25 ಕೋಟಿ ನಂತ್ರ ಮತ್ತೆ 3 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್

Public TV
2 Min Read

ಮುಂಬೈ: ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಹೋರಾಟ ನಡೆಸುತ್ತಿದೆ. ಬಾಲಿವುಡ್‍ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅವರು ಈ ಹಿಂದೆ ಪಿಎಂ ಕೇರ್ಸ್ ಫಂಡ್‍ಗೆ ಬರೋಬ್ಬರಿ 25 ಕೋಟಿ ರೂ. ದೇಣಿಗೆ ನೀಡಿದ್ದರು. ಇದೀಗ ಮತ್ತೆ ಅಕ್ಷಯ್ ಕುಮಾರ್ ಮೂರು ಕೋಟಿ ದೇಣಿಗೆ ನೀಡಿದ್ದಾರೆ.

ನಟ ಅಕ್ಷಯ್ ಕುಮಾರ್ ಈ ಬಾರಿ ಪಿಎಂ ಕೇರ್ಸ್ ಫಂಡ್‍ಗೆ ದೇಣಿಗೆ ನೀಡಿಲ್ಲ. ಬದಲಾಗಿ ಬೃಹನ್ ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ)ಗೆ ಹೆಚ್ಚುವರಿಯಾಗಿ ಮೂರು ಕೋಟಿ ಹಣವನ್ನು ನೀಡಿದ್ದಾರೆ. ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಪೌರ ಕಾರ್ಮಿಕರು ಜನರ ಜೀವ ರಕ್ಷಣೆಗಾಗಿ ಕಷ್ಟಪಡುತ್ತಿದ್ದಾರೆ. ಹೀಗಾಗಿ ಮೊದಲಿಗೆ ಅವರ ಸುರಕ್ಷತೆಯನ್ನು ಕಾಪಾಡಬೇಕು. ಹೀಗಾಗಿ ಅವರಿಗೆ ವೈಯಕ್ತಿಕ ಸುರಕ್ಷತಾ ಸಾಧನಗಳ (ಪಿಪಿಇ) ಕಿಟ್ ಬೇಕಾಗುತ್ತದೆ. ಆದ್ದರಿಂದ ಹೆಚ್ಚಿನ ಪಿಪಿಇ ಕಿಟ್‍ಗಳನ್ನು ತಯಾರಿಸಲು ಸಹಾಯ ಮಾಡುವ ಉದ್ದೇಶದಿಂದ ಮೂರು ಕೋಟಿ ದೇಣಿಗೆಯಾಗಿ ನೀಡಿದ್ದಾರೆ.

ಜೊತೆಗೆ ಅಕ್ಷಯ್ ‘ಹೃತ್ಪೂರ್ವಕ ಧನ್ಯವಾದಗಳು’ ಎಂದು ಬರೆದಿರುವ ಪತ್ರವನ್ನು ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆ ಫೋಟೋವನ್ನು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿ, ಪೊಲೀಸ್, ವೈದ್ಯರು, ನರ್ಸ್, ಎನ್‍ಜಿಒಗಳು, ಸ್ವಯಂ ಸೇವಕರು, ಪೌರ ಕಾರ್ಮಿಕರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಅನೇಕರಿಗೆ ಧನ್ಯವಾದ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿ “ನಮ್ಮನ್ನು, ನಮ್ಮ ಕುಟುಂಬದವರನ್ನು ಸುರಕ್ಷಿತವಾಗಿರಿಸಲು ಹಗಲಿರುಳು ಕೆಲಸ ಮಾಡುವ ಜನರ ಸೈನ್ಯವಿದೆ. ಅವರಿಗಾಗಿ ನಾವೆಲ್ಲರೂ ಒಟ್ಟಿಗೆ ಸೇರಿ ಧನ್ಯವಾದ ತಿಳಿಸೋಣ” ಎಂದಿದ್ದಾರೆ.

ಮಹಾಮಾರಿ ಕೊರೊನಾ ಹರಡುವುದನ್ನು ನಿಯಂತ್ರಿಸಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಕೂಡ ಕಷ್ಟ ಪಡುತ್ತಿದ್ದು, ಇದನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜನರಿಂದಲೇ ದೇಣಿಗೆ ಸ್ವೀಕರಿಸಲು ಮುಂದಾಗಿದ್ದಾರೆ. PM-CARES Fund ಮೂಲಕ ಹಣ ಸಂಗ್ರಹ ಮಾಡುವುದಾಗಿ ಮೋದಿ ಅವರು ತಿಳಿಸಿದ್ದಾರೆ. ಇತ್ತ ಮೋದಿ ಅವರು PM-CARES Fund ದೇಣಿಗೆ ನೀಡುವಂತೆ ಕೋರುತ್ತಿದ್ದಂತೆ ಅಕ್ಷಯ್ ಕುಮಾರ್ ಬರೋಬ್ಬರಿ 25 ಕೋಟಿ ರೂ. ದೇಣಿಗೆ ನೀಡುವುದಾಗಿ ಟ್ವೀಟ್ ಮಾಡಿದ್ದರು.

‘ಈ ಸಮಯದಲ್ಲಿ ಜನರ ಪ್ರಾಣವೇ ಎಲ್ಲಕ್ಕಿಂತ ಮುಖ್ಯ. ಅದಕ್ಕಾಗಿ ಏನೆಲ್ಲ ಸಾಧ್ಯವೋ ಅದೆಲ್ಲವನ್ನು ನಾವು ಮಾಡಬೇಕು. ನಾನು ನನ್ನ ಉಳಿತಾಯದ ಹಣದಲ್ಲಿ 25 ಕೋಟಿ ರೂ. ಗಳನ್ನು ನರೇಂದ್ರ ಮೋದಿಯವರ PM-CARES Fund ನೀಡುವುದಾಗಿ ಪ್ರಮಾಣಿಸುತ್ತಿದ್ದೇನೆ. ನಾವೆಲ್ಲ ಒಂದಾಗಿ ಜೀವ ಉಳಿಸೋಣ. ಜೀವ ಇದ್ದರೆ ಜಗತ್ತು’ ಎಂದು ಬರೆದು ಪ್ರಧಾನಿಗಳ ಟ್ವೀಟ್‍ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *