ಬರೋಬ್ಬರಿ 3 ವರ್ಷಗಳ ಬಳಿಕ ತವರಿನಲ್ಲಿ ಶತಕ ಸಿಡಿಸಿದ ರಹಾನೆ

Public TV
1 Min Read

ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಉಪನಾಯಕ ರಹಾನೆ ಶತಕ ಸಿಡಿಸಿದ್ದಾರೆ. 169 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ನೆರವಿನಿಂದ ರಹಾನೆ ಶತಕ ಪೂರ್ಣಗೊಳಿಸಿದರು.

ನಿನ್ನೆಯ ಆಟದಲ್ಲಿ ಅರ್ಧ ಶತಕ (83 ರನ್)ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ರಹಾನೆ, ಇಂದು ರೋಹಿತ್ ಶರ್ಮಾ ಅವರೊಂದಿಗೆ ಕೂಡಿ ಇನ್ನಿಂಗ್ಸ್ ಮುಂದುವರಿಸಿದರು. ರಹಾನೆ ತವರಿನಲ್ಲಿ ಗಳಿಸಿದ 4ನೇ ಶತಕ ಇದಾಗಿದ್ದು, ಟೆಸ್ಟ್ ವೃತ್ತಿ ಜೀವನದ 11ನೇ ಶತಕವನ್ನು ಪೂರೈಸಿದ್ದಾರೆ. 2016 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂದೋರ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ರಹಾನೆ ಶತಕ ಸಿಡಿಸಿದ್ದರು. ಆ ಬಳಿಕ 16 ಟೆಸ್ಟ್ ಪಂದ್ಯ ಆಡಿದ್ದರೂ ರಹಾನೆ ಶತಕ ಗಳಿಸಲು ವಿಫಲರಾಗಿದ್ದರು.

ಅಂದಹಾಗೇ ವೆಸ್ಟ್ ಇಂಡೀಸ್ ಸರಣಿಯಲ್ಲಿ ಶತಕ ಗಳಿಸಿದ್ದ ರಹಾನೆ 2 ವರ್ಷಗಳ ಬಳಿಕ ಶತಕ ಸಾಧನೆ ಮಾಡಿದ್ದರು. 2 ವರ್ಷದ ಅವಧಿಯಲ್ಲಿ ರಹಾನೆ 29 ಇನ್ನಿಂಗ್ಸ್ ಆಡಿದ್ದರೂ ಯಾವುದೇ ಶತಕ ಗಳಿಸಿರಲಿಲ್ಲ.

ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದು, ರಹಾನೆ ತಾಳ್ಮೆಯ ಬ್ಯಾಟಿಂಗ್ ಮೂಲಕ ಉತ್ತಮ ಸಾಥ್ ನೀಡಿ ಪಂದ್ಯದಲ್ಲಿ ತಂಡ ಮೇಲುಗೈ ಸಾಧಿಸಲು ಕಾರಣರಾದರು. 39 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿದ್ದ ತಂಡಕ್ಕೆ ಆಸರೆಯಾದ ಈ ಜೋಡಿ 4ನೇ ವಿಕೆಟ್‍ಗೆ 265 ಎಸೆತಗಳಲ್ಲಿ 267 ರನ್ ಗಳ ಜೊತೆಯಾಟ ನೀಡಿದೆ. 115 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ರಹಾನೆ ಜಾರ್ಜ್ ಲಿಂಡೆ ಬೌಲಿಂಗ್‍ನಲ್ಲಿ ಔಟಾಗುವ ಮೂಲಕ ನಿರ್ಗಮಿಸಿದರು.

Share This Article
Leave a Comment

Leave a Reply

Your email address will not be published. Required fields are marked *