ಸರ್ಕಾರಿ ಅಧಿಕಾರಿಗಳೆಲ್ಲಾ ಪ್ರತಿ ಗುರುವಾರ ಬಸ್ಸಲ್ಲೇ ಓಡಾಡಿ – ಉಡುಪಿ ಡಿಸಿ ಹೆಪ್ಸಿಬಾ ರಾಣಿ ಆದೇಶ

Public TV
1 Min Read

ಉಡುಪಿ: ಪರಿಸರ ಪ್ರೇಮಿಯಾದ ಉಡುಪಿ ಡಿಸಿ ಹೆಪ್ಸಿಬಾ ರಾಣಿ ಸರ್ಕಾರಿ ಅಧಿಕಾರಿಗಳೆಲ್ಲಾ ಪ್ರತಿ ಗುರುವಾರ ಬಸ್ಸಿನಲ್ಲಿ ಓಡಾಡಬೇಕು ಎಂದು ಹೊಸ ಆದೇಶವನ್ನು ನೀಡಿದ್ದಾರೆ.

ವರ್ಷದಿಂದ ವರ್ಷಕ್ಕೆ ಜನರಲ್ಲಿ ಪರಿಸರದ ಕಾಳಜಿ ಜಾಸ್ತಿಯಾಗುತ್ತಿದೆ. ಆದರೆ ಪರಿಸರ ಮಾಲಿನ್ಯ ಮಾತ್ರ ಕಮ್ಮಿ ಆಗುತ್ತಿಲ್ಲ. ನಗರಗಳಲ್ಲಿ ವಾಹನ ದಟ್ಟಣೆಯೇ ಇದಕ್ಕೆ ನೇರ ಕಾರಣ, ಹೇಗಾದರೂ ಮಾಡಿ ಪರಿಸರ ಮಾಲಿನ್ಯ ಕಡಿಮೆ ಮಾಡಲು ಉಡುಪಿ ಡಿಸಿ ಪಣ ತೊಟ್ಟಿದ್ದಾರೆ.

 

ಪ್ರತಿ ಗುರುವಾರ ಅಧಿಕಾರಿಗಳು ಸರ್ಕಾರಿ ವಾಹನ ಉಪಯೋಗಿಸದೆ, ಬಸ್‍ನಲ್ಲಿ ಓಡಾಡೋ ಆದೇಶವನ್ನು ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಇದನ್ನು ಪಾಲಿಸುತ್ತಿದ್ದಾರೆ. ಪ್ರತೀ ಗುರುವಾರ ಬಸ್ ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತದೆ. ನಗರದ ಪ್ರಮುಖ ಜಂಕ್ಷನ್‍ಗಳಲ್ಲಿ ಸರ್ಕಾರಿ ನೌಕರರರು ಈ ಬಸ್ಸಿಗಾಗಿ ಕಾಯುತ್ತಿರಬೇಕು. ಬಸ್ ಬಂದ ಕೂಡಲೇ ಹತ್ತಿಕೊಂಡು ಜಿಲ್ಲಾಧಿಕಾರಿ ಕಚೇರಿ ಸೇರಬೇಕು ಎಂದು ಆದೇಶ ನೀಡಿದ್ದಾರೆ.

ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ, ರಸ್ತೆಯಲ್ಲಿ ವಾಹನದಟ್ಟಣೆ ಕಡಿಮೆಯಾದರೆ ಅಟೋಮ್ಯಾಟಿಕ್ ಆಗಿ ಪರಿಸರ ಮಾಲಿನ್ಯ ಕಡಿಮೆ ಆಗುತ್ತದೆ. ಮಾಲಿನ್ಯ ಕಡಿಮೆ ಆದರೆ ನಮ್ಮದೇ ಆರೋಗ್ಯ ಚೆನ್ನಾಗಿರುತ್ತದೆ. ಸಮಸ್ಯೆಯೂ ನಮ್ಮಿಂದನೇ ಆಗುತ್ತಿದೆ ಅದಕ್ಕೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಒಂದೇ ಸಂಸ್ಥೆಗಳಲ್ಲಿ ಅಥವಾ ಕಂಪನಿಗಳಲ್ಲಿ ಕೆಲಸ ಮಾಡುವ ಹತ್ತಿಪ್ಪತ್ತು ಜನ ಒಂದು ವಾಹನದಲ್ಲಿ ಹೋದರೆ ಅಷ್ಟೂ ವಾಹನ ಓಡಾಟ ಇರಲ್ಲ ಮತ್ತು ಇಂಧನ ಕೂಡಾ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಡಿಸಿ ಸದ್ಯ ವಾರ್ತಾ ಇಲಾಖೆಯ ಬಸ್ಸನ್ನು ಗುರುವಾರ ಎರಡು ಟ್ರಿಪ್ ಓಡಿಸೋಕೆ ಆದೇಶ ಮಾಡಿದ್ದಾರೆ. ಮುಂದೆ ಸರ್ಕಾರಿ ಬಸ್ಸು ಓಡಾಡಲಿದೆಯಂತೆ. ಪ್ರತಿಯೊಬ್ಬರು ಈ ರೀತಿಯ ನಿರ್ಧಾರ ಮಾಡಿದರೆ ನಿಜವಾದ ಪರಿಸರ ರಕ್ಷಣೆ ಮಾಡಬಹುದು. ಪರಿಸರ ನಾಶ ಕಡಿಮೆ ಮಾಡಿ ಪರಿಸರ ರಕ್ಷಣೆ ಮಾಡುವ ಈ ಯೋಜನೆಯ ರಿಸಲ್ಟ್ ಪಾಸಿಟಿವ್ ಆಗಿ ಇರಲಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ.

Share This Article
Leave a Comment

Leave a Reply

Your email address will not be published. Required fields are marked *