ರೈಲ್ವೆ ಸೇವೆಗಳೆಲ್ಲವೂ ಈಗ ಒಂದೇ ಕಡೆ – `Railone App’ ಬಿಡುಗಡೆ

2 Min Read

ನವದೆಹಲಿ: ಭಾರತೀಯ ರೈಲ್ವೆಯು ತನ್ನ ಅಧಿಕೃತ `ಆಲ್-ಇನ್-ಒನ್’ ಸೂಪರ್ ಆ್ಯಪ್ ಆದ `ರೈಲ್‌ಒನ್’ (Rail one) ಅನ್ನು ಬಿಡುಗಡೆ ಮಾಡಿದೆ.

ಈ ಆ್ಯಪ್ ಪ್ರಯಾಣಿಕರಿಗೆ ಹಲವಾರು ರೈಲ್ವೆ ಸೇವೆಗಳನ್ನು ಪಡೆಯಲು ಸುಲಭ ಮತ್ತು ಅನುಕೂಲಕರ ಡಿಜಿಟಲ್ ವೇದಿಕೆಯನ್ನು ಒದಗಿಸುತ್ತದೆ. ಈ ಮೂಲಕ ಹಲವಾರು ಸೌಲಭ್ಯಗಳನ್ನು ಪ್ರಯಾಣಿಕರು ಒಂದೇ ಆ್ಯಪ್‌ನಡಿಯಲ್ಲಿ ಪಡೆದುಕೊಳ್ಳುತ್ತಾರೆ. ರೈಲ್ವೆ ಪ್ರಯಾಣವನ್ನು ಹೆಚ್ಚು ಸ್ಮಾರ್ಟ್, ವೇಗ ಮತ್ತು ತೊಂದರೆರಹಿತವಾಗಿಸುತ್ತದೆ. ಇದನ್ನೂ ಓದಿ:ಫೆ.17 ಕ್ಕೆ ಭಾರತಕ್ಕೆ ಫ್ರೆಂಚ್ ಅಧ್ಯಕ್ಷರ ಭೇಟಿ

ರೈಲ್‌ಒನ್ ಆ್ಯಪ್ ಮೂಲಕ ಪ್ರಯಾಣಿಕರು ಕಾಯ್ದಿರಿಸಿದ ಟಿಕೆಟ್‌ಗಳು, ಕಾಯ್ದಿರಿಸದ ಟಿಕೆಟ್‌ಗಳು, ಪ್ಲಾಟ್ಫಾರ್ಮ್ ಟಿಕೆಟ್‌ಗಳು ಮತ್ತು ಸೀಸನ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಇದರೊಂದಿಗೆ ರೈಲುಗಳ ಹುಡುಕಾಟ, ಪಿಎನ್‌ಆರ್ ಸ್ಥಿತಿ, ಕೋಚ್ ವಿವರ ಮತ್ತು ರೈಲು ಎಲ್ಲಿದೆ ಎಂಬ ನೈಜ ಸಮಯದ ಮಾಹಿತಿ ಸೇರಿದಂತೆ ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಬಹುದು. ಡಿಜಿಟಲ್ ಟಿಕೆಟ್ ಬುಕ್ಕಿಂಗ್ ಸೌಲಭ್ಯವು ಪ್ರಯಾಣಿಕರು ಟಿಕೆಟ್ ಕೌಂಟರ್‌ಗಳಲ್ಲಿ ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಸಮಯದಲ್ಲಿ ಇದು ಹೆಚ್ಚು ಸಹಕಾರಿಯಾಗುತ್ತದೆ.

ರೈಲ್‌ಒನ್ ಆ್ಯಪ್ ಮೂಲಕ ಕಾಯ್ದಿರಿಸದ ಟಿಕೆಟ್ಗಳನ್ನು ಬುಕ್ ಮಾಡುವ ಪ್ರಯಾಣಿಕರು ಎಲ್ಲಾ ಡಿಜಿಟಲ್ ಪಾವತಿ ವಿಧಾನಗಳಲ್ಲಿ ಶೇಕಡಾ 3ರಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ. ರೈಲ್‌ನ್ ವೇದಿಕೆಯಲ್ಲಿ ಯುಪಿಐ, ಡೆಬಿಟ್ ಕಾರ್ಡ್ಗಳು, ಕ್ರೆಡಿಟ್ ಕಾರ್ಡ್ಗಳು, ನೆಟ್ ಬ್ಯಾಂಕಿಂಗ್ ಮತ್ತು ಇತರ ಡಿಜಿಟಲ್ ಪಾವತಿ ಆಯ್ಕೆಗಳನ್ನು ಬಳಸಿ ಮಾಡುವ ಕಾಯ್ದಿರಿಸದ ಟಿಕೆಟ್ ಬುಕಿಂಗ್‌ಗಳಿಗೆ ಈ ರಿಯಾಯಿತಿ ಅನ್ವಯಿಸುತ್ತದೆ. ಈ ಕೊಡುಗೆಯು 2026ರ ಜನವರಿ 14ರಿಂದ ಜಾರಿಗೆ ಬಂದಿದ್ದು, ಪ್ರಯಾಣಿಕರು ಡಿಜಿಟಲ್ ಟಿಕೆಟಿಂಗ್ ಅಳವಡಿಸಿಕೊಳ್ಳಲು ಮತ್ತು ಸುಗಮ ಪ್ರಯಾಣದ ಅನುಭವವನ್ನು ಆನಂದಿಸಲು ಉತ್ತೇಜಿಸುತ್ತದೆ. ರೈಲ್‌ಒನ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ಮತ್ತು ಐಒಎಸ್ ಆ್ಯಪ್ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ.

