– ಎಂಥೆಂಥವರೋ ಏನೇನೊ ಆದ್ರೂ, ನಡೆ ಬದಲಿಸಿಕೊಳ್ಳಿ – ಸಂಸದರ ವಿರುದ್ಧ ವಕೀಲ ಗರಂ
ಹಾಸನ: ಸಂಸದ ಶ್ರೇಯಸ್ ಪಟೇಲ್ (MP Shreyas Patel) ವಿರುದ್ಧದ ಆಸ್ತಿ ವಿವರ ಮುಚ್ಚಿಟ್ಟ ಆರೋಪದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಈ ಸಂಬಂಧ ವಕೀಲ ಪೂರ್ಣಚಂದ್ರ ತೇಜಸ್ವಿ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಡಿಸಿ ಕಛೇರಿಯ ಕಟ್ಟಡದಲ್ಲಿರುವ ಸಂಸದರ ಕಛೇರಿಗೆ ನೋಟಿಸ್ ಅಂಟಿಸಿದ್ದಾರೆ. ಅಕ್ಟೋಬರ್ 6 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್‍ನಲ್ಲಿ ಸೂಚಿಸಲಾಗಿದೆ. ಇದನ್ನೂ ಓದಿ: ಬೀದಿ ನಾಯಿಗಳನ್ನ ಹಿಡಿಯಿರಿ, ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಬಿಟ್ಟುಬಿಡಿ: ಸುಪ್ರೀಂ ತೀರ್ಪಿನಲ್ಲಿ ಮಹತ್ವದ ತಿದ್ದುಪಡಿ
ಲೋಕಸಭಾ ಚುನಾವಣೆ (Lok Sabha Election) ವೇಳೆ ತಮ್ಮ ತಾತ ಮಾಜಿ ಸಂಸದ ಜಿ.ಪುಟ್ಟಸ್ವಾಮಿಗೌಡರ ಹೆಸರಿನಲ್ಲಿ ಬೆಂಗಳೂರಿನಲ್ಲಿರುವ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ವಿವರ ಮುಚ್ಚಿಟ್ಟ ಆರೋಪ ಸಂಸದರ ಮೇಲಿದೆ. ಇನ್ನೂ ಚುನಾವಣೆಗೂ ಮುನ್ನ ತಾತನ ಆಸ್ತಿಗೆ ಸಂಸದರು ತೆರಿಗೆ ಕಟ್ಟಿದ್ದರು. ಈ ಹಿಂದೆ ಆಸ್ತಿ ವಿವರ ಮುಚ್ಚಿಟ್ಟ ಪ್ರಕರಣದಲ್ಲೇ ಸದಸ್ಯತ್ವದಿಂದ ಮಾಜಿ ಸಂಸದ ಪ್ರಜ್ವಲ್‍ರೇವಣ್ಣ ಅನರ್ಹಗೊಂಡಿದ್ದ. ಇದೇ ಆರೋಪದ ಕೇಸ್ ದಾಖಲಿಸಿ ಸದಸ್ಯತ್ವ ಅನರ್ಹಕ್ಕೆ ಜೆಡಿಎಸ್ (JDS) ಕೇಸ್ ದಾಖಲಿಸಿದೆ.
ಹೈಕೋರ್ಟ್‍ನಲ್ಲಿ ದಾಖಲಾದ ದೂರು ವಜಾಗೊಂಡಿದ್ದ ಹಿನ್ನೆಲೆ, ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಕೆ ಮಾಡಲಾಗಿದ್ದು, ದೂರು ಸ್ವೀಕಾರ ಮಾಡಿ, ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ಬಗ್ಗೆ ಸಂಸದರಿಗೆ ನೋಟಿಸ್‍ನ್ನು ಖುದ್ದಾಗಿ ನಿಡುವುದಾಗಿಯೂ ವಕೀಲರು ತಿಳಿಸಿದ್ದಾರೆ.
ನೋಟಿಸ್ ಅಂಟಿಸಲು ಬಂದಾಗ ವಕೀಲರತ್ತ ತಿರುಗಿ ನೋಡದೆ ಶ್ರೇಯಸ್ ಪಟೇಲ್ ತೆರಳಿದ್ದಾರೆ. ಈ ವೇಳೆ ಗರಂ ಆದ ವಕೀಲರು, ಕೋರ್ಟ್ ಸೂಚನೆಯಂತೆ ನಾನು ಬಂದಿದ್ದೇನೆ. ಯುವ ಸಂಸದರಾಗಿ ಕಾನೂನಿಗೆ ಗೌರವ ಕೊಡಬೇಕಿತ್ತು. ಇವರ ನಡೆ ಹೀಗಿರುತ್ತೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಸಂಸದರು ತಮ್ಮ ನಡೆ ಬದಲಾಯಿಸಿಕೊಳ್ಳಬೇಕು. ಸಂಸದರು ವಕೀಲ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ನೋಟಿಸ್ ಸ್ವೀಕಾರ ಮಾಡದೆ ಹೋದರೆ ಬೇಡ ಎನ್ನಬೇಕಿತ್ತು ಎಂದು ಕಿಡಿಕಾರಿದ್ದಾರೆ.
ಇದನ್ನೇ ನಾನು ಕೋರ್ಟ್‍ಗೆ ಹೇಳುತ್ತೇನೆ. ಹಾಗಿದ್ದರೆ ಅವರು ಕೋರ್ಟ್‍ಗೆ ಹಾಜರಾಗುವುದಿಲ್ಲವೇ? ಸುಪ್ರೀಂ ಕೋರ್ಟ್‍ನಲ್ಲಿ ವಾದ ಮಾಡಲು ವಕೀಲರ ನೇಮಕ ಮಾಡಿಕೊಳ್ಳುವುದಿಲ್ಲವೇ? ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಎಂಥೆಂಥವರೋ ಏನೇನೊ ಆಗಿದ್ದಾರೆ. ನಿಮ್ಮ ನಡೆ ಬದಲಾಯಿಸಿಕೊಳ್ಳಿ ಎಂದು ಸಂಸದರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮಂಗಳೂರು | ಕುಡುಪುವಿನಲ್ಲಿ ಅಶ್ರಫ್ ಕೊಲೆ ಪ್ರಕರಣ – 10 ಆರೋಪಿಗಳ ಜಾಮೀನು ಅರ್ಜಿ ವಜಾ