ಇಂದು ಶಶಿಕಲಾ ಶರಣಾಗದಿದ್ದರೆ ಸೆಷನ್ ಕೋರ್ಟ್ ಕೊಡುತ್ತೆ ಅರೆಸ್ಟ್ ವಾರೆಂಟ್!

Public TV
2 Min Read

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ದೋಷಿಯೆಂದು ಶಿಕ್ಷೆಗೆ ಗುರಿಯಾಗಿರುವ ದಿವಂಗತ ಜಯಲಲಿತಾ ಪರಮಾಪ್ತೆ, ಎಐಎಡಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಹಾಗೂ ಸಂಬಂಧಿಗಳಾದ ಸುಧಾಕರನ್ ಮತ್ತು ಇಳವರಸಿ ಇಂದು ಕೋರ್ಟ್ ಮುಂದೆ ಶರಣಾಗಲೇ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮಂಗಳವಾರ ಮೇಲ್ಮನವಿ ಅರ್ಜಿ ವಿಚಾರಣೆಯ ತೀರ್ಪು ನೀಡಿದ ಸುಪ್ರೀಂಕೋರ್ಟ್, ಇಂದೇ ಶರಣಾಗಬೇಕು ಅಂತಾ ತೀರ್ಪಿನಲ್ಲಿ ಸೂಚಿಸಿತ್ತು. ಆದ್ರೂ ಮೂವರಲ್ಲಿ ಯಾರೊಬ್ಬರೂ ಶರಣಾಗಲಿಲ್ಲ. ಇಂದು ಸುಪ್ರೀಂಕೋರ್ಟ್‍ನಲ್ಲಿ ಮೇಲ್ವಿಚಾರಣ ಅರ್ಜಿ ಹಾಗೂ ಶರಣಾಗತಿಗೆ 4 ವಾರಗಳ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಲಾಗುತ್ತೆ ಅಂತಾ ಶಶಿಕಲಾ ಗುಂಪಿನಿಂದ ಮಾಹಿತಿಯಿದ್ದು, ಅಂತಿಮವಾಗಿ ಉಳಿದಿರುವ ಏಕೈಕ ಮಾರ್ಗ ಅಂದ್ರೆ ಶರಣಾಗತಿ. 4 ವರ್ಷ ಜೈಲು ಶಿಕ್ಷೆ ಅನುಭವಿಸೋದು ಅಂತಾ ಹೇಳಲಾಗ್ತಿದೆ.

ಬೆಂಗಳೂರಿನ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿ ಶಿಕ್ಷೆಯನ್ನು ಜಾರಿ ಮಾಡಿರುವ ಕಾರಣ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೇ 4 ವರ್ಷದಲ್ಲಿ ಉಳಿದಿರುವ ಶಿಕ್ಷೆಯನ್ನು ಅನುಭವಿಸಬೇಕಿದೆ. ಒಂದು ವೇಳೆ ಶಶಿಕಲಾ ಹಾಗೂ ಇಬ್ಬರು ಸಂಬಂಧಿಗಳು ಕೋರ್ಟ್‍ಗೆ ಶರಣಾಗಲು ವಿಳಂಬ ಮಾಡಿದ್ರೆ, ಹೈಕೋರ್ಟ್ ರಿಜಿಸ್ಟಾರ್ ಅವರಿಂದ ಸುಪ್ರೀಂಕೋರ್ಟ್‍ನ ಆದೇಶದ ಪ್ರತಿ ಪಡೆದು, ಸೆಷನ್ಸ್ ಕೋರ್ಟ್, ಈ ಮೂವರ ಮೇಲೂ ಅರೆಸ್ಟ್ ವಾರೆಂಟ್ ಬಳಸಿ ಬಂಧಿಸಿ ಕರೆತರುವಂತೆ ಸೂಚನೆ ನೀಡುವ ಸಾಧ್ಯತೆಗಳು ಕೂಡ ಹೆಚ್ಚಾಗಿವೆ.

ಹಿರಿಯ ಅಧಿಕಾರಿಗಳ ಸಭೆ: ಇನ್ನು ಶಶಿಕಲಾ ನಟರಾಜನ್ ಜೈಲುಶಿಕ್ಷೆ ಅನುಭವಿಸಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಬರುತ್ತಿರುವ ಕಾರಣ ತಡರಾತ್ರಿ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ರು. ಎಸಿಪಿ ಸೂರ್ಯ ನಾರಾಯಣ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಕುರಿತು ಚರ್ಚಿಸಿದ್ರು. ಇನ್ನು ಪರಪ್ಪನ ಅಗ್ರಹಾರ ಜೈಲಿನ ಸುತ್ತಮುತ್ತ ಭದ್ರತೆಗಾಗಿ ಭಾರೀ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಕಳೆದ ಬಾರಿ ಜೈಲಿನೊಳಗಡೆ ಜಯಲಲಿತಾ ಪಕ್ಕದಲ್ಲೇ ಶಶಿಕಲಾ ಕೂಡ ಇದ್ದರು. ಈಗಲೂ ಅದೇ ಸೆಲ್ ನೀಡಲು ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಅದನ್ನು ಸ್ವಚ್ಚಗೊಳಿಸಲಾಗಿದೆ. ಶಶಿಕಲಾ ಅಗತ್ಯಗಳಿಗೆ ತಕ್ಕಂತೆ ಸೆಲ್ ಸಿದ್ದಗೊಳಿಸಲಾಗಿದ್ದು, ಇದ್ರಲ್ಲಿ ವಿಶೇಷವಾಗಿ ಫಾರಿನ್ ಕಮೋಡ್ ಟಾಯ್ಲೆಟ್, 24 ಗಂಟೆ ಶುದ್ಧ ಕುಡಿಯುವ ನೀರು ವ್ಯವಸ್ಥೆ, ಸ್ನಾನಕ್ಕೆ ಬಿಸಿ ನೀರು ಇರುವಂತೆ ವ್ಯವಸ್ಥೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *