‘ಮದ್ಯ’ವಿಲ್ಲದೆ ‘ಮಧ್ಯ’ರಾತ್ರಿ ಎದ್ದು ಕೂರ್ತಿದ್ದೆ: ಎಣ್ಣೆಪ್ರಿಯನ ಮನದಾಳದ ಮಾತು

Public TV
2 Min Read

– ಮೊದಲ ಗ್ರಾಹಕನಿಗೆ ವೈನ್‍ಶಾಪ್‍ನಲ್ಲಿ ಸನ್ಮಾನ

ಬೆಳಗಾವಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಇದೀಗ ಕರ್ನಾಟದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಣ್ಣೆ ಪ್ರಿಯರು ಫುಲ್ ಖುಷಿಯಾಗಿದ್ದಾರೆ.

ಈ ಸಂಬಂಧ ವ್ಯಕ್ತಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಬಾರ್ ಓಪನ್ ಮಾಡಿರೋದು ತುಂಬಾ ಖುಷಿಯಾಗುತ್ತಿದೆ. ನಿನ್ನೆ ಟಿವಿಯಲ್ಲಿ ಮೇ 4ರಂದು ಮದ್ಯದಂಗಡಿಗಳು ಓಪನ್ ಅಂದಾಗ ತುಂಬಾನೇ ಖುಷಿಯಾಯ್ತು. ಹೀಗಾಗಿ ಇಂದು ಬೆಳಗ್ಗೆನೇ ಬಂದು ಟೋಕನ್ ತೆಗೆದುಕೊಂಡು ಕ್ಯೂನಲ್ಲಿ ನಿಂತಿದ್ದೇನೆ ಎಂದರು.

ಕುಡಿಯದಿದ್ದರೆ ಕೈ, ಕಾಲು ನಡುಗುತ್ತದೆ. ಎಣ್ಣೆ ಇಲ್ಲ ಅಂದ್ರೆ ತುಂಬಾ ಸುಸ್ತಾಗುತ್ತದೆ. ದಿನಾ ಕುಡಿಯುವ ನಮಗೆ ಎಣ್ಣೆ ಬೇಕೇ ಬೇಕು. ಕುಡಿಯದಿದ್ದರೆ ನಿದ್ದೆ ಬರಲ್ಲ. ಇಂತಹ ಸಮಸ್ಯೆಗಳು ಆರಂಭವಾಗುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಒಂದು ತಿಂಗಳಲ್ಲಿ ಅಲ್ಲಲ್ಲಿ ಮಾರಾಟ ಮಾಡುತ್ತಿದ್ದವರ ಕೈಯಿಂದ 400-600 ರೂ. ಕೊಟ್ಟು ಖರೀದಿಸಿ ಕುಡಿಯುತ್ತಿದ್ದೆ. ಇಲ್ಲಾಂದ್ರೆ ಹಂಗೆ ಮಲಗುತ್ತಿದ್ದೆ. ಹೀಗೆ ಮಲಗಿದ್ರೆ ರಾತ್ರಿ ಪೂರ್ತಿ ನಿದ್ದೆ ಬರುತ್ತಿರಲಿಲ್ಲ. ಹೀಗಾಗಿ ಮುಂಜಾನೆ 4 ಗಂಟೆಗೆ ಎಚ್ಚರ ಆಗುತ್ತಿತ್ತು. ಆಗ ಮನೆಯಿಂದ ಹೊರಗಡೆ ಬಂದು ವಾಕಿಂಗ್ ಮಾಡಿ, ತಿರುಗಾಡಿ ಮತ್ತೆ ಮನೆಗೆ ಹೋಗುತ್ತಿದ್ದೆ ಎಂದರು.

ಅಲ್ಲದೆ ಈಗ ಮದ್ಯ ತೆಗೆದುಕೊಂಡು ಹೋಗಿ ಮನೆಯಲ್ಲಿಟ್ಟು ಮತ್ತೆ ಟೋಕನ್ ತೆಗೆದುಕೊಳ್ಳುತ್ತೇನೆ. ಯಾಕಂದ್ರೆ ಮತ್ತೆ ಬಂದ್ ಮಾಡಿದ್ರೆ ಏನು ಮಾಡೋದು. ಅದಿಕೆ ಮನೆಗೋಗಿ ಮತ್ತೆ ಬಂದು ಮದ್ಯ ಖರೀದಿ ಮಾಡುವುದಾಗಿ ತಿಳಿಸಿದರು.

ವೈನ್ ಶಾಪ್ ನವರಿಂದ ಸನ್ಮಾನ:
ಮೊದಲು ಬಂದ ಗ್ರಾಹಕನಿಗೆ ವೈನ್ ಶಾಪ್ ಮಾಲೀಕರು ಹಾರ ಹಾಕಿ ಸನ್ಮಾನ ಮಾಡಿದ್ದಾರೆ. ಇದಕ್ಕಾಗಿ ನನಗೆ ತುಂಬಾ ಖುಷಿ ಅನಿಸ್ತಿದೆ ಎಂದು ಇದೇ ವೇಳೆ ಮದ್ಯ ಪ್ರಿಯ ಸಂತಸ ವ್ಯಕ್ತಪಡಿಸಿದರು.

ಈ ಬಗ್ಗೆ ವೈನ್ ಶಾಪ್ ನವರು ಮಾತನಾಡಿ, ನಮ್ಮ ಅಂಗಡಿ ಇಂದು ಓಪನ್ ಆಗಿರುವುದಕ್ಕೆ ಖುಷಿಯಿಂದ ನಾವು ಸನ್ಮಾನ ಮಾಡಿದ್ದೇವೆ. ಅಬಕಾರಿ ಇಲಾಖೆ ಅಂಗಡಿ ಓಪನ್ ಮಾಡಲು ಅವಕಾಶ ನೀಡಿದೆ. ಹೀಗಾಗಿ ನಾನು ಇಲಾಖೆಗೆ ಧನ್ಯವಾದ ತಿಳಿಸಲು ಬಯಸುವುದಾಗಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *