ಬಿಎಸ್‍ವೈ ಏರ್ ಸ್ಟ್ರೈಕ್ ರಾಜಕೀಯ ಹೇಳಿಕೆ ಸಮರ್ಥಿಸಿಕೊಂಡ ಪ್ರತಾಪ್ ಸಿಂಹ

Public TV
3 Min Read

ಮೈಸೂರು: ಏರ್ ಸ್ಟ್ರೈಕ್ ವಿಚಾರದಲ್ಲಿ ರಾಜಕೀಯ ಲೆಕ್ಕಾಚಾರ ಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಾರ್ವಜನಿಕರು, ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು, ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪರವರ ಮಾತು ರಾಜಕೀಯ ಮಾತಲ್ಲ. ಈಗ ದೇಶಕ್ಕೆ ಗಟ್ಟಿ ನಾಯಕತ್ವ ಸಿಕ್ಕಿದೆ. ಆ ನಾಯಕನ ಹಿಂದೆ ದೇಶದ ಜನ ನಿಲ್ಲುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿಯೂ ಈ ಭಾವನೆ ವ್ಯಕ್ತವಾಗಬೇಕು. ಸಿಕ್ಕಿರುವ ನಾಯಕನನ್ನು ಉಳಿಸಿಕೊಳ್ಳುವಂತೆ ಅವರು ಹೇಳಿದ್ದಾರೆ ಅಷ್ಟೇ ಎಂದು ಬಿಎಸ್‍ವೈ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನು ಓದಿ: ಸುಳ್ಳೇ ಸುಳ್ಳು…! ಮತ್ತೆ ಸುಳ್ಳು ಹೇಳಿದ ಯಡಿಯೂರಪ್ಪ! – ನೀವು ಹೇಳಿದ್ದನ್ನು ಮತ್ತೊಮ್ಮೆ ಕೇಳಿಸ್ಕೊಳ್ಳಿ

ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ 2001 ಡಿಸೆಂಬರ್ ನಲ್ಲಿ ಪಾರ್ಲಿಮೆಂಟ್ ಮೇಲೆ ಉಗ್ರರು ದಾಳಿ ಮಾಡಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಗಡಿಯಲ್ಲಿ ಸೇನೆಯನ್ನು ನಿಯೋಜನೆ ಮಾಡಿದ್ದರು. ಯುದ್ಧ ಮಾಡುವಂತೆ ದೇಶದ ಜನರು ಒತ್ತಾಯಿಸಿದ್ದರು. ಆದರೆ ಶಾಂತಿಯುತ ಮಾತುಕತೆಗೆ ಪಾಕಿಸ್ತಾನಕ್ಕೆ ಅವಕಾಶ ನೀಡಲಾಗಿತ್ತು. ಇದಕ್ಕೆ ಪಾಕಿಸ್ತಾನ ಸಹಮತ ತೋರದಿದ್ದಾಗ ಯುದ್ಧ ಮಾಡುವುದು ಅನಿವಾರ್ಯವಾಯಿತು ಎಂದು ಪ್ರತಾಪ್ ಸಿಂಹ ಹೇಳಿದರು.

ಪಾರ್ಲಿಮೆಂಟ್ ದಾಳಿಯ ಬಳಿಕ ಉಗ್ರರು ಮುಂಬೈನ ತಾಜ್ ಹೋಟೆಲ್ ಮೇಲೆ ದಾಳಿ ಮಾಡಿದರು. ಈ ವೇಳೆ 180ಕ್ಕಿಂತಲೂ ಹೆಚ್ಚು ಜನರನ್ನು ಉಗ್ರರು ಹತ್ಯೆ ಮಾಡಿದ್ದರು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಯುದ್ಧ ಮಾಡುವ ಎದೆಗಾರಿಕೆ ತೋರಲಿಲ್ಲ. ಪಾಕಿಸ್ತಾನ ಹಾಗೂ ಭಾರತದ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಹೋಗುವಂತೆ ಸೇನೆಯನ್ನು ಪ್ರೋತ್ಸಾಹಿಸಲು ಕಾಂಗ್ರೆಸ್ ನೇತೃತ್ವದ ಸರ್ಕಾರವು ಹಿಂದೇಟು ಹಾಕಿತ್ತು ಎಂದು ದೂರಿದರು.

ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ನಡೆದ ಉಗ್ರರ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರನ್ನು ಹುತಾತ್ಮರಾಗಿದ್ದಾರೆ. ಪಾಕಿಸ್ತಾನಕ್ಕೆ ಮತ್ತೆ ಪಾಠ ಕಲಿಸಬೇಕು ಎನ್ನುವ ಧ್ವನಿ ದೇಶದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ಪುಲ್ವಾಮಾ ದಾಳಿಯ ಪ್ರತಿ ಕಣ್ಣೀರಿಗೂ ಪ್ರತೀಕಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಭಾರತೀಯ ಸೇನೆಗೆ ಎಲ್ಲ ರೀತಿಯ ಅವಕಾಶ ನೀಡಿದ್ದರು. ಇದರಿಂದಾಗಿ ಫೆಬ್ರವರಿ 26ರಂದು ಮುಂಜಾನೆ 3 ಗಂಟೆಗೆ ಪಾಕಿಸ್ತಾನದ ಉಗ್ರರ ಮೂಲ ನೆಲೆಗಳ ಮೇಲೆ ಭಾರತೀಯ ವಾಯು ಪಡೆ ದಾಳಿ ಮಾಡಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಈ ದಾಳಿಯಿಂದಾಗಿ ನಮಗೆ ಒಬ್ಬ ಗಟ್ಟಿ, ಎದೆಗಾರಿಕೆಯ ನಾಯಕ ಸಿಕ್ಕಿದ್ದಾನೆ ಎಂಬ ಭರವಸೆ, ಭಾವನೆ ದೇಶ ಜನರಲ್ಲಿ ಮೂಡಿದೆ. ಇದರಿಂದಾಗಿ ದೇಶದ ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತಿದ್ದಾರೆ. ಈ ಅರ್ಥದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆಯೇ ಹೊರತು ಬೇರೆ ಅರ್ಥದಲ್ಲಿ ಮಾತನಾಡಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಬ್ಯಾಟಿಂಗ್ ಮಾಡಿದರು.

ಇದೇ ವೇಳೆ ಮಾಜಿ ಸಿಎಂ ವಿರುದ್ಧ ಗುಡುಗಿದ ಸಂಸದರು, ಸಿದ್ದರಾಮಯ್ಯ ಅವರು ವಿನಾಕಾರಣ ಮಾತನಾಡಿ ಹಾಳಾದರು ಹಾಗೂ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಈಗ ಅದೇ ಪ್ರವೃತ್ತಿಯನ್ನು ಸಿಎಂ ಕುಮಾರಸ್ವಾಮಿ ಅವರು ಮುಂದುವರಿಸುತ್ತಿದ್ದಾರೆ. ಏರ್ ಸ್ಟ್ರೈಕ್ ದೇಶ ವಿಚಾರ. ಪಾಕಿಸ್ತಾನ ನಮ್ಮ ದೇಶದ ವೈರಿ. ಹೀಗಾಗಿ ಎಲ್ಲರೂ ರಾಜಕೀಯವನ್ನು ಮರೆತು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಂತು ಪಾಕಿಸ್ತಾನಕ್ಕೆ ಪಾಠ ಕಲಿಸಿ ಎಂದು ಆತ್ಮವಿಶ್ವಾಸ ಮಾತುಗಳನ್ನು ಆಡಬೇಕು. ಇದನ್ನು ಮರೆತು ಕ್ಷುಲ್ಲಕ ರಾಜಕಾರಣ ಮಾಡುತ್ತಿವವರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಪ್ರತಿಕ್ರಿಯಿಸಿದರು.

https://www.youtube.com/watch?v=-HDTIgjGwJg

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *