ಮಗನ ಬಾಯಿಯ ಸುತ್ತ ಕಪ್ಪು ಕಲೆ ಬಂದ್ಮೇಲೆ ಗೊತ್ತಾಯ್ತು ಕಿಡ್ನಾಪ್ ಯತ್ನದ ರಹಸ್ಯ

Public TV
2 Min Read

ಮುಂಬೈ: 22 ವರ್ಷದ ವ್ಯಕ್ತಿಯೊಬ್ಬ ತನ್ನ ತಂದೆಯ ಮಾಜಿ ಸಹೋದ್ಯೋಗಿಯ ಮಗನನ್ನು ಕಿಡ್ನಾಪ್ ಮಾಡಲು ಯತ್ನಿಸಿ ವಿಫಲವಾದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ತಮ್ಮ ಮಗ ಸೊಸೈಟಿ ಕಾಂಪೌಂಡ್‍ನಿಂದ ಕಾಣೆಯಾದ ಕೂಡಲೇ ಪೋಷಕರು ಎಚ್ಚೆತ್ತುಕೊಂಡಿದ್ದು, ಅಪಹರಣಗಾರರು ಮಗನನ್ನು ಕರೆದೊಯ್ಯುವ ಮುನ್ನವೇ ಆತನನ್ನು ಪತ್ತೆ ಹಚ್ಚಿದ್ದಾರೆ. ಆದ್ರೆ ಒಂದು ದಿನದ ಬಳಿಕವಷ್ಟೇ ಅದು ಕಿಡ್ನಾಪ್ ಯತ್ನ ಎಂಬುದು ಪೋಷಕರಿಗೆ ಗೊತ್ತಾಗಿದೆ. ಸದ್ಯ ಆರೋಪಿಯನ್ನು ಬದ್ಲಾಪುರ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಅದೇ ಬಿಲ್ಡಿಂಗ್‍ನಲ್ಲಿ ವಾಸವಿದ್ದ ಎಂದು ವರದಿಯಾಗಿದೆ.

ಮಗ ಕಾಣೆಯಾಗಿದ್ದ: ಬಾಲಕ ಆರುಶ್ ಪರಬ್ ಬದ್ಲಾಪುರ್‍ನ ಗೋಲ್ಡನ್ ಹೈಟ್ಸ್‍ನಲ್ಲಿ ಪೋಷಕರೊಂದಿಗೆ ವಾಸವಿದ್ದ. ಭಾನುವಾರ ಸಂಜೆ ಸೊಸೈಟಿ ಕಾಂಪೌಂಡ್‍ನಲ್ಲಿ ಆಟವಾಡುತ್ತಿದ್ದ ವೇಳೆ ಆತ ಕಾಣೆಯಾಗಿದ್ದ. ಬಾಲಕನ ಅಕ್ಕ ಆತನಿಗಾಗಿ ಹುಡುಕಾಡಿದ್ರೂ ಎಲ್ಲೂ ಕಾಣಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಆರುಶ್ ಮನೆಗೆ ಬಾರದ ಕಾರಣ ಕುಟುಂಬಸ್ಥರು ಗಾಬರಿಯಿಂದ ಹುಡುಕಾಡತೊಡಗಿದ್ದರು. ಆರೋಪಿಯು ಕ್ಲೋರೋಫಾರ್ಮ್ ಬಳಸಿ ಬಾಲಕನನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದು, ಆಟೋದೊಳಗೆ ಬಾಲಕನೊಂದಿಗೆ ಬಚ್ಚಿಟ್ಟುಕೊಂಡಿದ್ದ. ಇದ್ದಕ್ಕಿದ್ದಂತೆ ಆರುಶ್ ಕುಟುಂಬಸ್ಥರಿಗೆ ಬಾಲಕನ ಕಾಲು ಆಟೋದಿಂದ ಹೊರಗೆ ಚಾಚಿಕೊಂಡಿದ್ದು ಕಾಣಿಸಿತ್ತು. ಅದನ್ನು ನೋಡಿ ಆತನನ್ನು ರಕ್ಷಣೆ ಮಾಡಿದ್ದರು. ಆಟೋ ಒಳಗೆ ಆರೋಪಿ ಸುನಿಲ್ ಪವಾರ ಇದ್ದಿದ್ದನ್ನು ನೋಡಿದ್ರು. ಆತ ಮೊದಲೇ ತಮಗೆ ಗೊತ್ತಿದ್ದರಿಂದ ಈ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ ಎಂದು ಸಬ್ ಇನ್ಸ್ ಪೆಕ್ಟರ್ ಉಮಾಜಿ ಕಾಲೆ ಹೇಳಿದ್ದಾರೆ.

ಮುಖ ಕಪ್ಪು ಬಣ್ಣಕ್ಕೆ ತಿರುಗಿತ್ತು: ಮರುದಿನ ಬಾಲಕನ ಮುಖದಲ್ಲಿ ಬಾಯಿಯ ಸುತ್ತಲೂ ಕಪ್ಪು ಬಣ್ಣಕ್ಕೆ ತಿರುಗಿತ್ತು. ಏನೋ ಅನಾರೋಗ್ಯದ ಸಮಸ್ಯೆ ಇರಬಹುದು ಎಂದು ಪೋಷಕರು ಆರುಶ್‍ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ವೈದ್ಯರು, ಕ್ಲೋರೋಫಾರ್ಮ್ ಪರಿಣಾಮದಿಂದ ಹೀಗಾಗಿದೆ ಎಂದು ಹೇಳಿದ್ದರು. ಆಗ ಪೋಷಕರಿಗೆ ಕಿಡ್ನಾಪ್ ಯತ್ನದ ಬಗ್ಗೆ ಅರಿವಾಗಿ ಕೂಡಲೇ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ 323, 328 ಹಾಗೂ 363ರ ಅಡಿ ಪ್ರಕರಣ ದಾಖಲಾಗಿದೆ. ಪವಾರ್‍ನನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ನವೆಂಬರ್ 10ರ ತನಕ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅವರ ತಂದೆ ಹಾಗೂ ಸಂತ್ರಸ್ತ ಬಾಲಕನ ತಂದೆ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಇತ್ತು ಎಂದು ಆರೋಪಿ ಹೇಳಿಕೆ ನೀಡಿದ್ದಾನೆ. ಆರುಶ್‍ನನ್ನು ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಲು ಆತ ಪ್ಲ್ಯಾನ್ ಮಾಡಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *