ದಾವಣಗೆರೆ: ಸಚಿವರನ್ನು ಮೆಚ್ಚಿಸಲು ಕೃಷಿ ಅಧಿಕಾರಿಗಳು ಕೃಷಿ ಹೊಂಡಕ್ಕೆ ಬೋರ್‌ವೆಲ್ ನೀರು ತುಂಬಿಸಿ ಸಚಿವರನ್ನು ಮೆಚ್ಚಿಸಿದ ಘಟನೆ ಜಿಲ್ಲೆಯ ಈಚಘಟ್ಟ ಗ್ರಾಮದಲ್ಲಿ ನಡೆದಿದೆ.
ಈಚಗಟ್ಟ ಗ್ರಾಮದಲ್ಲಿ ಕೃಷಿ ಸಚಿವ ಶಿವಶಂಕರರೆಡ್ಡಿ ರೈತರ ಜೊತೆ ಸಂವಾದವನ್ನು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮಕ್ಕೂ ಮುಂಚಿತವಾಗಿ ಗ್ರಾಮದ ಮಲ್ಲಿಕಾರ್ಜುನ್ ಎಂಬವರ ಜಮೀನಿನ ಕೃಷಿ ಹೊಂಡಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನೆರವೇರಿಸಿದರು. ಆದರೆ ಮಳೆಯೇ ಇಲ್ಲದ ಜಿಲ್ಲೆಯಲ್ಲಿ ಕೃಷಿ ಹೊಂಡಕ್ಕೆ ಬೋರ್‌ವೆಲ್ ನೀರನ್ನು ತುಂಬಿಸಿ ಸಚಿವರಿಂದ ಮೆಚ್ಚುಗೆ ಪಡಿಯಲು ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಮಳೆ ನೀರಿನ ಮೂಲಕ ಕೃಷಿ ಹೊಂಡ ತುಂಬಿಸುವ ಯೋಜನೆಗೆ ಇದಾಗಿದೆ. ಆದರೆ ಈ ಯೋಜನೆಗೆ ಅಧಿಕಾರಿಗಳೇ ಎಳ್ಳುನೀರು ಬಿಟ್ಟಿದ್ದಾರೆ. ಇದರ ಮಾಹಿತಿ ಅರಿಯದ ಕೃಷಿ ಸಚಿವರು ತುಂಬಿದ್ದ ಕೃಷಿ ಹೊಂಡಕ್ಕೆ ಬಾಗಿನ ಅರ್ಪಿಸಿ ಸಂವಾದ ಕಾರ್ಯಕ್ರಮಕ್ಕೆ ತೆರಳಿದರು. ಅಲ್ಲದೇ ಕೃಷಿ ಸಚಿವರು ಬರುತ್ತಾರೆಂದು ಕೃಷಿ ಹೊಂಡಕ್ಕೆ ಅಧಿಕಾರಿಗಳು ತಂತಿ ಬೇಲಿಯನ್ನು ಸಹ ನಿರ್ಮಿಸಿದ್ದರು.
ನಂತರ ರೈತರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫಲಾನುಭವಿಗಳಿಗೆ ಕೃಷಿ ಭಾಗ್ಯ ಪರಿಕರ ವಿತರಿಸಿ, ಮಾತನಾಡಿದ ಕೃಷಿ ಸಚಿವರು, ಆತ್ಮಹತ್ಯೆ ಮಾಡಿಕೊಂಡು ಸತ್ತವರೆಲ್ಲಾ ಸಾಲಭಾದೆಯಿಂದ ಸಾವನ್ನಪ್ಪಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಕೆಲವರು ತಮ್ಮ ಕೌಟುಂಬಿಕ ತೊಂದರೆ ಹಾಗೂ ಬೇರೆ ಬೇರೆ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇಂತಹ ಆತ್ಮಹತ್ಯೆ ವಿಚಾರಗಳನ್ನು ಮಾಧ್ಯಮಗಳು ವೈಭವಿಕರಿಸುವುದು ಸರಿಯಲ್ಲ. ನಮ್ಮ ಸರ್ಕಾರ ರೈತರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews