ಮುಂಬೈ: ವಿಮಾನ ಪತನಗೊಂಡು (Plane Crash) ಮೃತಪಟ್ಟ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ (Ajit Pawar) ಅವರ ಮೃತದೇಹವನ್ನು ವಾಚ್ ಮತ್ತು ಬಟ್ಟೆಯಿಂದ ಗುರುತಿಸಲಾಗಿದೆ.
ಪವಾರ್ ಇದ್ದ ವಿಮಾನ ಬುಧವಾರ ಇಳಿಯಲು ಪ್ರಯತ್ನಿಸಿದಾಗ ಬಾರಾಮತಿ ವಿಮಾನ ನಿಲ್ದಾಣದಲ್ಲಿ ದಟ್ಟವಾದ ಮಂಜು ಮತ್ತು ಕಡಿಮೆ ಗೋಚರತೆ ಇತ್ತು. ಪೈಲಟ್‌ಗೆ ಸರಿಯಾದ ಗೋಚರತೆ ಇಲ್ಲದೇ ವಿಮಾನ ಪತನವಾಗಿರಬಹುದು ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. VSR ವೆಂಚರ್ಸ್ ನಿರ್ವಹಿಸುತ್ತಿದ್ದ ಬೊಂಬಾರ್ಡಿಯರ್ ಲಿಯರ್ಜೆಟ್-45, ವಿಮಾನ ನಿಲ್ದಾಣದದಲ್ಲಿ ಪತನಗೊಂಡು, ಅದರಲ್ಲಿದ್ದ ಐವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮೂರು ವರ್ಷದ ಒಳಗಡೆ ಎರಡನೇ ಬಾರಿ ವಿಎಸ್‌ಆರ್ ಕಂಪನಿಯ ವಿಮಾನ ಪತನ
ಬೆಳಗ್ಗೆ ಗೋಚರತೆ ತೀವ್ರವಾಗಿ ಕಡಿಮೆಯಾಗಿತ್ತು. ವಿಮಾನ ಪತನಗೊಂಡ ವಿಚಾರ ತಿಳಿದು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದವು. ಆದರೆ, ಅಪಘಾತದ ತೀವ್ರತೆಗೆ ಜಿಟ್ ಸಂಪೂರ್ಣ ಸುಟ್ಟು ಕರಕಲಾಗಿತ್ತು.
ವಿಮಾನದ ಅವಶೇಷಗಳಲ್ಲಿ ಮೃತದೇಹಗಳನ್ನು ಗುರುತಿಸುವುದು ಕಷ್ಟಕರವಾಗಿತ್ತು. ಪವಾರ್ ದೇಹವನ್ನು ಅವರ ವಾಚ್ ಮತ್ತು ಬಟ್ಟೆಗಳನ್ನು ಆಧರಿಸಿ ಗುರುತಿಸಲಾಯಿತು. ಉಳಿದವರನ್ನು ಬಟ್ಟೆ ಮತ್ತು ಅವರ ಇತರೆ ವಸ್ತುಗಳ ಆಧಾರದಲ್ಲಿ ಗುರುತು ಪತ್ತೆ ಮಾಡಲಾಗಿದೆ.
ಪವಾರ್ ತಮ್ಮ ವೈಯಕ್ತಿಕ ಭದ್ರತಾ ಅಧಿಕಾರಿ, ಒಬ್ಬ ಸಹಾಯಕ ಮತ್ತು ಇಬ್ಬರು ಪೈಲಟ್‌ಗಳೊಂದಿಗೆ ಪ್ರಯಾಣಿಸುತ್ತಿದ್ದರು. ಐದು ಮಂದಿ ಪ್ರಯಾಣಿಕರಲ್ಲಿ ಯಾರೂ ಬದುಕುಳಿದಿಲ್ಲ. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನಿಖೆ ಆರಂಭಿಸಿದೆ. ವಿಮಾನದ ಅಂತಿಮ ಕ್ಷಣಗಳ ಮಾಹಿತಿ ದಾಖಲಿಸಲು ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ನಿರ್ಣಾಯಕ ಪಾತ್ರ ವಹಿಸುತ್ತವೆ. ಆ ಸಮಯದಲ್ಲಿ ವಿಮಾನ ನಿಲ್ದಾಣದ ಹವಾಮಾನ ವಿವರಗಳು ಸಹ ಅವುಗಳಲ್ಲಿ ದಾಖಲಾಗಿರುತ್ತವೆ. ಇದನ್ನೂ ಓದಿ: Ajit Pawar Dies | ಲ್ಯಾಂಡ್ ಆಗಲು ಇನ್ನೇನು 100 ಅಡಿ ಬಾಕಿಯಿದ್ದಾಗ ಪತನಗೊಂಡು ಸ್ಫೋಟ: ಪ್ರತ್ಯಕ್ಷದರ್ಶಿ
ಅಜಿತ್ ಪವಾರ್ ಅವರ ಸಾವು ಮಹಾರಾಷ್ಟ್ರದ ರಾಜಕೀಯ ವ್ಯವಸ್ಥೆಗೆ ದೊಡ್ಡ ಆಘಾತ ನೀಡಿದೆ. 66 ವರ್ಷದ ಪವಾರ್ ಅವರು ರಾಜ್ಯದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದರು. ಉಪಮುಖ್ಯಮಂತ್ರಿಯಾಗಿ ಆರನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದರು.


