ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ RJD ವಿರುದ್ಧ ಓವೈಸಿ ವಾಗ್ದಾಳಿ

Public TV
1 Min Read

ನವದೆಹಲಿ: ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ರಾಷ್ಟ್ರೀಯ ಜನತಾ ದಳ (RJD) ವಿರುದ್ಧ ಇದೀಗ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (AIMIM chief Asaduddin Owaisi) ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಜೆಡಿಯವರಿಗೆ ಯಾವುದೇ ಸ್ಪಷ್ಟ ನಿಲುವು ಇಲ್ಲ. ಯಾಕೆ ಅವರು ಸಂಸತ್ ಭವನ (New Parliament) ವನ್ನು ಶವಪೆಟ್ಟಿಗೆಗೆ ಹೋಲಿಸಬೇಕಿತ್ತು..?. ಬೇರೆ ಯಾವುದಾದರೂ ಉದಾಹರಣೆಯನ್ನು ನೀಡಬಹುದಿತ್ತು. ಇದರಲ್ಲೂ ಕೆಲವು ಕೋನವನ್ನು ತರಲಾಗಿದೆ. ಕೆಲವೊಮ್ಮೆ ಅವರು ಜಾತ್ಯತೀತವಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ (Om Birla) ಅವರು ಹೊಸ ಸಂಸತ್ ಭವನವನ್ನು ಉದ್ಘಾಟಿಸಿದರೆ ಉತ್ತಮವಾಗಿತ್ತು. ಹಳೆಯ ಸಂಸತ್ ಕಟ್ಟಡಕ್ಕೆ ದೆಹಲಿ ಅಗ್ನಿಶಾಮಕ ದಳದ ಅನುಮತಿಯೂ ಇರಲಿಲ್ಲ. ಆರ್ ಜೆಡಿಯವರು ಸಂಸತ್ತನ್ನು ಶವಪೆಟ್ಟಿಗೆ ಎಂದು ಏಕೆ ಕರೆಯುತ್ತಿದ್ದಾರೆ? ಅವರು ಇನ್ನೇನಾದರೂ ಹೇಳಬಹುದಿತ್ತು, ಈ ಕೋನವನ್ನು ಏಕೆ ತರಬೇಕು ಎಂದು ಓವೈಸಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ – ಕಾನೂನು ಸಮರಕ್ಕೆ ಮುಂದಾದ ಬಿಜೆಪಿ

ಇದೇ ವೇಳೆ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ ಅವರು, ಲೋಕಸಭೆಯ ಉಸ್ತುವಾರಿ ಸ್ಪೀಕರ್ ಅವರೇ ಹೊರತು ಪ್ರಧಾನಿ ಅಲ್ಲ. ಲೋಕಸಭೆಯು ಜನರಿಗೆ ಉತ್ತರದಾಯಿಯಾಗಿದೆ. ಹೀಗಾಗಿ ಇದನ್ನು ಸ್ಪೀಕರ್ ಅವರು ಉದ್ಘಾಟಿಸಿದ್ದರೆ ಚೆನ್ನಾಗಿತ್ತು. ಆದರೆ ಪ್ರಧಾನಿ ಅವರೇ ಎಲ್ಲವನ್ನೂ ಮಾಡುತ್ತಿದ್ದಾರೆ. ಈ ಮೂಲಕ ತನ್ನಿಂದಲ್ಲದೇ ಬೇರೆ ಯಾರೂ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ತೋರಿಸಲು ಬಯಸುತ್ತಾರೆ. 2014 ಕ್ಕಿಂತ ಮೊದಲು ಭಾರತದಲ್ಲಿ ಏನೂ ಆಗಿಲ್ಲ, ಈಗ ಎಲ್ಲವೂ ನಡೆಯುತ್ತಿದೆ. ಇದು ಪ್ರಧಾನಿಯ ವೈಯಕ್ತಿಕ ಪ್ರಚಾರದ ಹೊಸ ಮಾರ್ಗವಾಗಿದೆ ಎಂದು ಕುಟುಕಿದರು.

ಸದ್ಯ ನೂತನ ಸಂಸತ್ ಭವನವನ್ನು ಶವವಪೆಟ್ಟಿಗೆಗೆ ಹೋಲಿಸಿರುವ ಆರ್‍ಜೆಡಿ ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅನೇಕರು ಇದನ್ನು ಅಸಹ್ಯಕರ ಬೆಳವಣಿಗೆ ಎಂದಿದ್ದಾರೆ.

Share This Article