– ಭಾರತೀಯರಿಗೆ ಮನೆಯಿಂದ ಹೊರಬರದಂತೆ ಕೇಂದ್ರದ ಎಚ್ಚರಿಕೆ
ನವದೆಹಲಿ: ನೇಪಾಳದಲ್ಲಿ (Nepal) ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ಕಠ್ಮಂಡುವಿನ (Kathmandu) ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದರಿಂದಾಗಿ ದೆಹಲಿಯಿಂದ ತೆರಳಬೇಕಿದ್ದ ಏರ್ ಇಂಡಿಯಾ (Air India), ಇಂಡಿಗೋ (IndiGo) ಹಾಗೂ ನೇಪಾಳ ಏರ್‌ಲೈನ್ಸ್ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ನೇಪಾಳದಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ್ದಕ್ಕೆ ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, 19ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಕಠ್ಮಂಡುವಿನಲ್ಲಿ ಪ್ರಸ್ತುತ ಇರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ-ಕಠ್ಮಂಡು ಮಾರ್ಗದಲ್ಲಿ ಕಾರ್ಯನಿರ್ವಹಿಸುವ AI2231/2232, AI2219/2220, AI217/218 ಮತ್ತು AI211/212 ವಿಮಾನಗಳನ್ನು ಇಂದು (ಸೆ.9) ರದ್ದುಗೊಳಿಸಲಾಗಿದೆ. ಏನಾದರೂ ಬದಲಾವಣೆಗಳಾದರೆ ಮಾಹಿತಿ ಹಂಚಿಕೊಳ್ಳುವುದಾಗಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ
ಇಂದು ವಿಮಾನ ಕಠ್ಮಂಡುವಿಗೆ ತೆರಳಿದ್ದ ಏರ್ ಇಂಡಿಯಾ ವಿಮಾನ, ನಿಲ್ದಾಣದ ಸಮೀಪ ಹೊಗೆ ಕಂಡುಬಂದ ಕಾರಣ ದೆಹಲಿಗೆ ವಾಪಸ್ ಆಗಿತ್ತು ಎಂದು ಮೂಲಗಳು ತಿಳಿಸಿವೆ. ದೆಹಲಿ ಮತ್ತು ಕಠ್ಮಂಡು ನಡುವೆ ದಿನಕ್ಕೆ ಆರು ಏರ್ ಇಂಡಿಯಾ ವಿಮಾನಗಳು ಸಂಚರಿಸುತ್ತವೆ.
ಭಾರತ ನೇಪಾಳ ಗಡಿಯಲ್ಲಿ ಬಿಗಿ ಭದ್ರತೆ
ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ, ನೇಪಾಳದಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಅನಗತ್ಯವಾಗಿ ಹೊರಗೆ ಬರದಂತೆ ಸಲಹೆ ನೀಡಿದೆ. ಸರ್ಕಾರದ ಸೂಚನೆಗಳನ್ನು ಪಾಲಿಸಿ ಎಂದು ಸೂಚನೆ ನೀಡಿದೆ. ಇನ್ನೂ ಈ ಹಿಂಸಾಚಾರದಿಂದ ಪಶ್ಚಿಮ ಬಂಗಾಳದ ಬಳಿಯ ಪಣಿಟಾಂಕಿಯಲ್ಲಿ ಭಾರತ-ನೇಪಾಳ ಗಡಿಯಲ್ಲಿ ಅಶಾಂತಿ ಉಂಟಾಗಬಹುದೆಂದು ವರದಿಯಾಗಿದೆ. ಈ ಹಿನ್ನೆಲೆ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ನೇಪಾಳದಲ್ಲಿ (Nepal) ಯುವ ಜನತೆಯ ಪ್ರತಿಭಟನೆ (Protest) ತೀವ್ರಗೊಂಡಿದ್ದು ಪ್ರಧಾನಿ ನಿವಾಸಕ್ಕೆ ಬೆಂಕಿ ಇಟ್ಟಿದ್ದಾರೆ. ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧ ವಾಪಸ್ ಪಡೆದರೂ ಹೋರಾಟಗಾರರು ಪ್ರಧಾನಿ ಕೆ.ಪಿ. ಶರ್ಮಾ ಓಲಿ (KP Sharma Oli) ರಾಜೀನಾಮೆಗೆ ಬಿಗಿಪಟ್ಟು ಹಿಡಿದಿದ್ದರು. ಬಿಗಿಪಟ್ಟು ಹಿಡಿದ ಬೆನ್ನಲ್ಲೇ ಕೆ.ಪಿ. ಶರ್ಮಾ ಓಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನೆಯ ಬೆನ್ನಲ್ಲೇ ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧ ವಾಪಸ್