– ಇಂಡಿಗೋ, ಏರ್ ಇಂಡಿಯಾ ಸ್ಪೈಸ್‌ಜೆಟ್ ಕಂಪೆನಿಗಳಿಂದ ವಿರೋಧ
ನವದೆಹಲಿ: ವಿಮಾನದಲ್ಲಿ 60% ಸೀಟುಗಳನ್ನು ಉಚಿತವಾಗಿ ಆಯ್ಕೆ ಮಾಡಬಹುದು ಎಂಬ ಕೇಂದ್ರದ ನಿರ್ಧಾರಕ್ಕೆ (Central Govt) ವಿಮಾನಯಾನ ಕಂಪನಿಗಳು ವಿರೋಧ ವ್ಯಕ್ತಪಡಿಸಿವೆ.
60% ಸೀಟುಗಳ ಉಚಿತ ಆಯ್ಕೆ ನಿರ್ಧಾರಕ್ಕೆ ಏರ್ ಇಂಡಿಯಾ, ಇಂಡಿಗೋ, ಸ್ಪೈಸ್‌ಜೆಟ್ ವಿಮಾನಯಾನ ಕಂಪನಿಗಳು ವಿರೋಧ ವ್ಯಕ್ತಪಡಿಸಿವೆ. ಈ ಮೂರು ವಿಮಾನಯಾನ ಸಂಸ್ಥೆಗಳನ್ನು ಪ್ರತಿನಿಧಿಸುವ ಭಾರತೀಯ ವಿಮಾನಯಾನ ಸಂಸ್ಥೆಗಳ ಒಕ್ಕೂಟವು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಅವರಿಗೆ ಪತ್ರ ಬರೆದಿದೆ. ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಇನ್ಮುಂದೆ ವಿಮಾನದ ಶೇ.60ರಷ್ಟು ಸೀಟುಗಳ ಆಯ್ಕೆ ಫ್ರೀ
ಪತ್ರದಲ್ಲಿ ಈ ನಿರ್ಧಾರದಿಂದ ವಿಮಾನಯಾನ ವಲಯದ ಮೇಲೆ ಆರ್ಥಿಕವಾಗಿ ಪರಿಣಾಮ ಬೀರಲಿದ್ದು, ಇದರಿಂದ ನಷ್ಟವಾದ ಆದಾಯವನ್ನು ಮರುಪಡೆಯಲು ವಿಮಾನಯಾನ ಕಂಪನಿಗಳು ವಿಮಾನದ ಪ್ರಯಾಣದ ದರವನ್ನು ಹೆಚ್ಚಿಸಬೇಕಾಗುತ್ತದೆ. ಇದರಿಂದ ಸೀಟು ಆಯ್ಕೆ ಮಾಡಲು ಬಯಸದ ಪ್ರಯಾಣಿಕರು ಸೇರಿದಂತೆ ಎಲ್ಲರೂ ಹೆಚ್ಚಿನ ದರ ಪಾವತಿಸಬೇಕಾಗುತ್ತದೆ ಎಂದಿದೆ.
ಸೀಟು ಆಯ್ಕೆ ಶುಲ್ಕವು ವಿಮಾನಯಾನ ಆದಾಯದ ಒಂದು ಪ್ರಮುಖ ಮೂಲವಾಗಿದ್ದು, ವಿಮಾನಯಾನ ಸಂಸ್ಥೆಗಳು ನಿರ್ವಹಣೆ, ವಿಮಾನ ನಿಲ್ದಾಣ ಶುಲ್ಕ ಇತ್ಯಾದಿಗಳನ್ನು ಸೇರಿದಂತೆ ಹೆಚ್ಚುತ್ತಿರುವ ವೆಚ್ಚಗಳನ್ನು ಸರಿದೂಗಿಸಲು ಪೂರಕ ಆದಾಯವನ್ನು ಅವಲಂಬಿಸಿವೆ. ಹೀಗಾಗಿ ಈ ಆದಾಯದ ಮೇಲೆ ನಿರ್ಬಂಧ ಹೇರುವುದರಿಂದ ವ್ಯವಹಾರ ದುರ್ಬಲಗೊಳ್ಳುತ್ತದೆ.
