ಸಿಸಿಟಿವಿ ಎದುರಲ್ಲೇ ಲಂಚ ಸ್ವೀಕಾರ ಆರೋಪ – ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸವಿತಾ ಸಸ್ಪೆಂಡ್

Public TV
2 Min Read

ಕಲಬುರಗಿ: ಸಿಸಿಟಿವಿ ಕ್ಯಾಮೆರಾ ಎದುರಲ್ಲೇ ಕಲಬುರಗಿ ಕೃಷಿ ಮಾರಾಟ ಇಲಾಖೆಯ (Agricultural Marketing Department) ಸಹಾಯಕ ನಿರ್ದೇಶಕಿ ಸವಿತಾ ನಾಯಕ ಲಂಚ ಸ್ವೀಕರಿಸಿದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಇಲಾಖೆಯ ನಿರ್ದೇಶಕ ಶಿವಾನಂದ ಕಾಪಶಿ ಆದೇಶ ಹೊರಡಿಸಿದ್ದಾರೆ.

ಎಪಿಎಂಸಿಗೆ ಬರುತ್ತಿದ್ದ ವರ್ತಕರಿಂದ ಲಂಚ ಸ್ವೀಕರಿಸುತ್ತಿದ್ದ ದೃಶ್ಯಾವಳಿ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಕುರಿತು ಮಹಾಂತಗೌಡ ಎಂಬುವವರು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಮಾಡಿದ್ದ ಹಿನ್ನೆಲೆಯಲ್ಲಿ ಲಂಚ ಸ್ವೀಕಾರ ಆರೋಪದ ಕುರಿತು ವ್ಯಾಪಕ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಜೇವರ್ಗಿ ಪಟ್ಟಣದಲ್ಲಿ ವರ್ತಕರಿಂದ ಲಂಚ ಸ್ವೀಕರಿಸುತ್ತಿರುವುದು ಪತ್ತೆಯಾಗಿತ್ತು ಎನ್ನಲಾಗಿದೆ.

ಕಚೇರಿ ಸಮಯ ಮುಗಿದ ಬಳಿಕ ಜೀಪ್‍ನಲ್ಲಿ ಬಂದು ಸಹಾಯಕ ನಿರ್ದೇಶಕಿ ಲಂಚ ಸ್ವೀಕರಿಸಿದ್ದರು ಎಂದು ಹೇಳಲಾಗಿದ್ದು, 5 ಲಕ್ಷ ರೂ. ಲಂಚ ಸ್ವೀಕರಿಸಿದ್ದಾರೆ ಎಂದು ರೈತಪರ ಸಂಘಟನೆಯೊಂದು ಆರೋಪ ಮಾಡಿತ್ತು. ಎಪಿಎಂಸಿ ಯಾರ್ಡ್‍ನಿಂದ ಹೊರಹೊಗುವ ಪ್ರತಿ ವಾಹನಕ್ಕೂ ವರ್ತಕರು ತೆರಿಗೆ ಪಾವತಿಸಬೇಕಾಗುತ್ತದೆ. ಹೀಗಿರುವಾಗ, ಒಂದು ವಾಹನದ ತೆರಿಗೆ ಪಾವತಿಸಿ ಉಳಿದ ವಾಹನಗಳಿಗೆ ಪಾವತಿಸದೇ ಕೆಲವು ವರ್ತಕರು ತೆರಿಗೆ ವಂಚಿಸುತ್ತಿದ್ದರು ಎನ್ನಲಾಗಿದ್ದು, ಇಂತಹ ವರ್ತಕರಿಂದ ನಾಯಕ ಲಂಚ ಸ್ವೀಕರಿಸುತ್ತಿದ್ದರು ಎಂಬ ದೂರುಗಳು ಕೇಳಿಬಂದಿವೆ.

ಇನ್ನೂ ಅಮಾನತು ಆದೇಶದ ಜೊತೆಗೆ, ಸವಿತಾ ನಾಯಕ್‌ ಅವರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ, ಸಕ್ಷಮ ಪ್ರಾಧಿಕಾರಿಗಳ ಲಿಖಿತ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಸಹ ಆದೇಶದಲ್ಲಿ ನಿರ್ದೇಶಕ ಶಿವಾನಂದ ಕಟ್ಟಪ್ಪಣೆ ಮಾಡಿದ್ದಾರೆ.

ಬೆಳಕಿಗೆ ಬಂದದ್ದು ಹೇಗೆ?
ಕಲಬುರಗಿ ಜಿಲ್ಲೆಯ ಜೇವರ್ಗಿ, ಅಫಜಲಪುರ, ಚಿತ್ತಾಪುರ, ಯಡ್ರಾಮಿ, ಸೇಡಂ, ಚಿಂಚೋಳಿ ತಾಲೂಕಿನ ವರ್ತಕರು ಮತ್ತು ಹತ್ತಿ ಮಾರಾಟಗಾರರು ಹಾಗೂ ವ್ಯಾಪಾರಿಗಳಿಂದ ಸಹಾಯಕ ನಿರ್ದೇಶಕಿ ಸವಿತಾ ನಾಯಕ ಲಂಚ ಪಡೆದಿದ್ದರು ಎಂಬ ದೂರುಗಳ ಹಿನ್ನೆಲೆಯಲ್ಲಿ ಆರ್‌ಟಿಐ ಅಡಿ ಮನವಿ ಸಲ್ಲಿಸಿ ಪಡೆದಿದ್ದ ಸಿಸಿಟಿವಿ ದೃಶ್ಯಾವಳಿ ತುಣುಕುಗಳನ್ನು ಮಹಾಂತಗೌಡ ಎಂಬುವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಕುರಿತು ದಿನಪತ್ರಿಕೆಯೊಂದರಲ್ಲಿ ವರದಿ ಪ್ರಕಟಗೊಂಡಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ನಿರ್ದೇಶಕ ಶಿವಾನಂದ ಕಾಪಶಿ ಅಮಾನತು ಆದೇಶ ಹೊರಡಿಸಿದ್ದಾರೆ.

Share This Article