ಮದ್ಯ ಮಾರಾಟದಲ್ಲಿ ಈ ಬಾರಿ ದಾಖಲೆ ಬರೆದ ಮಂಡ್ಯ!

Public TV
4 Min Read

* ಅರುಣ್ ಬಡಿಗೇರ್
ಮಂಡ್ಯ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಮಂಡ್ಯ ಅಂತಾ ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯ ಜನ ಬೆಚ್ಚಿಬೀಳುವಂತಹ ಸುದ್ದಿ ಇದು. ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯಲ್ಲಿ ಒಂದೆಡೆ ಬರಗಾಲ. ಮತ್ತೊಂದೆಡೆ ನಾಲೆಗಳಲ್ಲಿ ಕಾಣಿಸದ ನೀರು. ಮಗದೊಂದು ಕಡೆ ರಾಜಕೀಯದ ಅಬ್ಬರ. ಇದರ ನಡುವೆ ಮದ್ಯದ ಹೊಳೆಯೇ ಜೋರಾಗಿ ಅಬ್ಬರಿಸುವಂತೆ ರಭಸವಾಗಿ ಹರಿಯುತ್ತಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಹದಿಹರೆಯದ ಹುಡುಗರು ಎಣ್ಣೆ ಮಬ್ಬಲ್ಲಿ ಸುತ್ತಾಡೋದು. ಇದನ್ನೆಲ್ಲ ನಿಲ್ಲಿಸಬೇಕಿದ್ದ ನಾಯಕರುಗಳೆಲ್ಲ ಇಂಥಹ ಹದಿಹರಿಯದ ಹುಡುಗರಿಗೆ ಮತ್ತಷ್ಟು ಎಣ್ಣೆ ಸುರಿದು ಅವರನ್ನೆಲ್ಲ ಕುಡುಕರನ್ನಾಗಿ ಮಾಡುತ್ತಿದ್ದಾರೆ. ಇದು ಅಷ್ಟಕ್ಕೂ ನಿಲ್ಲದೆ, ಕುಡುಕರಾದ ಹುಡುಗರಲ್ಲಿ ರಾಜಕೀಯದ ವೈಷಮ್ಯಗಳನ್ನ ಬಿತ್ತಿ, ತಮಗಾಗದವರ ಮೇಲೆ ಹಲ್ಲೆ ಮಾಡಿಸೋದು, ಸೇಡು ತೀರಿಸಿಕೊಳ್ಳೋದನ್ನೆಲ್ಲ ಮಾಡಿಸುತ್ತಿದ್ದಾರೆ ಮಂಡ್ಯದ ಕೆಲ ಜನಪ್ರತಿನಿಧಿಗಳು.

ಹೇವಿ ಹೀಟ್ ಇದ್ದ ಕ್ಷೇತ್ರ ಅಂದ್ರೆ ಅದು ಮಂಡ್ಯ. ಹಾಗಾಗಿ ನಾವು ಹೆಚ್ಚಾಗಿ ಬುಲೆಟ್‍ನಲ್ಲಿ ಸುತ್ತಾಡಿದ್ದು ಮಂಡ್ಯದಲ್ಲೇ. ಹಳ್ಳಿ ಹಳ್ಳಿಗಳಲ್ಲಿ, ಪಟ್ಟಣ-ತಾಲೂಕುಗಳಲ್ಲಿ ನಾವು ಸಂಚಾರ ನಡೆಸಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಬಿದ್ದಿದ್ದು ಮಾತ್ರ ಶಾಕ್ ಆಗುವಂಥದ್ದು. ಸುಮಾರು 14-16 ವಯಸ್ಸಿನ ಮಕ್ಕಳೆಲ್ಲ ಎಣ್ಣೆ ಹೊಡೆದು ಓಡಾಡ್ತಿದ್ದ ದೃಶ್ಯಗಳು ಕಣ್ಣಿಗೆ ಬಿದ್ವು. ಕೆಲವು ಕಡೆ ಎಣ್ಣೆ ಹೊಡೆದ ಮಕ್ಕಳೆಲ್ಲ ಜಗಳಾಡಿಕೊಂಡು, ಹೊಡೆದಾಡಿಕೊಳ್ತಿದ್ದ ದೃಶ್ಯಗಳು ಕಾಣಿಸಿದ್ವು. ಕೆಲವು ಹುಡುಗರನ್ನ ಹಾಗೇ ಕೇಳಿದಾಗ ನಮ್ಮಪ್ಪನೇ ಕುಡಿಕೊಂಡು ಬರ್ತಾನೆ ನಾನ್ ಕುಡಿದರೇ ತಪ್ಪೇನು? ಅಂತಾ ನಮಗೆ ಪ್ರಶ್ನೆ ಮಾಡಿದ್ದು ಇದೆ. ಇನ್ನೂ ಕೆಲ ಹುಡುಗರು ನಮ್ಮನ್ನ ನೋಡಿ ಎಸ್ಕೇಪ್ ಅಂತಾ ಓಡಿಹೋಗಿದ್ದು ಇದೆ.

