ಆಲಮಟ್ಟಿ ಜಲಾಶಯ ಭರ್ತಿ – ಭಾರೀ ಪ್ರಮಾಣದ ನೀರು ಹೊರಕ್ಕೆ

Public TV
2 Min Read

ವಿಜಯಪುರ: ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರಿನ ಒಳಹರಿವು ಹೆಚ್ಚಾಗಿದ್ದು, 6 ಕ್ರಸ್ಟ್ ಗೇಟ್‍ಗಳ ಮೂಲಕ 32 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಸುಮಾರು ಒಂದು ಮೀಟರ್ ಎತ್ತರ ಕ್ರಸ್ಟ್ ಗೇಟ್ ತೆರೆದು ನೀರು ಬಿಡುಗಡೆ ಮಾಡಲಾಗುತ್ತಿದೆ.

ವಿದ್ಯುತ್ ಉತ್ಪಾದನೆ ಘಟಕಗಳ ಮೂಲಕ ಸುಮಾರು 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ನಾರಾಯಣಪುರದ ಬಸವ ಸಾಗರಕ್ಕೆ ನೀರು ಹರಿಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಗ್ರಾಮಳ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಆಲಮಟ್ಟಿ ಜಲಾಶಯದ ಗರಿಷ್ಠ ನೀರಿನ ಮಟ್ಟ 519.60 ಮೀ. ಆಗಿದ್ದು, ಇಂದು 519.34 ಮೀ. ನಷ್ಟು ಭರ್ತಿಯಾಗಿದೆ. ಇದು 123.081 ಟಿಎಂಸಿಯಷ್ಟು ಗರಿಷ್ಠ ಸಾಮಥ್ರ್ಯ ಹೊಂದಿದ್ದು, ಇಂದು 118.713 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಪ್ರಸ್ತುತ 72,000 ಕ್ಯೂಸೆಕ್ ಒಳಹರಿವು ಇದ್ದು, 72,000 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಅಬ್ಬರ ಜೋರಾಗಿದ್ದು, ಮಹಾನಗರಿ ಮುಂಬೈ ಮುಳುಗಡೆಯಾಗಿದೆ. ರಸ್ತೆಗಳು ಜಲಾವೃತವಾಗಿದ್ದು, ಕಾರು ಬೈಕ್‍ಗಳು ಆಟಿಕೆಯಂತಾಗಿವೆ. ರೈಲು, ವಿಮಾನ ನಿಲ್ದಾಣಗಳಿಗೆ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಮುಂಬೈನಿಂದ ಕೊಲ್ಹಾಪುರಕ್ಕೆ ಹೊರಟಿದ್ದ ಮಹಾಲಕ್ಷ್ಮೀ ಎಕ್ಸ್ ಪ್ರೆಸ್ ರೈಲು ಶುಕ್ರವಾರ ರಾತ್ರಿಯಿಂದ ಬದಲಾಪುರದ ಬಳಿ ಪ್ರವಾಹದ ನೀರಿನಲ್ಲಿ ಸಿಲುಕಿತ್ತು. ತಮ್ಮನ್ನು ಹೇಗಾದರೂ ಮಾಡಿ ಕಾಪಾಡಿ, ಹಲವು ಗಂಟೆಗಳಿಂದ ರೈಲಿನಲ್ಲಿಯೇ ಬಂಧಿಯಾಗಿದ್ದೇವೆ ಎಂದು ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಎನ್‍ಡಿಆರ್‍ಎಫ್, ವಾಯುಪಡೆ ಮತ್ತು ನೌಕಾಪಡೆಗಳ ಯೋಧರು ಕಾರ್ಯಾಚರಣೆ ನಡೆಸಿದ್ದರು. ಹೆಲಿಕಾಪ್ಟರ್ ಮತ್ತು ಬೋಟ್‍ಗಳ ನೆರವಿನಿಂದ 9 ಗರ್ಭಿಣಿಯರು, ಮಹಿಳೆಯರು ಮಕ್ಕಳು ಸೇರಿ ರೈಲಿನಲ್ಲಿದ್ದ ಎಲ್ಲ 1050 ಪ್ರಯಣಿಕರನ್ನು ರಕ್ಷಿಸಿದ್ದಾರೆ.

ಮುಂಬೈ ಏರ್‍ಪೋರ್ಟ್‍ನಲ್ಲೂ 11 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಕೆಲವು ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಎನ್‍ಡಿಆರ್‍ಎಫ್ ಪಡೆ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸನ್ನದ್ಧವಾಗಿದೆ. ಇತ್ತ ಅಸ್ಸಾಂನಲ್ಲಿ ಪ್ರವಾಹ ಮುಂದುವರಿದಿದ್ದು, ಸಾವಿನ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ರಾಜಸ್ಥಾನದ ಸಿಕಾರ್ ನಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದ್ದು, ಬೈಕ್ ಸವಾರನೊಬ್ಬ ಕೊಚ್ಚಿ ಹೋಗಿದ್ದಾನೆ. ಮೂವರು ಬಾಲಕಿಯರನ್ನು ರಕ್ಷಿಸಲಾಗಿದೆ. ಒಡಿಶಾ, ಮಧ್ಯಪ್ರದೇಶ, ಛತ್ತೀಸ್‍ಗಢ, ವಿದರ್ಭಾ, ಗುಜರಾತ್‍ನಲ್ಲೂ ಇನ್ನೂ ಮೂರು ದಿನ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *