ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷ ಹಿನ್ನೆಲೆ ಟಾಟಾ ಸಮೂಹದ ಏರ್ ಇಂಡಿಯಾ (Air India) ತನ್ನ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಇಂಧನ ಸರ್ಚಾರ್ಜ್ (Fuel Surcharge) ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.
ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದ್ದು, ಏರ್ ಟರ್ಬೈನ್ ಫ್ಯೂಲ್ (ATF ಬೆಲೆಗಳಲ್ಲಿ ತೀವ್ರ ಏರಿಕೆಯಾದ ಹಿನ್ನೆಲೆ ಟಿಕೆಟ್ ದರವನ್ನು ಹೆಚ್ಚಿಸಲಾಗುತ್ತಿದೆ. ದೇಶೀಯ ವಿಮಾನಗಳಿಗೆ 299 ರೂ.ಯಿಂದ 899 ರೂ.ವರೆಗೆ ಇಂಧನ ಸರ್ಚಾರ್ಜ್ ವಿಧಿಸುವುದಾಗಿ ಘೋಷಿಸಿದೆ. ಅಂತಾರಾಷ್ಟ್ರೀಯ ವಿಮಾನಗಳಿಗೆ 24 ಡಾಲರ್‌ನಿಂದ (2,232 ರೂ.) 280 ಡಾಲರ್‌ಗಳವರೆಗೆ (26,041 ರೂ.) ನಿಗದಿಪಡಿಸಲಾಗಿದೆ. ಹೊಸ ಸರ್ಚಾರ್ಜ್ ನಾಳೆಯಿಂದಲೇ (ಏ.8) ಅನ್ವಯವಾಗಲಿದೆ. ಈ ನಿರ್ಧಾರವು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೂ (Air India Express) ಅನ್ವಯವಾಗಲಿದೆ ಎಂದಿದೆ.ಇದನ್ನೂ ಓದಿ: ಇಂದು ರಾತ್ರಿ ಒಂದು ಇಡೀ ನಾಗರಿಕತೆಯೇ ಅಂತ್ಯವಾಗಲಿದೆ: ಇರಾನಿಗೆ ಟ್ರಂಪ್ ವಾರ್ನಿಂಗ್
ಸರ್ಕಾರವು ಇತ್ತೀಚೆಗೆ ದೇಶೀಯ ಎಟಿಎಫ್ ಬೆಲೆಗಳಲ್ಲಿ ಹೆಚ್ಚಳವನ್ನು ಗರಿಷ್ಠ 25% ಮಿತಿಗೊಳಿಸುವ ನಿರ್ಧಾರ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಮತೋಲನದ ವಿಧಾನ ಅನುಸರಿಸಿ, ದೇಶೀಯ ಸರ್ಚಾರ್ಜ್ನಲ್ಲಿ ಫ್ಲ್ಯಾಟ್ ವ್ಯವಸ್ಥೆಯ ಬದಲು ದೂರದ ಮೇಲೆ ಆಧಾರಿತ ಗ್ರಿಡ್ ವ್ಯವಸ್ಥೆ ಜಾರಿಗೊಳಿಸಿದೆ. ಆದರೆ ಅಂತಾರಾಷ್ಟ್ರೀಯ ವಿಮಾನ ಇಂಧನ ಬೆಲೆಗಳಲ್ಲಿ ಯಾವುದೇ ರಿಯಾಯಿತಿ ಇಲ್ಲದ ಕಾರಣ, ಅಂತಾರಾಷ್ಟ್ರೀಯ ವಿಮಾನಗಳ ಸರ್ಚಾರ್ಜ್ನಲ್ಲಿ ಹೆಚ್ಚು ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ.
ಕೆಲವು ದೇಶಗಳನ್ನು ಈ ತಕ್ಷಣದ ಹೆಚ್ಚಳದಿಂದ ಹೊರಗಿಡಲಾಗಿದೆ. ಬಾಂಗ್ಲಾದೇಶ, ಜಪಾನ್, ಹಾಂಗ್ ಕಾಂಗ್, ದಕ್ಷಿಣ ಕೊರಿಯಾ ಸೇರಿದಂತೆ ಪೂರ್ವದ ಗಮ್ಯಸ್ಥಾನಗಳಿಗೆ ಸರ್ಚಾರ್ಜ್ ಬದಲಾವಣೆ ಬಗ್ಗೆ ಇನ್ನೂ ನಿರ್ಧಾರ ಬಾಕಿಯಿದೆ. ಅಗತ್ಯ ನಿಯಂತ್ರಕ ಅನುಮತಿಗಳು ದೊರೆತ ನಂತರವೇ ಈ ಮಾರ್ಗಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.ಇದನ್ನೂ ಓದಿ: ವೇದಿಕೆ ಸಜ್ಜಾಗಿದೆ, ಕೆಲವೇ ದಿನಗಳಲ್ಲಿ ಮರಳಿ ಬಿಜೆಪಿಗೆ ಬರಲಿದ್ದಾರೆ ಯತ್ನಾಳ್ : ರಮೇಶ್ ಜಾರಕಿಹೊಳಿ