ಕೋತಿಗೆ ಎಣ್ಣೆ ಹೊಡೆಸಿ, ಚೇಳು ಕಡಿಸಿದಂಗೆ:
ಮೊದಲೇ ಯುವಕರಂದ್ರೆ ಕೋತಿ ವಯಸ್ಸದು. ಅಂಥ ಕೋತಿಗೆ ಎಣ್ಣೆ ಹೊಡೆಸಿ, ಚೇಳು ಕಡಿಸಿದ್ರೆ ಏನಾಗ್ಬಾದ್ರು. ಇಂಥದ್ದೆ ಸ್ಥಿತಿ ಈಗ ಮಂಡ್ಯದಲ್ಲಿದೆ. ರಾಜಕೀಯ ಪಕ್ಷಗಳು ನೇರವಾಗಿ ಟಾರ್ಗೆಟ್ ಮಾಡೋದೆ ಎಣ್ಣೆ ಹೊಡೆಯೋರನ್ನ. ಅದರಲ್ಲೂ ಯುವಕರನ್ನ. ಯುವಕರಿಗೆ ಒಂದಿಷ್ಟು ಎಣ್ಣೆ ಹೊಡೆಸಿ ಬಿಟ್ರೇ ಮುಗಿತು ಅವರನ್ನ ಹಿಡಿಯೋಕೆ ಆಗಲ್ಲ. ಅಂಥದ್ರಲ್ಲಿ ಅವರ ತಲೇಲಿ ದ್ವೇಷ, ರಾಜಕೀಯದ ಜಿದ್ದು ಇಂಥದ್ದೆಲ್ಲ ತುಂಬಿದ್ರೇ ಅವರ ಜೀವನವೇ ಹಾಳಾಗಿ ಹೋಗುತ್ತೆ. ತಿನ್ನೋಕೆ ಕಾಸಿಲ್ಲ ಅಂದ್ರು, ಕುಡಿಯೋಕೆ ಮಾತ್ರ ಅದೆಲ್ಲಿಂದ ಕಾಸು ಬರುತ್ತೋ ಗೊತ್ತಿಲ್ಲ. ಎಣ್ಣೆ ಹೊಡೆದುಕೊಂಡು ತೂರಾಡಿಕೊಂಡು ಓಡಾಡ್ತಾರೆ. ಕೆಲವರ ಬಳಿ ಹೋದ್ರೆ, ಎಣ್ಣೆಯ ಪರಿಮಳವಂತೂ ಘಮಘಮ ಅಂತಾ ರಪಕ್ಕನೆ ಮೂಗಿಗೆ ಬಡಿಯುತ್ತೆ.

ಬೆಳಗ್ಗೆ ಶುರುವಾಗುತ್ತೆ ಎಣ್ಣೆ ಏಟು:
ದಿನವಿಡೀ ಕೆಲಸ ಮಾಡಿ ದೇಹ ದಣಿದಾಗ ಕುಡಿಯೋದು ಕೆಲವರಲ್ಲಿ ಮಾಮೂಲು. ಮಜಾ ಮಾಡೋಕೆ ರಾತ್ರಿ ಕುಡಿಯೋರು ಮಾಮೂಲು. ಆದ್ರೆ, ಕೆಲಸ ಇರಲಿ ಬಿಡಲಿ ಬೆಳಿಗ್ಗೆ ಎದ್ದ ತಕ್ಷಣ ಎಣ್ಣೆ ಹೊಡೆಯೋರಿಗೆ ಏನಂತ ಕರೆಯಬೇಕೋ ಗೊತ್ತಿಲ್ಲ. ಇಂಥವರು ಎಲ್ಲೆಡೆ ಸಿಗ್ತಾರೆ ಇಲ್ಲ ಅನ್ನಲ್ಲ. ಅದರಲ್ಲೂ ಈ ಬಾರಿ ಎಲೆಕ್ಷನ್‍ನಲ್ಲಂತೂ ತುಸು ಹೆಚ್ಚಾಗಿಯೇ ಇದ್ದಂತಿತ್ತು. ಒಂದು ಕಡೆ ರಾಜಕೀಯ ಜಿದ್ದಾಜಿದ್ದಿ, ಮಗದೊಂದು ಕಡೆ ದ್ವೇಷದ ಕಿಚ್ಚು, ಇದರ ಮಧ್ಯೆ ಎಣ್ಣೆಯ ಏಟು ಏನೇನೋ ಆಡಿಸಿತ್ತು.