ಸಾಮಾನ್ಯವಾಗಿ, ವಿಮಾನಯಾನ ಸಂಸ್ಥೆಗಳು ಮುಂದಿನ ಸಾಲಿನ ಸೀಟುಗಳು ಮತ್ತು ಹೆಚ್ಚುವರಿ ಲೆಗ್ ರೂಮ್ ಸೇರಿದಂತೆ ವಿವಿಧ ಅಂಶಗಳನ್ನು ಅವಲಂಬಿಸಿ ಸೀಟುಗಳ ಆಯ್ಕೆಗೆ 200 ರೂ.ಯಿಂದ 2,100 ರೂ. ಶುಲ್ಕ ವಿಧಿಸುತ್ತವೆ. ಉಚಿತ ಸೀಟು ಆಯ್ಕೆಯು ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಿದ್ದರೂ ಕೂಡ ಪ್ರಯಾಣದ ದರ ಹೆಚ್ಚುವುದರಿಂದ ಗ್ರಾಹಕರ ಆಯ್ಕೆ ಕಡಿಮೆಯಾಗುತ್ತದೆ.
ಇತ್ತೀಚಿಗಷ್ಟೇ ಕೇಂದ್ರ ಸರ್ಕಾರವು ವಿಮಾನಗಳಲ್ಲಿ ಕನಿಷ್ಠ 60% ಸೀಟುಗಳ ಆಯ್ಕೆಗೆ ಯಾವುದೇ ಶುಲ್ಕ ವಿಧಿಸಬಾರದು ಎಂದು ತಿಳಿಸಿತ್ತು. ಉಚಿತವಾಗಿ ನೀಡುವ ಮೂಲಕ ಪ್ರಯಾಣಿಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ನಿರ್ಧರಿಸಿತ್ತು. ಜೊತೆಗೆ ಒಂದೇ ಪ್ರಯಾಣ ವಿವರ ಸಂಖ್ಯೆಯ ಅಡಿಯಲ್ಲಿ ಟಿಕೆಟ್ ಕಾಯ್ದಿರಿಸಿರುವವರನ್ನು ಒಂದೇ ಸ್ಥಳದಲ್ಲಿ, ಸಾಧ್ಯವಾದರೆ ಅಕ್ಕಪಕ್ಕದಲ್ಲಿ ಕೂರಿಸುವುದು ಕಡ್ಡಾಯವಾಗಿದೆ. ಇದರಿಂದ ಕುಟುಂಬದವರು ಹಾಗೂ ಒಟ್ಟಿಗೆ ಪ್ರಯಾಣಿಸುವವರಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ ಎಂದು ಸೂಚಿಸಿತ್ತು.
ಇನ್ನೂ ಕ್ರೀಡಾ ಉಪಕರಣಗಳು, ಸಂಗೀತ ವಾದ್ಯಗಳನ್ನು ಸಾಗಿಸುವಲ್ಲಿ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಅವುಗಳನ್ನು ಸುರಕ್ಷಿತ ಹಾಗೂ ಪಾರದರ್ಶಕ ರೀತಿಯಲ್ಲಿ ಸಾಗಿಸಲು ಹೊಸ ನಿಯಮಗಳನ್ನು ಜಾರಿಗೆ ತರಲು ಹೇಳಿದೆ. ಅಲ್ಲದೇ ಸ್ಥಳೀಯ ಭಾಷೆಗಳಲ್ಲಿ ಸಂವಹನ ಮಾಡುವಂತೆ ವಿಮಾನಯಾನ ಕಂಪನಿಗಳಿಗೆ ಡಿಜಿಸಿಎ ತಿಳಿಸಿತ್ತು. ಇದನ್ನೂ ಓದಿ: ಕೋಲಾರ ಎಪಿಎಂಸಿಗೂ ತಟ್ಟಿದ ವಾರ್ ಎಫೆಕ್ಟ್ – ಟೊಮಾಟೊ ಇಲ್ಲದೆ ಮಾರುಕಟ್ಟೆ ಖಾಲಿ ಖಾಲಿ




