ಮೆಕ್ಕಾ: ಮೆಕ್ಕಾದಿಂದ (Mecca) ಮದೀನಾಗೆ (Medina) ಪ್ರಯಾಣಿಸುತ್ತಿದ್ದ ಬಸ್ಸಿಗೆ ಡೀಸೆಲ್ ಟ್ಯಾಂಕರ್ (Diesel Tanker) ಡಿಕ್ಕಿ ಹೊಡೆದ ಪರಿಣಾಮ 42 ಭಾರತೀಯರು ಸಜೀವ ದಹನವಾಗಿದ್ದು, ಅದೃಷ್ಟವಶಾತ್ ಓರ್ವ ಅಪಾಯದಿಂದ ಪಾರಾಗಿದ್ದಾನೆ.
ಹೈದರಾಬಾದ್ (Hyderabad) ಮೂಲದ ನಿವಾಸಿ ಮೊಹಮ್ಮದ್ ಅಬ್ದುಲ್ ಶೋಯೆಬ್ (24) ಬದುಕುಳಿದ ಪ್ರಯಾಣಿಕ. ಬಸ್ ಅಪಘಾತ ಸಂಭವಿಸಿದ ವೇಳೆ ಶೋಯೆಬ್ ಚಾಲಕನ ಪಕ್ಕದಲ್ಲೇ ಕುಳಿತಿದ್ದ ಎಂದು ತಿಳಿದುಬಂದಿದೆ. ಸದ್ಯ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಶೋಯೆಬ್ನನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶೋಯೆಬ್ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಇದನ್ನೂ ಓದಿ: ಸೌದಿ ಅರೇಬಿಯಾ ಭೀಕರ ದುರಂತಕ್ಕೆ 42 ಭಾರತೀಯರು ಸಾವು – ಪ್ರಧಾನಿ ಮೋದಿ ಸಂತಾಪ
ಮೆಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ವೇಳೆ ಯಾತ್ರಿಕರ ಬಸ್ಗೆ ಇಂದು ಬೆಳಗಿನ ಜಾವ 1:30ರ ಸುಮಾರಿಗೆ ಅಲ್ ಮುಫ್ರಿಹತ್ ಎಂಬಲ್ಲಿ ಡೀಸೆಲ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ನಲ್ಲಿ ನಿದ್ರೆ ಮಂಪರಿನಲ್ಲಿದ್ದ 42 ಯಾತ್ರಿಕರು ಸುಟ್ಟು ಕರಕಲಾಗಿದ್ದಾರೆ. ಪವಾಡ ಎಂಬಂತೆ ಶೋಯೆಬ್ ಮಾತ್ರ ಬದುಕುಳಿದಿದ್ದಾನೆ. ಸದ್ಯ ಘಟನೆ ಸಂಬಂಧ ಕೇಂದ್ರ ಸರ್ಕಾರ ಸಹಾಯವಾಣಿ ತೆರೆದಿದ್ದು, ಮೃತ ಕುಟುಂಬಸ್ಥರ ಮಾಹಿತಿ ಪಡೆಯುತ್ತಿದೆ.
ಒಂದು ವಾರದ ಹಿಂದೆ ಹೈದರಬಾದ್ನ ಅಲ್ಮಿಲಾ ಟ್ರಾವೆಲ್ಸ್ನಿಂದ 16 ಯಾತ್ರಿಕರು ಹಾಗೂ ಫ್ಲೈ ಝೋನ್ ಟ್ರಾವೆಲ್ಸ್ನಿಂದ 24 ಯಾತ್ರಿಕರು ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಇದರಲ್ಲಿ ಒಂದೇ ಕುಟುಂಬದ ಏಳು ಸದಸ್ಯರು, ಮತ್ತೊಂದು ಕುಟುಂಬದ ಎಂಟು ಸದಸ್ಯರು ಇದ್ದರು. ಭೀಕರ ದುರಂತದಲ್ಲಿ ಇವರೆಲ್ಲಾ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರಲ್ಲಿ 21 ಮಹಿಳೆಯರು, 11 ಮಂದಿ ಮಕ್ಕಳು ಸೇರಿದ್ದಾರೆ.
ಸ್ಥಳದಲ್ಲಿ ಸುಟ್ಟು ಕರಕಲಾಗಿರುವ ಮೃತದೇಹಗಳನ್ನ ಪತ್ತೆ ಹಚ್ಚೋದು ಸವಾಲಿನ ಕೆಲಸವಾಗಿದೆ. ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಅಲ್ಲಿನ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಮೃತರ ಗುರುತು ಪತ್ತೆ ಬಳಿಕ ಪಾರ್ಥಿವ ಶರೀರಗಳನ್ನ ಭಾರತಕ್ಕೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ. ಕುಟುಂಬಸ್ಥರನ್ನ ಘಟನಾ ಸ್ಥಳಕ್ಕೆ ಕರೆಯಿಸಿ ಕೆಲವು ಮಾದರಿಗಳನ್ನ ಸಂಗ್ರಹಿಸಿ ಡಿಎನ್ಎ ಪರೀಕ್ಷೆ ಮಾಡಲಾಗುತ್ತದೆ. ಅದಾದ ಬಳಿಕ ಗುರುತ್ತೆ ಪತ್ತೆಯಾಗಲಿದೆ.
ಹೈದರಾಬಾದ್, ತೆಲಂಗಾಣದ ಅಸಿಫ್ ನಗರ, ಚಿತ್ತಲ್ ಮೆಟ್, ಗೋಶಾ ಮೇಲ್ ಏರಿಯಾಗಳಿಂದ ಯಾತ್ರಿಕರು ಯಾತ್ರೆಗೆ ತೆರಳಿದ್ದರು. ಮದೀನಾಗೆ ತಲುಪಲು ಇನ್ನೆರಡು ಘಂಟೆ ಬಾಕಿ ಇರುವಂತೆಯೇ ಈ ದುರ್ಘಟನೆ ನಡೆದಿದೆ. ತಮ್ಮವರನ್ನ ಕಳೆದುಕೊಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಮೃತದೇಹಗಳ ಗುರುತು ಪತ್ತೆಗೆ ಘಟನಾ ಸ್ಥಳಕ್ಕೆ ತೆರಳುತ್ತಿದ್ದಾರೆ. ಇದನ್ನೂ ಓದಿ: ಸೌದಿಯಲ್ಲಿ ಭೀಕರ ಬಸ್ ದುರಂತ – 42 ಭಾರತೀಯ ಹಜ್ ಯಾತ್ರಿಕರು ಸಜೀವ ದಹನ