ಮಂಡ್ಯದಲ್ಲಿ ಈ ವರ್ಷ ಮದ್ಯ ಮಾರಾಟವಾಗಿದೆ?
ಜನವರಿಯಲ್ಲಿ 51.30 ಲಕ್ಷ ಬಾಕ್ಸ್, 4.43 ಕೋಟಿ ಲೀಟರ್
ಫೆಬ್ರವರಿಯಲ್ಲಿ 47.61 ಲಕ್ಷ ಬಾಕ್ಸ್, 4.11 ಕೋಟಿ ಲೀಟರ್
ಮಾರ್ಚ್‍ನಲ್ಲಿ 44.11 ಲಕ್ಷ ಬಾಕ್ಸ್, 3.80 ಕೋಟಿ ಲೀಟರ್
ಎಪ್ರಿಲ್‍ನಲ್ಲಿ 46.35 ಲಕ್ಷ ಬಾಕ್ಸ್, 4 ಕೋಟಿ ಲೀಟರ್
(ಒಂದು ಬಾಕ್ಸ್ ನಲ್ಲಿ 180 ಎಂಎಲ್ ಇರುವ ಒಟ್ಟು 48 ಬಾಟಲ್‍ಗಳಿರುತ್ತೆ.)

ಅಬಕಾರಿ ಇಲಾಖೆ ಕೊಟ್ಟಿರುವ ಈ ಲೆಕ್ಕಾಚಾರದ ಪ್ರಕಾರ 2005 ರಿಂದ ಇಲ್ಲಿಯವರೆಗೆ ಏಪ್ರಿಲ್ ತಿಂಗಳಲ್ಲಿ ಈ ಬಾರಿಯೇ ಅತಿ ಹೆಚ್ಚು ಮದ್ಯ ಮಾರಾಟವಾಗಿದೆ. ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ಮಂಡ್ಯದಲ್ಲಿ ಹೆಚ್ಚು ಎಣ್ಣೆ ಮಾರಾಟವಾಗುತ್ತೆ. ಇದಕ್ಕೆ ಪ್ರತಿ ವರ್ಷ ಅಬಕಾರಿ ಇಲಾಖೆ ಬಳಿ ಇರೋ ದಾಖಲೆಗಳೇ ಸಾಕ್ಷಿ. 2005ರಲ್ಲಿ ಒಂದು ವರ್ಷಕ್ಕೆ, 1 ಕೋಟಿ 44 ಲಕ್ಷ ಬಾಕ್ಸ್ ಗಳು ಮಾರಾಟವಾಗುತ್ತಿದ್ದರೆ, ಅದೇ 2018ರಲ್ಲಿ 5 ಕೋಟಿ 69 ಲಕ್ಷ ಬಾಕ್ಸ್ ಗಳು ಮಾರಾಟವಾಗಿವೆ. ಮಂಡ್ಯ ಜಿಲ್ಲೆಯಲ್ಲಿ ಮದ್ಯದ ಮಾರಾಟ ಪ್ರಮಾಣದ ಗುರಿಯನ್ನು ವರ್ಷದಿಂದ ವರ್ಷಕ್ಕೆ ಸರಕಾರ ಹೆಚ್ಚಿಸುತ್ತಲೇ ಇದೆ. ಹೀಗಾಗಿ ಪ್ರತಿ ವರ್ಷವೂ ಮದ್ಯ ಮಾರಾಟ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಅದರಲ್ಲೂ 2018ರಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ, ಲೋಕಸಭೆ ಉಪ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ನಾನಾ ಕಾರಣಗಳಿಂದ ತೆರವಾದ ಕಾರಣಕ್ಕೆ ನಡೆದ ತಾ.ಪಂ., ಗ್ರಾ.ಪಂ. ಉಪ ಚುನಾವಣೆ ಪರಿಣಾಮ ಹಿಂದಿನ ವರ್ಷಕ್ಕಿಂತ ಹೆಚ್ಚು ಮದ್ಯ ಮಾರಾಟವಾಗಿತ್ತು.

