ವಿಕೆಟ್ ಕಬಳಿಸಿದರೆ ಹ್ಯಾಂಡ್‍ಶೇಕ್ ಬದಲು ನಮಸ್ಕಾರ ಮಾಡಿ: ರಹಾನೆ

Public TV
1 Min Read

ಮುಂಬೈ: ಕೊರೊನಾ ವೈರಸ್ ಕಾರಣದಿಂದ ಮುಂದಿನ ದಿನಗಳಲ್ಲಿ ಆಟಗಾರರು ಕ್ರೀಡಾಂಗಣದಲ್ಲಿ ಸಾಮಾಜಿಕ ಅಂತರ ಪಾಲಿಸಲು ಈಗಾಗಲೇ ದೇಶೀಯ ಕ್ರಿಕೆಟ್ ಸಂಸ್ಥೆಗಳು ಸೂಚನೆ ನೀಡಿವೆ. ಅಲ್ಲದೇ ಚೆಂಡಿನ ಹೊಳಪು ಕಾಪಾಡಲು ಕ್ರಿಕೆಟಿಗರು ಎಂಜಲು ಬಳಸಬಾರದು ಎಂದು ಐಸಿಸಿ ಆದೇಶ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಿಬಂಧನೆಗಳು ಜಾರಿಯಾಗಿರುವ ಅವಕಾಶಗಳು ಕಾಣಿಸುತ್ತಿದ್ದು, ಸದ್ಯ ಬೌಲರ್ ಗಳು ವಿಕೆಟ್ ಪಡೆದ ವೇಳೆ ಹ್ಯಾಂಡ್‍ಶೇಕ್ ಬದಲು ನಮಸ್ಕಾರ ಮಾಡಿ ಎಂದು ಟೀಂ ಇಂಡಿಯಾ ಆಟಗಾರ ರಹಾನೆ ಹೊಸ ಸಲಹೆಯನ್ನು ನೀಡಿದ್ದಾರೆ.

ಕ್ರಿಕೆಟ್ ಮತ್ತೆ ಆರಂಭವಾದ ಬಳಿಕ ಬೌಲರ್ ವಿಕೆಟ್ ಪಡೆದರೆ ನಮಸ್ಕಾರ ಅಥವಾ ಬೇರೆ ವಿಧಾನದ ಮೂಲಕ ಸಂಭ್ರಮ ಮಾಡಬೇಕು. ಅಲ್ಲದೇ ಎಲ್ಲ ಆಟಗಾರರು ಪಿಚ್ ಬಳಿ ಬಂದು ಅಭಿನಂದನೆ ಹೇಳುವ ಅವಕಾಶವೂ ಇರುವುದಿಲ್ಲ. ಬೌಂಡರಿ ಲೈನ್‍ನಿಂದಲೇ ಫೀಲ್ಡರ್ ನಮಸ್ಕರಿಸಿ ಅಭಿನಂದನೆ ಸಲ್ಲಿಸಬೇಕಿದೆ. ಇದು ಬರಿ ಕ್ರಿಕೆಟ್‍ನಲ್ಲಿ ಮಾತ್ರವಲ್ಲ ಸಾಮಾಜಿಕವಾಗಿಯೂ ಆಚರಣೆ ಮಾಡಬೇಕಿದೆ ಎಂದು ರಹಾನೆ ತಿಳಿಸಿದ್ದಾರೆ.

ಟೀಂ ಇಂಡಿಯಾ ಪರ ಏಕದಿನ ಹಾಗೂ ಟಿ20 ಮಾದರಿ ಕ್ರಿಕೆಟ್‍ನಿಂದ ದೂರವಾಗಿರುವ ರಹಾನೆ, ಟೆಸ್ಟ್ ಕ್ರಿಕೆಟ್‍ನಲ್ಲಿ ತಂಡದ ಉಪನಾಯಕರಾಗಿದ್ದಾರೆ. 2019ರ ಐಪಿಎಲ್ ಟೂರ್ನಿವರೆಗೂ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ರಹಾನೆಯನ್ನು 2020ರ ಆವೃತ್ತಿಯಲ್ಲಿ ಡೆಲ್ಲಿ ತಂಡ ಖರೀದಿ ಮಾಡಿದೆ. ಸದ್ಯ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಐಪಿಎಲ್ ಆರಂಭವಾಗುವ ಕುರಿತು ಅನುಮಾನಗಳು ಅಭಿಮಾನಿಗಳಲ್ಲಿ ಹೆಚ್ಚಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *