆರ್ ಚೇತನ್ – ಎಸ್‍ಪಿ, ಕೋಸ್ಟಲ್ ಸೆಕ್ಯುರಿಟಿ
ಎಂ ಅಶ್ವಿನಿ – ಡಿಸಿಪಿ, ಗುಪ್ತಚರ, ಬೆಂಗಳೂರು
ಉಮೇಶ್ ಕುಮಾರ್ – ಡಿಸಿಪಿ, ಅಗ್ನಿಶಾಮಕದಳ

Share This Article
Leave a Comment

Leave a Reply

Your email address will not be published. Required fields are marked *