ಎಷ್ಟು ಅಂಗಡಿಗಳಿವೆ?
ಮಂಡ್ಯ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕಾಗಿ ವಿವಿಧ ವರ್ಗದ ಒಟ್ಟು 256 ಲೈಸೆನ್ಸ್ ನೀಡಲಾಗಿದೆ. ಕೆ.ಆರ್.ಪೇಟೆಯಲ್ಲಿ 34, ಮದ್ದೂರಿನಲ್ಲಿ 48, ಮಳವಳ್ಳಿಯಲ್ಲಿ 33, ಮಂಡ್ಯದಲ್ಲಿ 62, ನಾಗಮಂಗಲದಲ್ಲಿ 27, ಪಾಂಡಪುರದಲ್ಲಿ 18 ಹಾಗೂ ಶ್ರೀರಂಗಪಟ್ಟಣದಲ್ಲಿ 35 ಲೈಸೆನ್ಸ್ ಹೊಂದಿರೋ ಬಾರ್ ಆಂಡ್ ರೆಸ್ಟೋರೆಂಟ್‍ಗಳಿವೆ. ಇವೆಲ್ಲ ಲೈಸೆನ್ಸ್ ಹೊಂದಿರೋ ಮದ್ಯ ಮಾರಾಟದ ಕೇಂದ್ರಗಳು. ಆದ್ರೆ, ಲೈಸೆನ್ಸ್ ಇಲ್ಲದೆ, ಹಳ್ಳಿ ಹಳ್ಳಿಗಳಲ್ಲಿ ಕದ್ದು ಮುಚ್ಚಿ ಮಾರಾಟ ಮಾಡೋ ಕೇಂದ್ರಗಳು ಅಲ್ಲಲ್ಲಿ ಸಿಗುತ್ವೆ. ಕೆಲವು ಹೋಟೆಲ್‍ಗಳಂತೂ ಅನಧಿಕೃತವಾಗಿ ಬಾರ್ ಆಂಡ್ ರೆಸ್ಟೋರೆಂಟ್‍ಗಳಾಗಿವೆ. ಇಲ್ಲಿ ಹೇಳೋರು ಕೇಳೋರು ಇದ್ದಾರೋ ಇಲ್ವೋ ಗೊತ್ತಿಲ್ಲ. ಇದನ್ನೆಲ್ಲ ನಿಲ್ಲಿಸಬೇಕಾದ ಪೊಲೀಸರು ಹಲವು ಕಡೆ ಶಾಮೀಲಾಗಿದ್ದಾರೆ. ಕೆಲ ಪೊಲೀಸರಿಗೆ ಒತ್ತಡಗಳು, ಬೆದರಿಕೆಗಳು ಮಂಡ್ಯದಲ್ಲಿವೆ.

ಒಂದೆಡೆ ‘ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಮದ್ಯ ಸೇವನೆ ಮಾಡಬೇಡಿ’ ಎನ್ನುವ ಸರಕಾರ ಮತ್ತೊಂದೆಡೆ ಸಂಪನ್ಮೂಲ ಕ್ರೋಢಿಕರಣಕ್ಕಾಗಿ ಅಬಕಾರಿ ಇಲಾಖೆಗೆ ಟಾರ್ಗೆಟ್ ನೀಡಿ ಮದ್ಯ ಮಾರಾಟಕ್ಕೆ ಉತ್ತೇಜನ ನೀಡುತ್ತಿದೆ. ಯಾಕಂದ್ರೆ, ಸರಕಾರಗಳ ಪ್ರಮುಖ ಆದಾಯದ ಮೂಲಗಳಲ್ಲಿ ಅಬಕಾರಿ ಸುಂಕವೂ ಒಂದು. ಆದ್ರೆ, ಇದರಿಂದಾಗಿ ಮಂಡ್ಯದಲ್ಲಿ ಆಗ್ತಿರೋ ದುಷ್ಪರಿಣಾಮದ ಬಗ್ಗೆ ಯಾವ ನಾಯಕರಿಗೂ ಅರಿವು ಇದ್ದಂತಿಲ್ಲ.

Share This Article
Leave a Comment

Leave a Reply

Your email address will not be published. Required fields are marked *