ರಷ್ಯಾ ಮಾರಾಟ ಮಾಡಿದ್ದ ಅಲಾಸ್ಕಾ ಈಗ ಅಮೆರಿಕಾದ ಚಿನ್ನದ ಮೊಟ್ಟೆ!

Public TV
4 Min Read

ಸಾಮಾನ್ಯವಾಗಿ ಒಂದಿಲ್ಲೊಂದು ಚರ್ಚೆಯಲ್ಲಿರುವ ಟ್ರಂಪ್ ಇದೀಗ ರಷ್ಯಾದ (Russia) ಜೊತೆಗಿನ ಸಭೆ ಮೂಲಕ ಮತ್ತೊಂದು ಚರ್ಚೆಗಿಳಿದಿದ್ದಾರೆ. ಪುಟಿನ್ (Putin) ಜೊತೆ ನಡೆದ ಸಭೆ ಯಾವುದೇ ಒಪ್ಪಂದಗಳಿಲ್ಲದೆ ಅಂತ್ಯಗೊಂಡರೂ ಕೂಡ ಅಲಾಸ್ಕಾದಲ್ಲಿ ನಡೆದಿದ್ದು ಕೂತುಹಲಕ್ಕೆ ಎಡೆಮಾಡಿಕೊಟ್ಟಿದೆ. 

ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಟ್ರಂಪ್ ಹಾಗೂ ಪುಟಿನ್ ಭೇಟಿಯಾಗಿದ್ದಾರೆ. ಆಗಸ್ಟ್‌ 15 ರಂದು ಉಭಯ ನಾಯಕರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಡುವೆ ಅಂಕೊರೇಜ್‌ನಲ್ಲಿ ಅಮೆರಿಕದ ಸೇನಾ ಮೂಲಸೌಕರ್ಯವಿರುವ ಜಾಯಿಂಟ್ ಬೇಸ್ ಎಲೆಂಡಾರ್ಫ್–ರಿಚರ್ಡ್‌ಸನ್‌ನಲ್ಲಿ (JBER) ಸುಮಾರು ಮೂರು ಗಂಟೆ ಸಭೆ ನಡೆಯಿತು. ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿ ನಡೆಸಿದರು.  ಈ ಸಭೆಗೆ ಆಗಮಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸ್ವತಃ ಡೊನಾಲ್ಡ್ ಟ್ರಂಪ್ ಅವರು ವೇದಿಕೆಗೆ ಕರೆದುಕೊಂಡು ಬಂದರು. ಈ ವೇಳೆ ಅಮೆರಿಕ ಸೇನೆಯ ಬಾಂಬರ್ ಫೈಟರ್ ಜೆಟ್ B-2 bomber ಹಾರಾಡಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರಶ್ನಿಸಿದಾಗ ಟ್ರಂಪ್‌ ಅವರು ಅತಿಥಿಗಳಿಗೆ ಅಮೆರಿಕದ ಸೇನಾ ಗೌರವ ಎಂದು ತಿಳಿಸಿದ್ದಾರೆ. ಇದು ಜಗತ್ತಿನಾದ್ಯಂತ ವ್ಯಾಪಕ ಟೀಕೆಗೆ ಕಾರಣವಾಗಿದೆ. 

ಸುದ್ದಿಗೋಷ್ಠಿಯಲ್ಲಿ ಟ್ರಂಪ್‌ ಮಾತನಾಡಿ, ಈ ಸಭೆಯಲ್ಲಿ ಅನೇಕ ಮಾತುಕತೆಗಳಿಗೆ ಒಪ್ಪಿಗೆ ಸೂಚಿಸಿದ್ದು, ಕೆಲವೇ ಕೆಲವು ಬಾಕಿ ಉಳಿದಿವೆ. ರಷ್ಯಾ ಜೊತೆಗೆ ಕೆಲವು ಬಗೆಹರಿಸಲಾಗದ ಸಮಸ್ಯೆಗಳಿವೆ. ಅಲ್ಲಿಗೆ ತಲುಪಲು ನಮಗೆ ಉತ್ತಮ ಅವಕಾಶವೂ ಇದೆ. ಅವೆಲ್ಲದರ ಒಪ್ಪಂದವಾಗುವವರೆಗೆ ಅಮೆರಿಕ ರಷ್ಯಾ ನಡುವೆ ಯಾವುದೇ ಒಪ್ಪಂದವಿಲ್ಲ. ಪುಟಿನ್‌ ಜೊತೆ ಉಕ್ರೇನ್‌ ಕುರಿತ ಮಾತುಕತೆಯಲ್ಲಿ ಒಂದಿಷ್ಟು ಪ್ರಗತಿ ಕಂಡುಬಂದಿದೆ. ಆದ್ರೆ ಗುರಿ ಸಾಧನೆ ಆಗುವವರೆಗೆ ಸಂಪೂರ್ಣ ಒಪ್ಪಂದವಾಗವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. 

ಇದೇ ವೇಳೆ ಮಾತನಾಡಿದ ಪುಟಿನ್‌, ದೇಶದ ಭದ್ರತೆಗೆ ಆತಂಕವಿರುವುದರಿಂದ ಉಕ್ರೇನ್‌ಗೆ ಸಂಬಂಧಿಸಿದಂತೆ ನಮ್ಮ ನಿಲುವು ಬದಲಾಗುವುದಿಲ್ಲ ಎಂದು ಖಚಿತಪಡಿಸಿದರು. ಅಲ್ಲದೇ ಮಾತುಕತೆಯು ದೀರ್ಘಕಾಲೀನವಾಗಿಸಬೇಕಾದ್ರೆ, ಸಂಘರ್ಷಕ್ಕೆ ಕಾರಣವಾದ ಎಲ್ಲ ಅಂಶಗಳನ್ನೂ ಸರಿಪಡಿಸಬೇಕು ಎಂಬುದು ನಮಗೆ ಮನವರಿಕೆಯಾಗಿದೆ. ಆ ಮೂಲಕ, ಉಕ್ರೇನ್ ಮತ್ತು ಅದರ ಪ್ರದೇಶ ಪಶ್ಚಿಮದ ಭಾಗವಾಗುವುದನ್ನು ಒಪ್ಪಲಾಗದು ಎಂಬ ರಷ್ಯಾ ನಿಲುವನ್ನು ಮುಂದಿಟ್ಟಿದ್ದಾರೆ.

ಅಲಾಸ್ಕಾ ಮಿಲಿಟರಿ ನೆಲೆಯನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ? 
ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ತಮ್ಮ ಭೇಟಿಗಾಗಿ ಅಲಾಸ್ಕಾ ಪ್ರದೇಶವನ್ನು ಆಯ್ಕೆ ಮಾಡಿದ್ದೆ ಯಾಕೆ ಎನ್ನುವಂತಹ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ. ಅಲಾಸ್ಕಾ ಪ್ರದೇಶವು ಎಲ್ಮೆಂಡಾರ್ಫ್ ವಾಯು ಸೇನೆ ಹಾಗೂ ಪೋರ್ಟ್ ರಿಚರ್ಡ್ಸನ್ ಸೇನಾ ನೆಲೆಯನ್ನು ವಿಲೀನಗೊಳಿಸಿದ ಆಂಕಾರೇಜ್‌ನಲ್ಲಿರುವ ಎಲ್ಮೆಂಡಾರ್ಫ್  ರಿಚರ್ಡ್ಸನ್ ಜಂಟಿ ನೆಲೆಯಾಗಿದೆ.

ಅಲಾಸ್ಕಾ 1867ರಲ್ಲಿ ಅಮೆರಿಕ ಆಡಳಿತಕ್ಕೆ ಬಂದಿತ್ತು. ಹೀಗಾಗಿ ಈ ಐತಿಹಾಸಿಕ ಸಂಬಂಧವನ್ನು ಇದು ಪ್ರತಿಬಿಂಬಿಸುತ್ತದೆ. ಈ ಪ್ರದೇಶ ರಷ್ಯಾ ದೇಶಕ್ಕೆ ಹತ್ತಿರವಾಗಿದ್ದು, ಅಮೆರಿಕಾದ ಪ್ರಮುಖ ರಕ್ಷಣಾ ಕೇಂದ್ರಗಳು ಇಲ್ಲಿವೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನ ಕೊನೆಗೊಳಿಸುವ ನಿಟ್ಟಿನಲ್ಲಿ ಈ ಸಭೆ ಪ್ರಮುಖವಾಗಿತ್ತು. ಈ ಪ್ರದೇಶ ಭೌಗೋಳಿಕವಾಗಿ ಸಮೀಪವಾಗಿದ್ದರೂ ಸಾಂಕೇತಿಕ ಮಹತ್ವವನ್ನು ಹೊಂದಿದೆ. ಅದಲ್ಲದೆ ಸುರಕ್ಷಿತ ನಿಯಂತ್ರಣ ಹೊಂದಿದ ಪ್ರದೇಶ ಇದಾಗಿದ್ದು, ಸಭೆ ಕೈಗೊಳ್ಳಲು ಸೂಕ್ತ ಪ್ರದೇಶ. ಅದಲ್ಲದೆ ಶೃಂಗಸಭೆಗೆ ಕೂಡ ಇದೊಂದು ಸೂಕ್ತ ಸ್ಥಳ ಎನ್ನಲಾಗಿದೆ.

ಅಲಾಸ್ಕಾ ಇತಿಹಾಸ:
ಒಂದು ಕಾಲದಲ್ಲಿ ರಷ್ಯಾದ ಆಡಳಿತದಲ್ಲಿದ್ದ ಅಲಾಸ್ಕಾ ಪ್ರದೇಶ ಇದೀಗ ಅಮೆರಿಕದ ಒಡೆತನದಲ್ಲಿದೆ. ಅಮೆರಿಕದಲ್ಲಿರುವ ಒಂದು ಅತ್ಯಂತ ವಿಸ್ತೀರ್ಣವುಳ್ಳ ಪ್ರದೇಶವೂ ಇದಾಗಿದೆ. ಉತ್ತರ ಅಮೆರಿಕ ಖಂಡದ ವಾಯುವ್ಯ ತುದಿಯಲ್ಲಿರುವ 15,18,800 ಚದರ ಕಿ.ಮೀ ಇರುವ ಈ  ಪ್ರದೇಶದಲ್ಲಿ ಸ್ಥಳೀಯ ಜನಾಂಗಗಳು ವಾಸವಾಗಿವೆ.

ಪ್ರಾರಂಭದಲ್ಲಿ ಇನ್ಯೂಟ್, ಯುಪಿಕ್, ಅಲೆಟ್ ಜನಾಂಗಗಳು ವಾಸವಾಗಿದ್ದವು. ರಷ್ಯಾದ ಅನ್ವೇಷಕ ವಿಟಸ್ ಬೇರಿಂಗ್ ಎಂಬುವರು 1741ರಲ್ಲಿ ಈ ಅಲಾಸ್ಕಾವನ್ನು ಕಂಡುಹಿಡಿದರು. ಅದಾದ ಬಳಿಕ ಸುಮಾರು ವರ್ಷಗಳ ಕಾಲ ಚರ್ಮ ವ್ಯಾಪಾರ ನಡೆಸಲು ವ್ಯಾಪಾರಿಗಳು ಇಲ್ಲಿಗೆ ಬರುತ್ತಿದ್ದರು. ಈ ಸಮಯದಲ್ಲಿ ಈ ಪ್ರದೇಶ ರಷ್ಯಾದ ನಿಯಂತ್ರಣದಲ್ಲಿತ್ತು. ಅದಾದ ಬಳಿಕ 1867ರಲ್ಲಿ ಅಮೆರಿಕದ ಕಾರ್ಯದರ್ಶಿ ವಿಲಿಯಂ ಹೆನ್ರಿ ಸಿವರ್ಡ್ ಅವರು ರಷ್ಯಾದಿಂದ ಅಲಾಸ್ಕಾನ್ನು 7.2 ಮಿಲಿಯನ್ ಡಾಲರ್‌ಗೆ ಖರೀದಿಸಿದರು. ಆ ಸಮಯದಲ್ಲಿ ಇದು ಸಿವರ್ಡ್ ಮೂರ್ಖತನ ಎಂದು ಟೀಕಿಸಿದರು. ಕಾರಣ ಹಿಮಾಚ್ಛಾದಿತವಾಗಿದ್ದ ಈ ಪ್ರದೇಶ ಯಾವುದಕ್ಕೂ ಉಪಯೋಗವಿಲ್ಲದೆ ಖರೀದಿಸಿದ್ದು ಮೂರ್ಖತನ ಎನಿಸಿತ್ತು. 1890ರ ದಶಕದಲ್ಲಿ ಇದೇ ಅಲಾಸ್ಕಾ ಪ್ರದೇಶದಲ್ಲಿ ಚಿನ್ನ ಪತ್ತೆಯಾಗಿತ್ತು ಇದಾದ ನಂತರ ಸಾವಿರಾರು ಜನ ಈ ಪ್ರದೇಶಕ್ಕೆ ವಲಸೆ ಬರಲು ಪ್ರಾರಂಭಿಸಿದರು. ಇದು  ಅಲಾಸ್ಕಾದ ಆರ್ಥಿಕತೆಯನ್ನು ಬದಲಾಯಿಸಿತು. ಬಳಿಕ 1959 ರಲ್ಲಿ ಅಲಾಸ್ಕ್ ಅಧಿಕೃತವಾಗಿ ಅಮೆರಿಕಾದ 49ನೇ ರಾಜ್ಯವಾಗಿ ಘೋಷಣೆ ಆಯಿತು.  ಅಲಾಸ್ಕಾದಲ್ಲಿ 2025ರ ಪ್ರಕಾರ ಸುಮಾರು 7.3 ಲಕ್ಷ ಜನರು ವಾಸಿಸುತ್ತಾರೆ. ಜೊತೆಗೆ ಅಮೆರಿಕಾದ ವಾಯುಪಡೆ ಹಾಗೂ ಸೇನಾ ಶಿಬಿರದ ಕೇಂದ್ರಗಳು ಇಲ್ಲಿದೆ.

20ನೇ ಶತಮಾನದಲ್ಲಿ  ಅಲಾಸ್ಕಾ ಪ್ರದೇಶದಲ್ಲಿ ತೈಲ ಹಾಗೂ ನೈಸರ್ಗಿಕ ಅನಿಲ ಪತ್ತೆಯಾಯಿತು. ಇದರಿಂದ ಈ ಪ್ರದೇಶ ಅಮೆರಿಕಾದ ಪ್ರಮುಖ ಶಕ್ತಿ ಕೇಂದ್ರವಾಗಿ ಪರಿವರ್ತನೆಯಾಯಿತು. ಇಂದಿಗೂ ಕೂಡ ಈ ಪ್ರದೇಶವು ತನ್ನ ಪ್ರಕೃತಿ ಸಂಪತ್ತು, ಹಿಮ ಪರ್ವತಗಳು ಹಾಗೂ ವನ್ಯಜೀವಿ ಸಂಪತ್ತಿಗಾಗಿ ಪ್ರಸಿದ್ಧಿಯನ್ನು ಪಡೆದಿದೆ. ಇದೀಗ ಡೊನಾಲ್ಡ್ ಟ್ರಂಪ್ ಹಾಗೂ ಪುಟಿನ್ ಸಭೆಯು ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಹೀಗಾಗಿ ಪುಟಿನ್  ಅಲಾಸ್ಕಾ ಪ್ರದೇಶವನ್ನು ಮತ್ತೆ ರಷ್ಯಾದ ಭಾಗವಾಗಿ ಹಿಂಪಡೆಯುತ್ತಾರಾ? ಎಂಬ ಪ್ರಶ್ನೆಯು ಕೇಳಿಬಂದಿದೆ.

Share This Article