13 ಮಂದಿಯಿದ್ದ ಭಾರತೀಯ ವಾಯುಸೇನೆ ವಿಮಾನ ನಾಪತ್ತೆ

Public TV
2 Min Read

ನವದೆಹಲಿ: ಭಾರತೀಯ ವಾಯುಸೇನೆಯ ಎಎನ್-32 ವಿಮಾನ ಅರುಣಾಚಲ ಪ್ರದೇಶದ ಮೆಚುಕಾ ವಾಯುನೆಲೆಯಿಂದ ಕೆಲ ಗಂಟೆಗಳಿಂದ ನಾಪತ್ತೆಯಾಗಿದೆ.

ಭಾರತೀಯ ವಾಯು ಪಡೆಯ ಸರಕು ಸಾಗಾಟ ವಿಮಾನದಲ್ಲಿ 8 ಮಂದಿ ಸಿಬ್ಬಂದಿ ಮತ್ತು 5 ಮಂದಿ ಪ್ರಯಾಣಿಕರಿದ್ದರು. ಅರುಣಾಚಲ ಪ್ರದೇಶದ ಮೆಚುಕಾ ವಾಯುನೆಲೆಯಿಂದ ಮಧ್ಯಾಹ್ನ 12.25ಕ್ಕೆ ಟೇಕಾಫ್ ಆಗಿದ್ದ ವಿಮಾನ 35 ನಿಮಿಷಗಳ ಕಾಲ ಸಂಪರ್ಕದಲ್ಲಿತ್ತು. ಆದರೆ ಮಧ್ಯಾಹ್ನ 1ಗಂಟೆಯ ವೇಳೆ ಸಂಪರ್ಕ ಕಳೆದುಕೊಂಡಿದೆ ಎಂದು ವಾಯು ಸೇನೆಯ ಅಧಿಕಾರಿ ತಿಳಿಸಿದ್ದಾರೆ.

ವಿಮಾನ ಪತ್ತೆಗಾಗಿ ಸುಖೋಯಿ-30 ಏರ್ ಕ್ರಾಫ್ಟ್ ಮತ್ತು ಸಿ-130 ಸ್ಪೆಷಲ್ ಆಪರೇಷನ್ ವಿಮಾನವನ್ನು ಬಳಕೆ ಮಾಡಲಾಗುತ್ತಿದೆ.

ಎಎನ್ 32 ರಷ್ಯಾದ ಟ್ವಿನ್ ಟರ್ಬೋಪ್ರೊಪ್ ಎಂಜಿನ್ ಹೊಂದಿದ್ದು, 1983 ರಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡಿತ್ತು. ನಾಪತ್ತೆಯಾದ ವಿಮಾನದ ದಾರಿ ಬಹಳ ಕಠಿಣವಾಗಿದ್ದು, ಬೆಟ್ಟ ಗುಡ್ಡ ಮತ್ತು ಭಾರೀ ಅರಣ್ಯವಿದೆ. ಮೆಚುಕಾ ವಾಯುನೆಲೆಯಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡುವುದು ಬಹಳ ಕಷ್ಟ ಎಂದು ವರದಿಯಾಗಿದೆ.

2016ರಲ್ಲಿ ವಾಯುಸೇನೆ ಎಎನ್ 32 ವಿಮಾನ ಪತನಗೊಂಡಿತ್ತು. ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ತೆರಳಲು ಚೆನ್ನೈ ನಿಂದ ಟೇಕಾಫ್ ಆಗಿದ್ದ ವಿಮಾನ ನಾಪತ್ತೆಯಾಗಿತ್ತು. ಬಂಗಾಳ ಕೊಲ್ಲಿಯಲ್ಲಿ ವಿಮಾನ ಹುಡುಕುವ ಕಾರ್ಯಾಚರಣೆ ನಡೆದರೂ ಯಾವುದೇ ಅವಶೇಷ ಸಿಕ್ಕಿರಲಿಲ್ಲ. ವಿಮಾನದಲ್ಲಿದ್ದ ಎಲ್ಲ 29 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು.

ಈ ಬಗ್ಗೆ ಭಾರತೀಯ ನೌಕಾ ಪಡೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಪಿ ಖೋಂಗ್ಸೈ ಮಾತನಾಡಿ, ಕಾಣೆಯಾದ ವಿಮಾನವನ್ನು ಪತ್ತೆಹಚ್ಚಲು ಪ್ರತಿ ಪ್ರಯತ್ನವನ್ನೂ ಮಾಡಲಾಗಿದೆ. ಭಾರತೀಯ ಸೇನೆಯ ಯೋಧರು ಮತ್ತು ಇಂಡೋ-ಟಿಬೇಟಿಯನ್ ಗಡಿಯಲ್ಲಿ ಪೊಲೀಸ್ ಇಲಾಖೆ ಹೆಲಿಕಾಪ್ಟಾರ್ ಸಹಾಯದಿಂದ ಹುಡುಕಾಟ ನಡೆಸುತ್ತಿರುವುದಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಸದ್ಯ ಕಾಣೆಯಾಗಿರುವ ಏರ್‌ಕ್ರಾಫ್ಟ್‌ ಬಗ್ಗೆ ಸಿಕ್ಕ ಮಾಹಿತಿ ಪ್ರಕಾರ, ಏರ್‌ಕ್ರಾಫ್ಟ್‌ ಕಾಣೆಯಾಗಿರುವ ಪ್ರದೇಶ ಹೆಚ್ಚು ಪರ್ವತಗಳು ಮತ್ತು ದಟ್ಟ ಅರಣ್ಯದಿಂದ ಕೂಡಿದೆ. ಹೀಗಾಗಿ ಈ ಪ್ರದೇಶದಲ್ಲಿ ಲ್ಯಾಂಡ್ ಆಗಿ ಮತ್ತೆ ಏರ್‌ಕ್ರಾಫ್ಟ್‌ ಟೇಕಾಫ್ ಆಗುವುದು ತುಂಬಾ ಕಷ್ಟ. ಇಲ್ಲಿನ ಹವಾಮಾನದಿಂದ ಏರ್‌ಕ್ರಾಫ್ಟ್‌ ಗಳು ಹಾರಾಟ ನಡೆಸಲು ಸರಿಯಾದ ವಾತಾವರಣ ಸಿಗುವುದಿಲ್ಲ.

Share This Article
Leave a Comment

Leave a Reply

Your email address will not be published. Required fields are marked *