ಅಜಿತ್‌ ಪವಾರ್‌ ದುರ್ಮರಣ – ಕೊನೆಯ 26 ನಿಮಿಷದಲ್ಲಿ ಏನಾಯ್ತು?

2 Min Read

ನವದೆಹಲಿ: ಮಹಾರಾಷ್ಟ್ರದ ಡಿಸಿಎಂ ಅಜಿತ್‌ ಪವಾರ್‌ (Ajit Pawar) ವಿಮಾನ ದುರಂತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಇಬ್ಬರು ಪೈಲಟ್‌ಗಳು, ಒಬ್ಬ ಪಿಎಸ್‌ಒ ಮತ್ತು ಒಬ್ಬ ಅಟೆಂಡೆಂಟ್ ಸೇರಿ 5 ಜನ ಮೃತಪಟ್ಟಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಿಂದ ಬೆಳಗ್ಗೆ 8:10ಕ್ಕೆ ವಿಮಾನ ಟೇಕಾಫ್‌ ಆಗಿತ್ತು.ಅರಬ್ಬಿ ಸಮದ್ರದ ಮೇಲೆ ಹಾರಿ 8:30ಕ್ಕೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ (Baramati Air Port) ಲ್ಯಾಂಡ್‌ ಮಾಡಲು ಪೈಲಟ್‌ ಪ್ರಯತ್ನಿಸಿದ್ದರು.

ಮೊದಲ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಎರಡನೇ ಬಾರಿ ವಿಮಾನ ಇಳಿಸಲು ಮುಂದಾಗಿದ್ದಾರೆ. ಬೆಳಗ್ಗೆ 8:42 ರ ಸುಮಾರಿಗೆ ಎರಡನೇ ಬಾರಿಗೆ ಇಳಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಪ್ರಯತ್ನ ವಿಫಲವಾಗಿ ವಿಮಾನ ಪತನಗೊಂಡಿದೆ. ಇದನ್ನೂ ಓದಿ: ಮೂರು ವರ್ಷದ ಒಳಗಡೆ ಎರಡನೇ ಬಾರಿ ವಿಎಸ್‌ಆರ್‌ ಕಂಪನಿಯ ವಿಮಾನ ಪತನ

 

ಕೊನೆಯ ಆ 26 ನಿಮಿಷದಲ್ಲೇನಾಯ್ತು?
ಬೆಳಗ್ಗೆ 8:18 ಬಾರಾಮತಿ ಏರ್‌ ಟ್ರಾಫಿಕ್‌ ಕಂಟ್ರೋಲರ್‌ ಅನ್ನು (ATC) ವಿಮಾನ ಸಂಪರ್ಕಿಸಿದೆ. ಗಾಳಿಯ ವೇಗ, ಗೋಚರತೆ (Visibility) ವಿಮಾನದ ಪೈಲಟ್ ಮಾಹಿತಿ ಕೇಳಿದ್ದಾರೆ. ಇದಕ್ಕೆ ಶಾಂತವಾದ ಗಾಳಿ, ಗೋಚರತೆ 3 ಸಾವಿರ‌ ಮೀಟರ್ ಎಂದು ಎಟಿಸಿಯಿಂದ ಮಾಹಿತಿ ರವಾನೆಯಾಗಿದೆ.

ಬೆಳಗ್ಗೆ 8:30ಕ್ಕೆ ರನ್ ವೇ 11ನಲ್ಲಿ ಲ್ಯಾಂಡಿಂಗ್‌ಗೆ ವಿಮಾನ ಸಜ್ಜಾಗಿತ್ತು. ಆದರೆ ರನ್ ವೇ ಕಾಣಿಸದ ಕಾರಣ ಮೊದಲ ಪ್ರಯತ್ನದಲ್ಲಿ ಗೋ ಅರೌಂಡ್ ಶುರುವಾಗಿತ್ತು. ಬಳಿಕ ಎಟಿಸಿ ವಿಮಾನದ ಪೊಸಿಷನ್ ಬಗ್ಗೆ ಕೇಳಿದಾಗ ರನ್ ವೇ 11 ರ ಹತ್ತಿರ ಇದ್ದೇವೆ ಎಂಬ ಉತ್ತರ ಬಂದಿದೆ.

ರನ್ ವೇ ಗೋಚರತೆಯ ಬಗ್ಗೆ ತಿಳಿಸುವಂತೆ ಕೇಳಿದಾಗ ‘ಸದ್ಯಕ್ಕೆ ರನ್ ವೇ ಕಾಣಿಸುತ್ತಿಲ್ಲ, ಕಾಣಿಸಿದಾಗ ಮತ್ತೆ ಸಂಪರ್ಕಿಸುತ್ತೇವೆ ಎಂದು ವಿಮಾನದಿಂದ ಉತ್ತರ (Runway is currently not in sight, will call when runway is in sight) ಬಂದಿದೆ. ಇದಾದ ಕೆಲವೇ ಸೆಕೆಂಡ್‌ ಬಳಿಕ ರನ್ ವೇ ಕಾಣಿಸುತ್ತಿದೆ ಎಂದು ಪೈಲಟ್ ಉತ್ತರ ನೀಡಿದ್ದಾರೆ.

ಬೆಳಗ್ಗೆ 8:43ಕ್ಕೆ ಎಟಿಸಿ ರನ್ ವೇ 11ರಲ್ಲಿ ವಿಮಾನ ಲ್ಯಾಂಡಿಂಗ್ ಗೆ ಅನುಮತಿ ನೀಡಿದೆ. ಆದರೆ ಲ್ಯಾಂಡಿಂಗ್ ಕ್ಲಿಯರೆನ್ಸ್‌ಗೆ ವಿಮಾನದಿಂದ ಉತ್ತರ ಬಂದಿಲ್ಲ. 8.44ಕ್ಕೆ ರನ್ ವೇ ಬಳಿ ಆಗಸದೆತ್ತರಕ್ಕೆ ಬೆಂಕಿ ಹಾರುತ್ತಿರುವುದು ಎಟಿಸಿಯವರಿಗೆ ಕಾಣಿಸಿದೆ. ತಕ್ಷಣ ತುರ್ತು ಸೇವೆಗಳ ವಾಹನ, ಸಿಬ್ಬಂದಿ ಘಟನಾ ಸ್ಥಳಕ್ಕೆ ರವಾನಿಸಿದ್ದಾರೆ. ವಿಮಾನದ ಅವಶೇಷಗಳು ‌ರನ್ ವೇ 11ರ ಎಡಭಾಗದಲ್ಲಿ ಪತ್ತೆಯಾಗಿದೆ.

Share This Article