ಪಿಎಚ್‍ಡಿ ಸಂಶೋಧನಾ ವಿದ್ಯಾರ್ಥಿ ಈಗ ಹಿಜ್ಬುಲ್ ಉಗ್ರ!

Public TV
3 Min Read

ನವದೆಹಲಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯೊಬ್ಬ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿರುವ ಆಘಾತಕಾರಿ ವಿಚಾರ ಈಗ ಬೆಳಕಿಗೆ ಬಂದಿದೆ.

ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿರುವ ಜಮ್ಮು ಮತ್ತು ಕಾಶ್ಮೀರ ಮೂಲಕ ಮನ್ನನ್ ವಾನಿ ಎಂಬಾತ ಉಗ್ರ ಘಟನೆ ಸೇರ್ಪಡೆಯಾಗಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಈ ಕುರಿತು ಫೋಟೋವೊಂದು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿತ್ತು. ಫೋಟೋ ಪ್ರಕರಟವಾದ ಬಳಿಕ ವಿವಿ ಆತನನ್ನು ಈಗ ಕಿತ್ತುಹಾಕಿದೆ.

ಕಾಶ್ಮೀರದಲ್ಲಿ ಉಪನ್ಯಾಸಕರಾಗಿರುವ ಬಶೀರ್ ಅಹ್ಮದ್ ವಾನಿಯವರ ಪುತ್ರ ಮನ್ನನ್ ವಾನಿ ಜನವರಿ 5 ರಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾನೆಂಬ ಸಂದೇಶವೊಂದು ಫೋಟೋ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಕೆಲ ದಿನಗಳಿಂದ ಮನ್ನನ್ ವಾನಿ ಸಹ ಕೆಲ ದಿನಗಳಿಂದ ಕಣ್ಮರೆಯಾಗಿದ್ದು ಈ ಹಿನ್ನಲೆಯಲ್ಲಿ ಉತ್ತರಪ್ರದೇಶ ಪೊಲೀಸರು ಆತನ ರೂಮಿನ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ.

ಸಾಂಧರ್ಬಿಕ ಚಿತ್ರ

ಸಾಮಾಜಿಕ ಜಾಲತಾಣದಲ್ಲಿರುವ ಫೋಟೋದಲ್ಲಿ ಮನ್ನನ್ ವಾನಿ ಕೈಯಲ್ಲಿ ಎಕೆ.47 ಹಿಡಿದುಕೊಂಡಿದ್ದಾನೆ. ಇದರ ಹಿನ್ನೆಲೆಯಲ್ಲಿ ವಿವಿ ಆವರಣದಲ್ಲಿನ ಮನ್ನನ್ ವಾನಿ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದ ಕೊಠಡಿಯನ್ನು ಸೀಲ್ ಮಾಡಿದ್ದಾರೆ.

ವಿಶ್ವವಿದ್ಯಾಲಯದ ಅಧಿಕಾರಿ ಎಂ ಮೊಹ್ಸಿನ್ ಖಾನ್ ಅವರು, ಮೆನ್ನನ್ ವಿವಿಯ 1985ರ ಶಿಸ್ತುಪಾಲನ ನಿಯಮಗಳನ್ನು ಉಲ್ಲಂಘನೆ ಮಾಡಿದ ಸಂದರ್ಭದಲ್ಲಿ ವಿವಿ ಉಪಕುಲಪತಿಗಳಿಗೆ ದೂರು ನೀಡಿದ್ದರು. ಇದರ ಅನ್ವಯ ಕುಲಪತಿಗಳು ಮೆನ್ನನ್ ಮೇಲೆ ತನಿಖೆ ನಡೆಸಲು ಆದೇಶ ನೀಡಿದ್ದರು.

ಮೆನ್ನನ್ ವಾನಿ 2012-13 ನೇ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ ಎಂಎಸ್ಸಿ ಪದವಿಗೆ ಪ್ರವೇಶ ಪಡೆದಿದ್ದು ನಂತರ 2014 ರಲ್ಲಿ ಭೂವಿಜ್ಞಾನ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಆಯ್ಕೆ ಆಗಿದ್ದ.

ವಿವಿ ಅಧಿಕಾರಿ ಓಮರ್ ಪೀರ್ಜಾದಾ ತಿಳಿಸಿರುವಂತೆ ಮೆನ್ನನ್ ಜನವರಿ 2 ರಿಂದ ಕಾಣೆಯಾಗಿದ್ದಾನೆ. ಅಲ್ಲದೇ ವಿವಿ ಹಾಸ್ಟೆಲ್ ಸಿಬ್ಬಂದಿ ನೀಡಿರುವ ಮಾಹಿತಿ ಪ್ರಕಾರ ಆತ ನಾಪತ್ತೆ ಆಗುವ 5 ದಿನಗಳ ಮುನ್ನ ಹಾಸ್ಟೆಲ್ ನಲ್ಲಿ ಊಟ ಮಾಡುವುದನ್ನು ಬಿಟ್ಟಿದ್ದ. ಆದರೆ ಹಾಸ್ಟೆಲ್ ನಲ್ಲಿ ಆತನ ರೂಮ್ ನಲ್ಲಿದ್ದ ವಿದ್ಯಾರ್ಥಿ ಆತನ ಕುರಿತು ಯಾವುದೇ ದೂರು ನೀಡಿಲ್ಲ. ಹಾಸ್ಟೆಲ್ 237 ಕೊಠಡಿಯಲ್ಲಿ ಮೆನ್ನನ್ ವಾಸಿಸುತ್ತಿದ್ದ, ಆತನ ರೂಮ್ ಮೇಲೆ ದಾಳಿ ನಡೆಸಿದ ಕುರಿತ ಪ್ರಕ್ರಿಯೆಯನ್ನು ವಿಡಿಯೋ ಮಾಡಲಾಗಿದೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.

ಸೇನೆಯ ವಿರುದ್ಧ ಪೋಸ್ಟ್: ಈ ಹಿಂದೆ ಮನ್ನನ್ ವಾನಿ ಶ್ರೀನಗರದ ತನ್ನ ಮನೆಗೆ ಮರಳುತ್ತಿದ್ದಾಗ ಸೇನಾ ಪಡೆಗಳು ಕಿರುಕುಳ ನೀಡಿದ್ದ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ. ಕಾರಿನಲ್ಲಿ ತೆರಳುವ ವೇಳೆ ಸೇನಾ ಅಧಿಕಾರಿಗಳು ತನ್ನ ಗುರುತು ಸಾಬೀತು ಪಡೆಸುವಂತೆ ಕೇಳಿದ್ದರೂ, ಅಲ್ಲದೇ ನೀನು ಏಕೆ ಉದ್ದ ಕೂದಲು ಬಿಟ್ಟಿದ್ದೀಯ, ಗಡ್ಡವನ್ನು ಏಕೆ ಕತ್ತರಿಸಿಲ್ಲ ಎಂದು ನನ್ನ ಶೂ, ಬಟ್ಟೆಯ ಬಗ್ಗೆ ಪ್ರಶ್ನಿಸಿ ನನ್ನನ್ನು ಉಗ್ರರ ರೀತಿ ನಡೆಸಿಕೊಂಡರು ಎಂಬುದಾಗಿ ಬರೆದುಕೊಂಡಿದ್ದ.

ಪೋಲಿಸ್ ಎಸ್‍ಪಿ ಅತುಲ್ ಶ್ರೀವಾಸ್ತವ ತಿಳಿಸುವಂತೆ, ಮೆನನ್ ಸಹಪಾಠಿ ಸಹ ಜಮ್ಮು ಕಾಶ್ಮೀರದ ಮೂಲದನಾಗಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ಮನೆಗೆ ಹೋಗಿದ್ದ ಆತ ಇದುವರೆಗೆ ಹಿಂದಿರುಗಿಲ್ಲ ಎಂದು ತಿಳಿಸಿದ್ದಾರೆ.

ವಿಶ್ವವಿದ್ಯಾಲಯವು ಪ್ರಕರಣದ ಸಮಗ್ರ ತನಿಖೆ ನಡೆಸಲು ಸಂಪೂರ್ಣ ಸಹಕಾರ ನೀಡಲಿದ್ದು, ಹಾಸ್ಟೆಲ್‍ಗಳ ಮೇಲೆ ವಿವಿ ಸಂಪೂರ್ಣ ನಿಯಂತ್ರಣ ಹೊಂದಿದೆ. ಹಲವು ಬಾರಿ ಮಧ್ಯ ರಾತ್ರಿ ವಿವಿ ಅಧಿಕಾರಿಗಳು ಹಾಸ್ಟೆಲ್ ಮೇಲೆ ದಾಳಿ ನಡೆಸಿ ವಿದ್ಯಾರ್ಥಿಗಳು ಆಕ್ರಮ ಚಟುವಟಿಕೆಗಳ ಮೇಲೆ ನಿಗಾವಹಿಸಲಾಗಿತ್ತು ಎಂದು ವಿವಿ ಶಿಸ್ತುಪಾಲನ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮೆನ್ನನ್ ಇದುವರೆಗೂ ಉಗ್ರಸಂಘಟನೆಗೆ ಸೇರ್ಪಡೆಗೊಂಡಿದ್ದಾನಾ ಅಥವಾ ಇಲ್ಲವಾ ಎಂಬುವುದು ಖಚಿತವಾಗಿಲ್ಲ. ಪ್ರಸ್ತುತ ನಾಪತ್ತೆ ಆಗಿರುವ ಮೆನ್ನನ್ ಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾಂಧರ್ಬಿಕ ಚಿತ್ರ
Share This Article
Leave a Comment

Leave a Reply

Your email address will not be published. Required fields are marked *