ನಿಷೇಧಿತ ಡ್ರಗ್ಸ್ ಸೇವನೆ: ವಿಶ್ವಕಪ್ ತಂಡದಿಂದ ಇಂಗ್ಲೆಂಡ್ ಆಟಗಾರ ಔಟ್

Public TV
1 Min Read

ಲಂಡನ್: ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಅಲೆಕ್ಸ್ ಹೆಲ್ಸ್ ನಿಷೇಧಿತ ಡ್ರಗ್ಸ್ ಸೇವನೆ ಹಿನ್ನೆಲೆಯಲ್ಲಿ ವಿಶ್ವಕಪ್ ತಂಡದಿಂದ ಕೈಬಿಡಲಾಗುತ್ತಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಸಮಿತಿ ಮಾಹಿತಿ ನೀಡಿದೆ.

ವಿಶ್ವಕಪ್ ಮಾತ್ರವಲ್ಲದೇ ಐರ್ಲೆಂಡ್ ಹಾಗೂ ಪಾಕಿಸ್ತಾನದ ವಿರುದ್ಧ ನಡೆಯುವ ಸೀಮಿತ ಓವರ್ ಗಳ ಸರಣಿಯಿಂದಲೂ ಹೊರಗಿಡಲಾಗಿದ್ದು, 21 ದಿನಗಳ ನಿಷೇಧ ವಿಧಿಸಲಾಗಿದೆ. ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ನಿಷೇಧಿತ ಔಷಧಿ ಸೇವನೆ ಖಚಿತವಾಗಿರುವುದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಸಿಬಿ ಹೇಳಿದೆ.

ಇಂಗ್ಲೆಂಡ್ ತಂಡದ ಹಿತಾದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ ಎಂದು ಇಸಿಬಿ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದು, ತಂಡದೊಳಗೆ ಉತ್ತಮ ವಾತಾವರಣ ಸೃಷ್ಟಿಸಿ ಅನಗತ್ಯ ಗೊಂದಲ ಆಗದಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇದೇ ವೇಳೆ ಈ ನಿರ್ಧಾರವನ್ನು ಅಲೆಕ್ಸ್ ಅವರ ವೃತ್ತಿ ಜೀವನದ ಕೊನೆ ಎಂದು ಪರಿಗಣಿಸುವಂತಿಲ್ಲ. ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹಾಗೂ ಪಿಸಿಎ ಸಹಕಾರ ಮುಂದುವರಿಯಲಿದೆ. ಅಲ್ಲದೇ ದೇಶಿಯ ನಾಟಿಂಗ್‍ಹ್ಯಾಮ್‍ಶೈರ್ ನಲ್ಲಿ ಆಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.

ಇಂಗ್ಲೆಂಡ್ ತಂಡದ ಪರ 70 ಏಕದಿನ ಪಂದ್ಯಗಳನ್ನು ಆಡಿರುವ ಅಲೆಕ್ಸ್ 95.52 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅಲ್ಲದೇ ಅವರನ್ನು ವಿಶ್ವಕಪ್ ತಂಡದಲ್ಲಿ ಆರಂಭಿಕ ಸ್ಥಾನ ನೀಡಿ ಆಯ್ಕೆ ಮಾಡಲಾಗಿತ್ತು. ಆದರೆ ವಿಶ್ವಕಪ್‍ಗೆ 1 ತಿಂಗಳು ಬಾಕಿ ಇರುವ ಸಂದರ್ಭದಲ್ಲಿ ಇಂತಹ ನಿರ್ಧಾರ ಕೈಗೊಂಡಿರುವುದು ಅಲೆಕ್ಸ್ ಹೆಲ್ಸ್ ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇಸಿಬಿ ವಿಶ್ವಕಪ್ ಗೆ ಬೇರೆ ಆಟಗಾರನ ಹೆಸರನ್ನು ಇಲ್ಲಿಯವರೆಗೆ ಪ್ರಕಟಿಸಿಲ್ಲ.

Share This Article
Leave a Comment

Leave a Reply

Your email address will not be published. Required fields are marked *