ಭಾರತೀಯ ರೈಲ್ವೆಯು ತನ್ನ ಹಳೆಯ `ಯುಟಿಎಸ್ ಆನ್ ಮೊಬೈಲ್’ ಆ್ಯಪ್ ಸೇವೆಗಳನ್ನು 2026ರ ಮಾ.1ರಿಂದ ಹಂತ ಹಂತವಾಗಿ ಸ್ಥಗಿತಗೊಳಿಸಲಿದೆ

  1. ಯುಟಿಎಸ್ ಆ್ಯಪ್‌ನಲ್ಲಿ ಸೀಸನ್ ಟಿಕೆಟ್ ಬುಕಿಂಗ್, ನವೀಕರಣ ಮತ್ತು ಹೊಸ ಬಳಕೆದಾರರ ನೋಂದಣಿಯನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ.
  2. ಪ್ಲಾಟ್‌ಫಾರ್ಮ್ ಟಿಕೆಟ್ ಬುಕಿಂಗ್ ಮತ್ತು ಆರ್-ವ್ಯಾಲೆಟ್ ಟಾಪ್-ಅಪ್ ಸೌಲಭ್ಯಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಆದರೂ ಅಪ್ಲಿಕೇಶನ್ ಸದ್ಯಕ್ಕೆ ಆಪ್ ಸ್ಟೋರ್‌ನಲ್ಲಿ ಲಭ್ಯವಿರುತ್ತದೆ.
  3. ಯುಟಿಎಸ್ ಆ್ಯಪ್‌ನ ಇತ್ತೀಚಿನ ಆವೃತ್ತಿಯನ್ನು ಅಪ್ಡೇಟ್ ಮಾಡುವ ಅಥವಾ ಡೌನ್ಲೋಡ್ ಮಾಡುವ ಬಳಕೆದಾರರಿಗೆ ಪ್ಲಾಟ್‌ಫಾರ್ಮ್ ಟಿಕೆಟ್ ಬುಕ್ ಮಾಡಲು ಅಥವಾ ಆರ್-ವ್ಯಾಲೆಟ್ ರೀಚಾರ್ಜ್ ಮಾಡಲು ಅನುಮತಿ ಇರುವುದಿಲ್ಲ.

ಕಾಯ್ದಿರಿಸದ ಟಿಕೆಟ್‌ಗಳನ್ನು ಬುಕ್ ಮಾಡಲು ಮತ್ತು ಸಂಬಂಧಿತ ಪ್ರಯಾಣಿಕ ಸೇವೆಗಳನ್ನು ಪಡೆಯಲು ಪ್ರಯಾಣಿಕರು ರೈಲ್ ಒನ್ ಆ್ಯಪ್‌ಗೆ ಬದಲಾಯಿಸಲು ಸೂಚಿಸಲಾಗಿದೆ. ಡಿಜಿಟಲ್ ಉಪಕ್ರಮಗಳು ಮತ್ತು ನವೀನ ತಂತ್ರಜ್ಞಾನ ಪರಿಹಾರಗಳ ಮೂಲಕ ಪ್ರಯಾಣಿಕರ ಅನುಕೂಲತೆಯನ್ನು ಹೆಚ್ಚಿಸಲು ಭಾರತೀಯ ರೈಲ್ವೆ ಸದಾ ಬದ್ಧವಾಗಿದೆ.ಇದನ್ನೂ ಓದಿ: ಸಕಲೇಶಪುರ | ಹೆದ್ದಾರಿ ಕಾಮಗಾರಿಗೆ ಅಡ್ಡಿಪಡಿಸಿದ ಜಮೀನು ಮಾಲೀಕರು – ರಸ್ತೆ ಸುತ್ತಮುತ್ತ ಮಾ.7ರ ವರೆಗೆ ನಿಷೇಧಾಜ್ಞೆ ಜಾರಿ

Share This Article