ನವದೆಹಲಿ: ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷದ ಹಿನ್ನೆಲೆ ದೆಹಲಿಗೆ ಹಿಂತಿರುಗಿದೆ. ವಿಮಾನವು ಸುಮಾರು 7 ಗಂಟೆಗಳ ಕಾಲ ಆಕಾಶದಲ್ಲೇ ಇದ್ದು, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಹಿಂದಿರುಗುವ ನಿರ್ಧಾರ ಕೈಗೊಳ್ಳಲಾಗಿದೆ.
ವಿಮಾನ ಸಂಖ್ಯೆ AI111 ಆಗಿದ್ದು, ಏರ್ಬಸ್ A350-900 ಮಾದರಿಯ ವಿಮಾನವನ್ನು ಬಳಸಲಾಗಿತ್ತು. ದೆಹಲಿಯಿಂದ ಬೆಳಗ್ಗೆ ಸುಮಾರು 6 ಗಂಟೆಗೆ ಟೇಕ್ ಆಫ್ ಆದ ವಿಮಾನವು ಸೌದಿ ಅರೇಬಿಯಾ ಆಕಾಶದ ಮೇಲೆ ಹಾರುತ್ತಿರುವಾಗ ವಿಚಿತ್ರವಾದ ಶಬ್ದ ಕೇಳಿಸಿವೆ. ಇದರಿಂದಾಗಿ ಪೈಲಟ್ ವಾಪಸ್ ದೆಹಲಿಗೆ ಹಿಂದಿರುಗುವ ನಿರ್ಧಾರ ತೆಗೆದುಕೊಂಡಿದ್ದು, ಮಧ್ಯಾಹ್ನ ಸುಮಾರು 12:30 ಗಂಟೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಇಳಿದಿದೆ. ಒಂದೇ ತಿಂಗಳಲ್ಲಿ ಈ ವಿಮಾನದಲ್ಲಿ ಎರಡನೇ ಬಾರಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಇದನ್ನೂ ಓದಿ: ಮಂಗಳೂರಿಗೆ ಬಂತು ಎಲ್ಪಿಜಿ ಹೊತ್ತ ಟ್ಯಾಂಕರ್
ಏರ್ ಇಂಡಿಯಾ ವಕ್ತಾರರ ಮಾಹಿತಿ ಪ್ರಕಾರ, ಸುರಕ್ಷತಾ ದೃಷ್ಟಿಯಿಂದ ವಿಮಾನ ಹಿಂದಿರುಗಿದೆ. ಪ್ರಸ್ತುತ ತಾಂತ್ರಿಕ ಪರಿಶೀಲನೆಗೆ ವಿಮಾನವನ್ನು ಒಳಪಡಿಸಲಾಗಿದೆ. ಇದಕ್ಕೆ ಹೆಚ್ಚುವರಿ ಸಮಯ ಬೇಕಾಗಬಹುದು ಎಂದಿದ್ದಾರೆ.
ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ. ಪ್ರಯಾಣಿಕರನ್ನು ಲಂಡನ್ಗೆ ತ್ವರಿತವಾಗಿ ಕಳುಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ವಿಮಾನ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: 60 ದಿನಕ್ಕೆ ಬೇಕಾಗುವಷ್ಟು ಕಚ್ಚಾತೈಲ ಭಾರತದ ಬಳಿಯಿದೆ – ತೈಲದ ಅಭಾವವಿಲ್ಲ, ಇಂಧನ ಪೂರೈಕೆ ಸ್ಥಿರ: ಮತ್ತೆ ಕೇಂದ್ರ ಸ್ಪಷ್ಟನೆ

